ನಾಪೋಕ್ಲು ಮಾ.7 NEWS DESK : ವಿದ್ಯಾರ್ಥಿಗಳೇ ಉತ್ತಮ ಸಮಾಜದ ಆಸ್ತಿ ಎಂದು ಕಡಗದಾಳು ಸರ್ಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಾಸೀರ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಮಡಿಕೇರಿ ತಾಲ್ಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಕೊಡಗು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಮಡಿಕೇರಿ ವಲಯ, ಜಿಲ್ಲಾ ಪಂಚಾಯತ್ ಕೊಡಗು, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ಕಾರಿ ಪ್ರೌಢಶಾಲೆ ಕಡಗದಾಳು ಸಂಯುಕ್ತ ಆಶ್ರಯದಲ್ಲಿ ಕಡಗದಾಳು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರೌಢಾವಸ್ಥೆ ಜೀವನದಲ್ಲಿ ವಿದ್ಯಾರ್ಥಿಗಳ ಮನಸ್ಸು ತುಂಬಾ ಚಂಚಲ. ಈ ವಯಸ್ಸಿನಲ್ಲಿ ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಸ್ವ ನಿಗ್ರಹದೊಂದಿಗೆ ಹತೋಟಿಗೆ ತಂದುಕೊಳ್ಳುವ ಅನಿವಾರ್ಯತೆ ಇದೆ ಎಂದು ಹೇಳಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಶಿಬಿರಾಧಿಕಾರಿ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಪಿ.ಪಿ.ನಂದಕುಮಾರ್ ಮಾತನಾಡಿ ಇದುವರೆಗೆ ಕರ್ನಾಟಕ ರಾಜ್ಯದ 19,500 ಶಾಲಾ ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ನಡೆಸಿ 21 ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡಿರುತ್ತಾರೆ. ಜನಜಾಗೃತಿ ವೇದಿಕೆಯ ಮುಖೇನ ಸಮುದಾಯದ ಸಹಭಾಗಿತ್ವದೊಂದಿಗೆ ಇದುವರೆಗೆ 1908 ಮದ್ಯವರ್ಜನ ಶಿಬಿರಗಳನ್ನು ನಡೆಸಿ 1 ಲಕ್ಷದ 50 ಸಾವಿರ ಮದ್ಯವ್ಯಸನಿಗಳನ್ನು ವ್ಯಸನಮುಕ್ತಗೊಳಿಸಲಾಗಿದೆ. ಮಾದಕ ವ್ಯಸನವೆಂಬುದೊಂದು ರೋಗ. ವಿಶ್ವ ಆರೋಗ್ಯ ಸಂಸ್ಥೆಯ ಕಳೆದ ಸಂಶೋಧನೆಯ ಪ್ರಕಾರ ನಮ್ಮ ಭಾರತ ದೇಶದಲ್ಲಿ ಒಂದು ವರ್ಷಕ್ಕೆ 5 ಲಕ್ಷ ಜನರು ಮದ್ಯಪಾನದಿಂದ ಮರಣ ಹೊಂದಿದರೆ 14.5 ಲಕ್ಷ ಜನರು ಮಾದಕ ದ್ರವ್ಯ, ಮಾದಕ ವ್ಯಸನ ಅಥವಾ ಇನ್ನಿತರ ಚಟಗಳಿಂದ ಬಲಿಯಾಗುತ್ತಿರುವುದು ಶೋಚನೀಯವಾಗಿದೆ. ಪ್ರಪಂಚದ ಐದು ಭೀಕರವಾದ ಖಾಯಿಲೆಗಳಲ್ಲಿ ಮಾದಕ ವ್ಯಸನವೂ ಒಂದು ಎಂದರು. ವಿದ್ಯಾರ್ಥಿಗಳ ವಯಸ್ಸು ಹದಿಹರೆಯದ ವಯಸ್ಸು. ತಂದೆ – ತಾಯಂದಿರ ಒತ್ತಡ, ಸ್ನೇಹಿತರ ಒತ್ತಡ, ಜೀವನ ಶೈಲಿ, ಮಾಧ್ಯಮ, ಆರ್ಥಿಕ ಸ್ವಾತಂತ್ರ್ಯ, ಪ್ರೀತಿಯ ಕೊರತೆ, ಅನಾರೋಗ್ಯ, ಪಾಶ್ಚಾತ್ಯ ಸಂಸ್ಕೃತಿ, ಸಾಹಸ ಪ್ರವೃತ್ತಿ, ನಕಾರಾತ್ಮಕ ಚಿಂತನೆಗಳು, ಈ ಎಲ್ಲಾ ಕಾರಣಗಳಿಂದಾಗಿ ಅಮಲು ಪದಾರ್ಥ ಹಾಗೂ ಇನ್ನಿತರ ವ್ಯಸನಗಳಿಗೆ ಬಲಿಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದರು. ಸಪ್ತ ವ್ಯಸನಗಳಲ್ಲಿ ಮಾದಕ ವ್ಯಸನ ಮೊದಲ ಮೆಟ್ಟಿಲು ಈ ಮೆಟ್ಟಿಲನ್ನು ಜಾರಿದರೆ ಉಳಿದೆಲ್ಲಾ ಮೆಟ್ಟಿಲುಗಳು ತನ್ನಿಷ್ಟಕ್ಕೆ ಜಾರುತ್ತವೆ. ( ಮಾದಕ ವ್ಯಸನ, ಮಾಂಸ, ಮಾನಿನಿ, ಜೂಜುಜುಗಾರಿ, ಮೃಗವಿಹಾರ, ದಿವಾಸ್ವಪ್ನ ಮತ್ತು ದಿವಾಮೈಥುನ ) ಸಮಾಜದಲ್ಲಿ ವ್ಯಸನಕ್ಕೆ ಬಲಿ ಬಿದ್ದವರಿಗೆ ಅಪಘಾತ, ಆತ್ಮಹತ್ಯೆ ಮತ್ತು ಅಕಾಲಿಕ ಮರಣ ಇವುಗಳು ಸರ್ವೇ ಸಾಮಾನ್ಯ ಎಂದು ತಿಳಿಸಿದರು. ಅತಿಯಾದ ಮೊಬೈಲ್ ಬಳಕೆ ಮತ್ತು ಸಾಮಾಜಿಕ ಜಾಲತಾಣ ದಿಂದಲೂ ವಿದ್ಯಾರ್ಥಿಗಳ ಮನೋಸ್ಥಿತಿ ಹಾಳಾಗುತ್ತದೆ. ವಿದ್ಯಾರ್ಥಿಗಳು ಇದರ ಬಗ್ಗೆಯೂ ಗಮನ ಹರಿಸಬೇಕು. ಇವುಗಳಿಂದ ಹೊರಬರಲು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎಚ್ಚೆತ್ತುಕೊಳ್ಳುವ ಅವಶ್ಯಕತೆಯಿದೆ. ದೃಢ ನಿರ್ಧಾರ, ಸಂಧಾನ ಕೌಶಲ, ರಚನಾತ್ಮಕ ಚಿಂತನೆ, ವಿಮರ್ಶಾತ್ಮಕ ಚಿಂತನೆ, ಸಂವಹನ ಕುಶಲತೆ ವ್ಯಕ್ತಿ – ವ್ಯಕ್ತಿ ಸಂಬಂಧ, ಸಮಯ ಪಾಲನೆ, ನಡತೆ, ಗೌರವ, ಆತ್ಮಸ್ಥೈರ್ಯ, ಸಮಸ್ಯಾ ಪರಿಹಾರ, ಪರಾನುಭೂತಿ, ದೃಢ ನಿಲುವು, ಭಾವ ನಿಯಂತ್ರಣ, ಧನಾತ್ಮಕ ಚಿಂತನೆ, ಕರ್ತವ್ಯ ಪ್ರಜ್ಞೆ, ಮತ್ತು ಪ್ರೀತಿ ವಿಶ್ವಾಸಗಳಿಂದ ಮಾತ್ರ ವ್ಯಸನ ಮುಕ್ತ ಜೀವನವನ್ನು ನಡೆಸಲು ಸಾಧ್ಯ. ದೈವಶಕ್ತಿ, ಗುರುಶಕ್ತಿ, ಜನಶಕ್ತಿ, ಇಚ್ಛಾಶಕ್ತಿ ಈ ನಾಲ್ಕು ಪ್ರಮುಖ ಅಂಶಗಳಲ್ಲಿ ನಂಬಿಗಳನ್ನಿಟ್ಟು ನಡೆದರೆ ವಿದ್ಯಾರ್ಥಿ ಒಬ್ಬ ಆದರ್ಶ ವಿದ್ಯಾರ್ಥಿಯಾಗಿ ಬೆಳೆದು ತನ್ನ ಜೀವನವನ್ನು ತಾನೇ ರೂಪಿಸಿಕೊಳ್ಳುತ್ತಾನೆ. ಆರೋಗ್ಯವಂತ ಶರೀರವೇ ಆತ್ಮದ ಅರಮನೆ. ಅನಾರೋಗ್ಯವಂತ ಶರೀರವೇ ಆತ್ಮದ ಸೆರೆಮನೆ. ಆರೋಗ್ಯಪೂರ್ಣ ಸಮಾಜ ಅಥವಾ ದುಶ್ಚಟಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ. ಬಹುತೇಕ ಯುವಜನತೆ ಬಾಹ್ಯ ವ್ಯಕ್ತಿಗಳ ಪ್ರಭಾವದಿಂದ ದುಶ್ಚಟಗಳಿಗೆ ದಾಸರಾಗುತ್ತಿದ್ದು, ಇದನ್ನು ತಡೆಗಟ್ಟಲು ಸಂಕಲ್ಪ ಮಾಡೋಣ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಗದಾಳು ಒಕ್ಕೂಟದ ಅಧ್ಯಕ್ಷರು ಹಾಗೂ ನ್ಯಾಯವಾದಿಗಳಾದ ಅರುಣ್ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಭಾರತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಿಕೇರಿ ತಾಲೂಕಿನ ಲೆಕ್ಕ ಪರಿಶೋಧಕರಾದ ಶ್ರೀನಿವಾಸ್, ಕಡಗದಾಳು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಎಲ್‍ಸಿ ಶಾಲೆಯ 8ನೇ ಮತ್ತು 9ನೇ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡರು. ಶಾಲಾ ಶಿಕ್ಷಕಿ ಆರತಿ ಸ್ವಾಗತಿಸಿ, ನಿರೂಪಿಸಿದರು. ವಿದ್ಯಾರ್ಥಿನಿ ಅರ್ಷಿತಾ ವಂದಿಸಿದರು.
ವರದಿ : ದುಗ್ಗಳ ಸದಾನಂದ.











