
ಮಡಿಕೇರಿ ಮಾ.7 NEWS DESK : ತನ್ನ ಉಪಟಳದ ಮೂಲಕವೇ ಸೋಮವಾರಪೇಟೆ ತಾಲ್ಲೂಕಿನ ವಿವಿಧ ಗ್ರಾಮಗಳ ಜನರ ನಿದ್ದೆಗೆಡಿಸಿದ್ದ “ಕಾಜೂರು ಕರ್ಣ”ನೆಂದೇ ಹೆಸರುವಾಸಿಯಾಗಿದ್ದ ಕಾಡಾನೆಗೆ ಈಗ ನೋವಿನಿಂದ ನರಳುವ ಮತ್ತು ಕಣ್ಣೀರಿನಲ್ಲೇ ಕಾಲ ಕಳೆಯುವ ದುಸ್ಥಿತಿ ಬಂದೊದಗಿದೆ.
ಅರಣ್ಯದಲ್ಲಿ ಅರಸನಂತೆ ಮೆರೆದು ಸೋಮವಾರಪೇಟೆಯ ಕಾಜೂರು ಗ್ರಾಮಸ್ಥರಲ್ಲಿ ನಿತ್ಯ ಆತಂಕ ಮೂಡಿಸುತ್ತಿದ್ದ ಒಂಟಿಸಲಗ ಕಳೆದ ಒಂದು ತಿಂಗಳಿನಿಂದ ದುಬಾರೆ ಸಾಕಾನೆ ಶಿಬಿರದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾನೆ. ಬಲಾಢ್ಯ ದೇಹವನ್ನು ಹೊಕ್ಕಿರುವ ಮದ್ದುಗುಂಡುಗಳೇ ಕರ್ಣನ ಕಣ್ಣೀರಿಗೆ ಪ್ರಮುಖ ಕಾರಣವಾಗಿದೆ. ಇದೇ ಫೆ.1 ರಂದು ಬಂಧಿಯಾದ ಕರ್ಣ ದುಬಾರೆ ಸಾಕಾನೆ ಶಿಬಿರದ ಕ್ರಾಲ್ ನಲ್ಲಿ ರೋಧಿಸುತ್ತಿದ್ದ. ಈತನನ್ನು ಪರೀಕ್ಷೆಗೆ ಒಳಪಡಿಸಿದಾಗ ಕಾಲುಗಳಲ್ಲಿ ಗುಂಡು ಇರುವುದು ಗೋಚರಿಸಿದೆ. ನಂತರದ ದಿನಗಳಲ್ಲಿ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಳ್ಳುತ್ತಾ ಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಶು ವೈದ್ಯರು ಸಾಕಾನೆ ಶಿಬಿರದ ಕ್ರಾಲ್ ಒಳಗೆಯೇ ಕರ್ಣನಿಗೆ ಚಿಕಿತ್ಸೆ ಆರಂಭಿಸಿದರು. ಗುಂಡೇಟಿನಿಂದ ಹಿಂಬದಿಯ ಕಾಲಿನಲ್ಲಿ ದೊಡ್ಡ ಗಾಯವಾಗಿ ಆ ಭಾಗ ಕೊಳೆಯುತ್ತಿತ್ತು. ಇದನ್ನು ಗಮನಿಸಿದ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಎರಡು ಮದ್ದು ಗುಂಡುಗಳು, ಕೊಳೆತ ಮಾಂಸದ ಭಾಗ ಮತ್ತು ಕೀವನ್ನು ಹೊರ ತೆಗೆದಿದ್ದು, ಕ್ರಾಲ್‍ನಲ್ಲಿಯೇ ಚಿಕಿತ್ಸೆ ಮುಂದುವರೆದಿದೆ. ದೇಹದ ಇತರ ಭಾಗಗಳಲ್ಲೂ ಗುಂಡು ಹೊಕ್ಕಿರುವ ಗುರುತುಗಳು ಗೋಚರಿಸಿದೆ. ಕರ್ಣ ಇನ್ನೂ ಕೂಡ ಸರಿಯಾಗಿ ಪಳಗದೇ ಇರುವುದರಿಂದ ಅತ್ಯಂತ ತ್ರಾಸದಾಯಕದ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಯ ಕೃಷಿಕರು ಹಾಗೂ ಗ್ರಾಮಸ್ಥರಿಗೆ ತನ್ನ ಉಪಟಳದ ಮೂಲಕವೇ ಕಷ್ಟ, ನಷ್ಟ ಉಂಟು ಮಾಡುತ್ತಿದ್ದ 40 ವರ್ಷದ ‘ಕಾಜೂರು ಕರ್ಣ’ನನ್ನು 1 ತಿಂಗಳ ಹಿಂದೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿತ್ತು. ಈತನ ಸೆರೆಗೆ ಒಂದು ವರ್ಷದ ಹಿಂದೆಯೇ ಅನುಮತಿ ದೊರಕಿತ್ತು. ಆದರೆ ಕಾಜೂರು ಕರ್ಣ ಅರಣ್ಯ ಇಲಾಖೆಯ ಕಾರ್ಯಾಚರಣೆ ವೇಳೆ ಚಾಣಾಕ್ಷತನದಿಂದ ತಪ್ಪಿಸಿಕೊಂಡು ಅರಣ್ಯ ಪ್ರದೇಶ ಅಥವಾ ಕಾಫಿ ತೋಟಗಳಲ್ಲಿ ಆಶ್ರಯ ಪಡೆಯುತ್ತಿತ್ತು. ಇತ್ತೀಚೆಗೆ ಉಪಟಳ ಮಿತಿ ಮೀರಿದ ಕಾರಣ ಕರ್ಣನನ್ನು ಭಾರೀ ಕಾರ್ಯಾಚರಣೆಯ ಮೂಲಕ ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು. ದುಬಾರೆ ಸಾಕಾನೆ ಶಿಬಿರದ ಹರ್ಷ, ಪ್ರಶಾಂತ, ಸುಗ್ರೀವ, ಧನುಂಜಯ ಹಾಗೂ ಜಯ ಮಾರ್ತಾಂಡ ಹೆಸರಿನ ಸಾಕಾನೆಗಳು ಕಾಜೂರು ಕರ್ಣನನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ಸಾಕಾನೆಗಳೊಂದಿಗೆ ಹೊಂದಿಕೊಳ್ಳಲಾಗದ ಪರಿಸ್ಥಿತಿಯಲ್ಲಿರುವ ಕಾಜೂರು ಕರ್ಣನ ನೋವಿನ ಕಣ್ಣೀರು ಈಗ ಅರಣ್ಯರೋಧನವೆನಿಸಿದೆ.











