


ಮಡಿಕೇರಿ ಮಾ.7 NEWS DESK : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲಜೀವನ್ ಮಿಷನ್ ಯೋಜನೆಯ ಕುರಿತು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷದತ್ತ ಚಾಮರಾಜ ಒಡೆಯರ್ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ನಗರದ ಜಿಲ್ಲಾಡಳಿತ ಭವನದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಪಾಲಕ ಎಂಜಿನಿಯರ್ ಆರ್.ಭಾಸ್ಕರ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 457 ಗ್ರಾಮೀಣ ಜನವಸತಿ ಕಾಮಗಾರಿಗಳಿದ್ದು, ಇದರಲ್ಲಿ ಒಟ್ಟು 343 ಕಾಮಗಾರಿಗಳು ಪೂರ್ಣಗೊಂಡಿದೆ. ಹಾಗೆಯೇ 112 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದರು. ನಂತರ ಸಂಸದ ಯದುವೀರ್ ಒಡೆಯರ್ ಮಾತನಾಡಿ, ಅಂಕಿ ಅಂಶಗಳ ಪ್ರಕಾರ ಪ್ರಗತಿ ಸಾಧಿಸಿದ್ದು, ಕೆಲವು ಜನವಸತಿಗಳಲ್ಲಿ ಟ್ಯಾಂಕ್, ಪೈಪ್‍ಲೈನ್ ಮೂಲಕ ನಲ್ಲಿ ಸಂಪರ್ಕ ಕಲ್ಪಿಸಿರುವುದಿಲ್ಲ ಎಂದು ದೂರುಗಳು ಬಂದಿರುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿ ಸ್ಪಷ್ಟನೆ ಪಡೆದರು. ಕಾರ್ಯಪಾಲಕ ಎಂಜಿನಿಯರ್ ಭಾಸ್ಕರ್ ಮಾತನಾಡಿ ಕೊಡಗಿನಲ್ಲಿ ಯಾವುದೇ ಬಹುಗ್ರಾಮ ಕುಡಿಯುವ ನೀರು ಯೋಜನೆ ಇರುವುದಿಲ್ಲ, ಬೇಸಿಗೆಯಲ್ಲಿ ಬೋರ್‍ವೆಲ್‍ಗಳು ಬತ್ತಿ ಹೋಗುತ್ತಿದ್ದು, ಶಾಶ್ವತವಾಗಿ ನದಿ ನೀರನ್ನು ಶುದ್ಧೀಕರಿಸಿ ಕೊಡಗು ಜಿಲ್ಲೆಯ ಹಲವಾರು ಗ್ರಾಮಗಳಿಗೆ ಶುದ್ಧ ನೀರನ್ನು ಸರಬರಾಜು ಮಾಡಲಾಗಿದೆ ಎಂದು ತಿಳಿಸಿದರು. ರೂ.885.35 ಕೋಟಿಗಳಿಗೆ ಒಟ್ಟು 12 ಕಾಮಗಾರಿ ಯೋಜನೆಗಳ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯಕ್ಕೆ ಪತ್ರ ಬರೆದು, ಚರ್ಚಿಸಿ, ಅನುಮೋದನೆ ದೊರಕಿಸಿಕೊಡಲು ಕೋರಿದರು. 2024-25 ನೇ ಸಾಲಿನ Contingency ಯೋಜನೆಯಡಿಯಲ್ಲಿ ರೂ.5 ಕೋಟಿ ಪ್ರಸ್ತಾವನೆಯನ್ನು ಸಹ ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು. ಕೇಂದ್ರ ಸರ್ಕಾರದೊಂದಿಗೆ ಸಂಪರ್ಕಿಸಿ, ತುರ್ತಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಮೋದನೆ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದರು. ಮುಂದಿನ ದಿಶಾ ಸಭೆಯೊಳಗೆ ಸಂಪಾಜೆ ಮತ್ತು ಮರಗೋಡು ಜೆ.ಜೆ.ಎಂ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿ ದಿಶಾ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಗ್ರಾ,ಕು.ನೀ.ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಆರ್.ಭಾಸ್ಕರ್(ಮಡಿಕೇರಿ), ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೀರೇಂದ್ರ. ಟಿ.ಪಿ.(ಸೋಮವಾರಪೇಟೆ), ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಪುಟ್ಟಸ್ವಾಮಿ, ಸಹಾಯಕ ಹಾಗೂ ಕಿರಿಯ ಎಂಜಿನಿಯರ್‍ಗಳು ಇತರರು ಭಾಗವಹಿಸಿದ್ದರು.