


ನಾಪೋಕ್ಲು ಮಾ.10 NEWS DESK : ಕೋಟೇರಿಯ ಕಾಫಿ ತೋಟದಲ್ಲಿ ಕಾಡಾನೆ ದಾಳಿ ಮಾಡಿ, ಬಾಳೆ, ಕಾಫಿ, ಅಡಿಕೆ ಗಿಡಗಳನ್ನು ನಾಶಪಡಿಸಿ, ಆತಂಕ ಸೃಷ್ಟಿಸಿದೆ. ಕೊಳಕೇರಿ ಗ್ರಾಮದ ಕೋಟೆರಿಯ ಕಾಫಿ ತೋಟಗಳಲ್ಲಿ ರಾತ್ರಿ ಅಡ್ಡಾಡಿದ ಕಾಡಾನೆ ಅಪ್ಪಾರಂಡ ಸುಧೀರ್ ಅಪ್ಪಯ್ಯ ಅವರ ಕಾಫಿ ತೋಟಗಳಲ್ಲಿದ್ದ ತೆಂಗು, ಬಾಳೆ, ಅಡಿಕೆ, ಕಾಫಿ ಸೇರಿದಂತೆ ಕಬ್ಬಿಣದ ಗೇಟನ್ನು ಮುರಿದು ಹಾಕಿ ನಷ್ಟಪಡಿಸಿದೆ. ಅಲ್ಲದೇ ಇನ್ನಿತರ ತೋಟಕ್ಕೂ ದಾಲಿ ಮಾಡಿ ನಷ್ಟ ಸಂಭವಿಸಿದ್ದು, ಕಾಡಾನೆ ಅಕ್ಕಪಕ್ಕದ ತೋಟಗಳಲ್ಲಿ ಬೀಡು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಕಾಡಾನೆಗಳ ಹಾವಳಿಯಿಂದ ನೆಮ್ಮದಿ ಇಲ್ಲದಂತ್ತಾಗಿದೆ ಎಂದು ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಕಾಫಿ ಕೊಯ್ಲು ಮುಗಿಯುವ ಹಂತ ತಲುಪಿದ್ದು, ತೋಟಗಳಿಗೆ ನೀರು ಹಾಯಿಸುವ ಕೆಲಸಕ್ಕೆ ಬೆಳೆಗಾರರು ಮುಂದಾಗಿದ್ದಾರೆ. ಕಾಡಾನೆ ತೋಟಗಳಲ್ಲಿ ಸುತ್ತಾಡುತ್ತಿರುವುದರಿಂದಾಗಿ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಬೆಳೆಗಾರರು ಆಂತಕ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಗ್ರಾಮಸ್ಥರು ಎಚ್ಚರಿಕೆಯಲ್ಲಿರುವಂತೆ ಮನವಿ ಮಾಡಿಕೊಂಡಿದ್ದಾರೆ.
ವರದಿ : ದುಗ್ಗಳ ಸದಾನಂದ.