ಮಡಿಕೇರಿ NEWS DESK ಜೂ.6 : ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು, ಭವ್ಯ ಭವಿಷ್ಯದ ದೃಷ್ಟಿಯಿಂದ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಡುಗೊರೆಯಾಗಿ ನೀಡಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪ್ರಬಾರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶÀ ಬಿ.ಪರಮೇಶ್ವರ ಪ್ರಸನ್ನ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆ ಸಂಘಟನೆಯ ಇಕೋ ಕ್ಲಬ್‌ಗಳು, ಅರಣ್ಯ ಇಲಾಖೆ, ಕೊಡಗು ಜಿಲ್ಲೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ, ಮಡಿಕೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಗರಾಭಿವೃದ್ಧಿ ಕೋಶ, ಭಾರತ್ ಸ್ಕೌಟ್ಸ್, ಗೈಡ್ಸ್ನ ಜಿಲ್ಲಾ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ‘ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯ ಕೊನೆಗಾಣಿಸಿ’ ಎಂಬ ಧ್ಯೇಯ ವಾಕ್ಯದಡಿ ಗುರುವಾರ ನಗರದ ಗಾಂಧಿ ಭವನದಲ್ಲಿ ವಿಶ್ವ ಪರಿಸರ ದಿನಾಚರಣೆ ನಡೆಯಿತು. ಗಾಂಧಿ ಭವನದ ಆವರಣದಲ್ಲಿ ಗಿಡ ನೆಟ್ಟು ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ನ್ಯಾಯಾಧೀಶರು ಪರಿಸರ ದಿನಾಚರಣೆ ಆಚರಿಸುವ ಮೂಲಕ ಜನರಲ್ಲಿ ಪರಿಸರ ಪ್ರಜ್ಞೆ ಬೆಳೆಸಲಾಗುತ್ತಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕ ಅರಿವು ಮೂಡಿಸಲಾಗುತ್ತಿದೆ. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು. ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಪ್ರತಿಪಾದಿಸಿದರು. ತಾಯಿ ಮಾತೆ, ಪ್ರಕೃತಿ ಮಾತೆ, ದೇಶ ಮಾತೆ ಎಂಬುದನ್ನು ಯಾರೂ ಸಹ ಮರೆಯಬಾರದು, ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು. ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳು, ಪ್ರಕೃತಿ ಕೇಂದ್ರಗಳು ಹಾಗೂ ಬೆಟ್ಟಗುಡ್ಡಗಳಲ್ಲಿ ಪರಿಸರ ಶುಚಿತ್ವಕ್ಕೆ ಗಮನಹರಿಸಬೇಕು, ಯೂಸ್ ಅಂಡ್ ತ್ರೋ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಪ್ರತಿ ಜೀವಿಗೂ ತೊಂದರೆ. ಭೂಮಿಗೆ 20 ಲಕ್ಷ ದಷ್ಟು ಪ್ಲಾಸ್ಟಿಕ್ ಬಾಟಲ್ ಬಿಸಾಕಲಾಗುತ್ತಿದೆ. ಇದು ನದಿ, ಹಳ್ಳಕೊಳ್ಳ, ಸೇರುತ್ತದೆ. ಇದರಿಂದ ಹಲವು ತೊಂದರೆಗೆ ಕಾರಣವಾಗುತ್ತದೆ ಎಂದರು. ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು. ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ಹಾನಿ ತಡೆಗಟ್ಟಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ನಾವು ನಮ್ಮ ನೆಲ-ಜಲ, ಅರಣ್ಯ ಹಾಗೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಹಲವು ಶತಮಾನಗಳಿಂದ ಪೂರ್ವಿಕರು ಪರಿಸರ ಸಂರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಅದನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕು. ಪರಿಸರ ದಿನವು ಒಂದು ದಿನಕ್ಕೆ ಸೀಮಿತವಲ್ಲ. ಇದನ್ನು ನಿರಂತರವಾಗಿ ಇರಬೇಕು. ವಿದ್ಯಾರ್ಥಿಗಳು ಪರಿಸರ ರಾಯಭಾರಿಗಳಾಗಿ ಕೆಲಸ ನಿರ್ವಹಿಸಬೇಕು ಎಂದರು. ಮಡಿಕೇರಿಯು ಶುದ್ಧ ಪರಿಸರ ಹೊಂದಿರುವ ನಗರವಾಗಿ ಹೆಸರಾಗಿದೆ. ಅದನ್ನು ಕಾಪಾಡಿಕೊಂಡು ಹೋಗಬೇಕು. ಆ ನಿಟ್ಟಿನಲ್ಲಿ ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ಮಾತನಾಡಿ, ನಾವು ಅಂಗಡಿ, ಮಾರುಕಟ್ಟೆಗೆ ತೆರಳುವಾಗ ಪ್ಲಾಸ್ಟಿಕ್ ಬದಲಿಗೆ ಪರಿಸರ ಸ್ನೇಹಿ ವಸ್ತುಗಳ ಬಟ್ಟೆ ವಸ್ತುಗಳನ್ನು ಬಳಸುವಂತಾಗಬೇಕು ಎಂದರು. ಕಸದ ನಿರ್ವಹಣೆ ಮನೆಯಿಂದಲೇ ಆರಂಭವಾಗಬೇಕು. ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಬೇರ್ಪಡಿಸುವ ಮೂಲಕ ಮಾಲಿನ್ಯವನ್ನು ತಡೆಯಬೇಕು. ವಿದ್ಯಾರ್ಥಿಗಳು ತಾಯಿಯ ಹೆಸರಿನಲ್ಲಿ ಗಿಡ ನೆಟ್ಟು ಬೆಳೆಸುವ ಮೂಲಕ ಸ್ವಚ್ಛ ಪರಿಸರವನ್ನು ಕಾಪಾಡಬೇಕು ಎಂದು ಸಲಹೆ ನೀಡಿದರು. ಪರಿಸರಕ್ಕೆ ಯಾವುದೇ ಧಕ್ಕೆಯನ್ನುಂಟು ಮಾಡದೇ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು ಹಾಗೂ ನಾವು ನೆಟ್ಟ ಗಿಡವನ್ನು ಪೋಷಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಹತ್ತಿರದ ಸ್ಥಳಗಳಿಗೆ ವಾಹನ ಬಿಟ್ಟು ನಡೆದುಕೊಂಡು ಹೋಗುವುದು ಹಾಗೂ ಬೈಸಿಕಲ್ ಬಳಕೆ ಮಾಡುವ ಮೂಲಕ ಮಾಲಿನ್ಯ ತಡೆಯಬೇಕಿದೆ ಎಂದು ಶುಭ ಅವರು ವಿವರಿಸಿದರು. ಪ್ರಕೃತಿ ನಡುವೆ ಬೆಳೆದ ರಾಷ್ಟ್ರಕವಿ ಕುವೆಂಪು ಅವರ ಕವಿಶೈಲದ ಪ್ರಕೃತಿ ಪ್ರೇಮ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರು ಪ್ರಕೃತಿ-ಪರಿಸರದ ಮೇಲೆ ಹೊಂದಿದ್ದ ಅವರ ಅಪಾರ ಕಾಳಜಿ ಮತ್ತು ಅವರ ಪರಿಸರದ ಕವನಗಳನ್ನು ಹೇಳಿ ಪರಿಸರ ಸಂರಕ್ಷಣೆಯ ಬಗ್ಗೆ ಬೆಳಕು ಚೆಲ್ಲಿದರು. ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರು ಮಾತನಾಡಿ, ಸುಸ್ಥಿರ ಪರಿಸರ ಸಂರಕ್ಷಣೆ ಮಾಡುವುದು, ಪ್ರಕೃತಿಯನ್ನು ಉಳಿಸುವುದು ಎಲ್ಲರ ಕರ್ತವ್ಯವಾಗಿದೆ. ಪ್ಲಾಸ್ಟಿಕ್‌ನಿಂದ ಉಂಟಾಗುವ ಮಾಲಿನ್ಯ ತಡೆಗಟ್ಟಿ ಕೊನೆಗೊಳಿಸುವುದು ಬಹಳ ಮುಖ್ಯ ಎಂದರು. ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರೂ ಆದ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ನಾವು ನಾಳಿನ ಉತ್ತಮ ಭವಿಷ್ಯಕ್ಕಾಗಿ ಅರಣ್ಯ, ಪರಿಸರ, ಜೀವ- ವೈವಿಧ್ಯವನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಲು ಸಂಕಲ್ಪ ತೊಡಬೇಕು ಎಂದು ಮನವಿ ಮಾಡಿದರು. ಸ್ಕೌಟ್ಸ್ನ ಆಯುಕ್ತ ಜಿಮ್ಮಿ ಸಿಕ್ವೇರಾ ಅವರು ಮಾತನಾಡಿ, ಇರುವುದೊಂದೇ ಭೂಮಿ, ಇದರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಹೆಚ್ಚಿನ ಅರಿವು ಮೂಡಿಸಿಕೊಳ್ಳಬೇಕು. ನಾವು ಬೆಟ್ಟ-ಗುಡ್ಡಗಾಡು ಸಂರಕ್ಷಿಸುವ ಮೂಲಕ ಭೂಮಿ ಸಂರಕ್ಷಿಸಬೇಕಿದೆ ಎಂದರು. ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ: ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯ ಕೊನೆಗಾಣಿಸಿ ಎಂಬ ಧ್ಯೇಯ ವಾಕ್ಯದ ಕುರಿತಂತೆ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು “ಪರಿಸರ ಸಂರಕ್ಷಣೆ-ನಮ್ಮೆಲ್ಲರ ಹೊಣೆ” ಹಸಿರೇ ಉಸಿರು, ಜಲವೇ ಜಲವೇ ಜೀವಜಾಲ, “ಪ್ಲಾಸ್ಟಿಕ್ ತ್ಯಜಿಸಿ ಮಾಲಿನ್ಯ ತಡೆಯಿರಿ”, ಬೈಸಿಕಲ್ ಬಳಸಿ ಮಾಲಿನ್ಯ ತಡೆಯಿರಿ, ಜೀವಿ- ಸಂಕುಲಗಳು ಮತ್ತು ಪಶ್ಚಿಮ ಘಟ್ಟಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬಿತ್ಯಾದಿ ಪರಿಸರಪೂರಕ ಘೋಷಣೆಗಳುಳ್ಳ ಭಿತ್ತಿ ಫಲಕಗಳನ್ನು ಹಿಡಿದು ಪರಿಸರ ಸಂರಕ್ಷಣೆ ಕುರಿತು ಪರಿಸರ ಅಧಿಕಾರಿ ಎಂ.ಜಿ.ರಘುರಾಮ್ ಜಾಗೃತಿ ಮೂಡಿಸಿದರು. ಇದಕ್ಕೂ ಮೊದಲು ಗಾಂಧಿ ಭವನದ ಆವರಣದಲ್ಲಿ ಅತಿಥಿಗಳು ಅರಣ್ಯ ಸಸಿನೆಟ್ಟರು. ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲಾ ಮಕ್ಕಳು ಸೇರಿದಂತೆ ಸ್ಕೌಟ್ಸ್ ಮತ್ತು ಗೈಡ್ಸ್ನ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಇದ್ದರು. ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕರಾದ ಬಿ.ಬಸಪ್ಪ, ಮಡಿಕೇರಿ ವಕೀಲರ ಸಂಘದ ಅಧ್ಯಕ್ಷರಾದ ಎಂ.ಎ.ನಿರAಜನ, ಪೌರಾಯುಕ್ತರಾದ ಎಚ್.ಆರ್.ರಮೇಶ್, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಎಂ.ಜಿ.ಸವಿತಾ, ಜಿಲ್ಲಾ ಗೈಡ್ಸ್ ವಿಭಾಗದ ಆಯುಕ್ತೆ ರಾಣಿ ಮಾಚಯ್ಯ, ಜಿಲ್ಲಾ ಸಂಸ್ಥೆಯ ಸಹ ಕಾರ್ಯದರ್ಶಿ ಬೊಳ್ಳಜಿರ ಅಯ್ಯಪ್ಪ, ತರಬೇತಿ ಆಯುಕ್ತ ಕೆ.ಯು.ರಂಜಿತ್, ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಮಡಿಕೇರಿ ವಲಯದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್, ಸಂಸ್ಥೆಯ ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ ಇದ್ದರು. ಪ್ರೊಬೇಷನರಿ ಎಸಿಎಫ್ ಲತಾಭಟ್, ಡಿಆರ್‌ಎಫ್‌ಓ ಗಳಾದ ಸುನಿಲ್ ಗುನಗಾ, ಮಂಜೇಗೌಡ, ನವೀನ್, ಅರಣ್ಯ ರಕ್ಷಕ ಮಂಜುನಾಥ್, ಅರಣ್ಯ ವೀಕ್ಷಕ ವಾಸು, ಅರಣ್ಯ ಇಲಾಖೆಯ ತುರ್ತು ಸ್ಪಂದನ ತಂಡ( ಆರ್‌ಆರ್‌ಟಿ) ದ ಸದಸ್ಯರಾದ ಶರತ್, ತಿಮ್ಮಯ್ಯ, ಕಾರ್ತಿಕ್, ಕುಮಾರೇಶ್, ವಚನ್, ಮಹೇಶ್, ಪ್ರವೀಣ್ ಇದ್ದರು. ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಡಿ.ಎಸ್.ಜಯಪ್ಪ ನಿರೂಪಿಸಿದರು, ಜಿಲ್ಲಾ ಸ್ಕೌಟ್ಸ್ನ ತರಬೇತಿ ಆಯುಕ್ತ ಕೆ.ಯು.ರಂಜಿತ್ ವಂದಿಸಿದರು.











