ಮಡಿಕೇರಿ ಜೂ.24 NEWS DESK : ಗ್ರಾಮ ಪಂಚಾಯ್ತಿಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ವೈಜ್ಞಾನಿಕ ರೂಪದ ಕನಿಷ್ಟ ವೇತನ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಮತ್ತು ಕಾರ್ಮಿಕ ಕಾನೂನುಗಳ ತಿದ್ದುಪಡಿಯನ್ನು ವಿರೋಧಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘ(ಸಿಐಟಿಯು ಸಂಯೋಜಿತ) ಜಿಲ್ಲಾ ಘಟಕ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ ಸಂಘದ ಸದಸ್ಯರು ಹಾಗೂ ಗ್ರಾ.ಪಂ ನೌಕರರು ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು. ಸಂಘÀಟನೆಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯ್ತಿ ನೌಕರರ ಸಂಘದಿಂದ ರಾಜ್ಯದಾದ್ಯಂತ ಆಯೋಜಿತ ಮುಷ್ಕರದ ಭಾಗವಾಗಿ ಇಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಹಲವಾರು ವರ್ಷಗಳಿಂದ ಗ್ರಾಮ ಪಂಚಾಯ್ತಿಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಇಲ್ಲಿಯವರೆಗು ಸರ್ವೋಚ್ಛ ನ್ಯಾಯಾಲಯದ ಸೂಚನೆಗಳಿದ್ದರು ಕನಿಷ್ಟ ವೇತನ ಪಾವತಿಯಾಗುತ್ತಿಲ್ಲ. ಪ್ರಸ್ತುತ ಪಂಚಾಯ್ತಿಗಳಲ್ಲಿ ನೌಕರರು ‘ಜೀತದಾಳು’ಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ದಿನದಿಂದ ದಿನಕ್ಕೆ ನಿತ್ಯೋಪಯೋಗಿ ವಸ್ತುಗಳ ಧಾರಣೆ ಹೆಚ್ಚಳವಾಗುತ್ತಿದೆ. ಇದಕ್ಕೆ ಅನುಗುಣವಾದ ರೀತಿಯಲ್ಲಿ ಗ್ರಾಮ ಪಂಚಾಯ್ತಿ ನೌಕರರಿಗೆ ವೇತನವನ್ನು ನೀಡುತ್ತಿಲ್ಲ. ಇದರಿಂದ ಗ್ರಾಮ ಪಂಚಾಯ್ತಿಗಳಲ್ಲಿ ದುಡಿಯುತ್ತಿರುವ ನೌಕರರು ಕುಟುಂಬ ನಿರ್ವಹಣೆ ಮಾಡಲು ಅರೆಹೊಟ್ಟೆಯಲ್ಲಿ ಪರದಾಡುವ ದಯನೀಯ ಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಗ್ರಾಮ ಪಂಚಾಯ್ತಿಯ ವಿವಿಧ ಐದು ಹುದ್ದೆಗಳನ್ನು ಪಂಚಾಯ್ತಿ ನೌಕರರು ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ದರ ಏರಿಕೆಯ ಈ ದಿನಗಳಲ್ಲಿ ಕುಟುಂಬದ ಸದಸ್ಯರ ಆಹಾರ, ಶಿಕ್ಷಣ, ಮನೆ ಬಾಡಿಗೆ ಇತರೆ ಖರ್ಚುವೆಚ್ಚಗಳ ಆಧಾರದಲ್ಲಿ ಗ್ರಾಮ ಪಂಚಾಯ್ತಿ ನೌಕರರಿಗೆ ಕನಿಷ್ಟ ವೇತನವನ್ನು ನೀಡಬೇಕು. ನ್ಯಾಯಾಲಯದ ಸೂಚನೆಗಳಂತೆ ಗ್ರಾಪಂಗಳ ಕರವಸೂಲಿಗಾರ, ಗುಮಾಸ್ತ, ಡಾಟಾ ಎಂಟ್ರಿ ಆಪರೇಟರ್‍ಗಳಿಗೆ ಕನಿಷ್ಟ 38 ಸಾವಿರ ರೂ., ವಾಟರ್‍ಮ್ಯಾನ್, ಪಂಪ್ ಆಪರೇಟರ್ ಮತ್ತು ಮೆಕಾನಿಕ್ ಹುದ್ದೆಗಳನ್ನು ನಿರ್ವಹಿಸುವವರಿಗೆ 33 ಸಾವಿರ ರೂ., ಅಟೆಂಡರ್, ಜವಾನರುಗಳಿಗೆ 28,750 ರೂ., ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವವರಿಗೆ 25 ಸಾವಿರ ರೂ. ಕನಿಷ್ಠ ವೇತನವನ್ನು ನಿಗದಿಪಡಿಸಬೇಕು. ಗ್ರಾಮ ಪಂಚಾಯ್ತಿಗಳಲ್ಲಿ ದುಡಿಯುವ ಸಿಬ್ಬಂದಿಗಳಿಗೆ ಸೇವಾ ಹಿರಿತನದ ಮಾನ್ಯತೆ ನೀಡಿ, ಮೂಲ ವೇತನಕ್ಕೆ ಶೇ.2 ರಷ್ಟು ಹೆಚ್ಚುವರಿ ಭತ್ಯೆಯನ್ನು ಪ್ರತಿವರ್ಷ ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನಾಕಾರರು ನೌಕರರ ಸಹಿ ಸಂಗ್ರಹದ ಮನವಿ ಪತ್ರವನ್ನು ಕಾರ್ಮಿಕ ಅಧಿಕಾರಿ ಕಾವೇರಿ ಅವರ ಮೂಲಕ ಕಾರ್ಮಿಕ ಸಚಿವರು ಹಾಗೂ ಪಂಚಾಯತ್ ರಾಜ್ ಸಚಿವರಿಗೆ ಸಲ್ಲಿಸಿದರು. ಗ್ರಾಮ ಪಂಚಾಯ್ತಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷರುಗಳಾದ ಮಹದೇವ್, ಸಿ.ವಿ.ದಿಲೀಪ್, ಸದಸ್ಯರುಗಳಾದ ಟಿ.ಕೆ.ಮೂರ್ತಿ, ಮಹಲಿಂಗ., ಎಂ.ಎಂ.ಸೌಮ್ಯ, ಎಂ.ಎಸ್.ಸೌಮ್ಯ, ಶಿವಭಾಗ್ಯ, ಕೆ.ಬಿ.ಸತೀಶ್ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ಪಂಚಾಯ್ತಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.











