ಮಡಿಕೇರಿ ಜೂ.25 NEWS DESK : ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರು ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ಕರಾಳ ಮುಖಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತದಲ್ಲೂ ಕಂಡು ಬರುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವಥ್ ನಾರಾಯಣ ಅವರು ಟೀಕಿಸಿದ್ದಾರೆ. ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿ-ಕಾಂಗ್ರೆಸ್ ಕರಾಳ ಇತಿಹಾಸಕ್ಕೆ 50 ವರ್ಷಗಳು’ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೇಂದ್ರದಲ್ಲಿ ಪ್ರಧಾನಿ ಹುದ್ದೆ ಮತ್ತು ಸರಕಾರದ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಇಂದಿರಾಗಾಂಧಿ ಅವರು 1975ರ ಜೂ. 25ರಂದು ಸಂವಿಧಾನಕ್ಕೆ 5 ತಿದ್ದುಪಡಿಗಳನ್ನು ತರುವು ಮೂಲಕ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದರು. ಇದನ್ನು ವಿರೋಧಿಸಿದ ಜನ ಸಂಘ, ಸಂಘ ಪರಿವಾರದ ಹಲವಾರು ಮುಖಂಡರ ಸಹಿತ ಲಕ್ಷಾಂತರ ಮಂದಿ ಹೋರಾಟಗಾರರನ್ನು ಯಾವುದೇ ಕಾರಣಗಳಿಲ್ಲದೇ ಜೈಲಿಗೆ ಅಟ್ಟುವ ಮೂಲಕ ಸಂವಿಧಾನವನ್ನೇ ಇಂದಿರಾ ಗಾಂಧಿ ತಮ್ಮ ಮುಷ್ಟಿಯಲ್ಲಿಡಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದರು. ರಾಜ್ಯದ ಕಾಂಗ್ರೆಸ್ ಸರಕಾರ ಕೂಡ ತುರ್ತು ಪರಿಸ್ಥಿತಿಯನ್ನು ರಾಜ್ಯದಲ್ಲಿ ಅಳವಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಷ್ಠೀಕರಣ ಮತ್ತು ಓಲೈಕೆಯ ರಾಜಕೀಯಕ್ಕಾಗಿ ತಮ್ಮ ವಿರೋಧಿಗಳ ವಿರುದ್ಧ ಕೇಸ್ ದಾಖಲಿಸುವ ಕೆಲಸ ಮಾಡುತ್ತಿದೆ. ಪ್ರತಿ ನಿತ್ಯ 30ರಿಂದ 40 ಮಂದಿ ಬಿಜೆಪಿಗರ ವಿರುದ್ದ ಕಾಂಗ್ರೆಸ್ ಸರಕಾರ ಕೇಸು ದಾಖಲಿಸುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರಕಾರದ ಭ್ರಷ್ಟಾಚಾರದ ವಿರುದ್ಧ ಅವರ ಪಕ್ಷದ 5 ಮಂದಿ ಶಾಸಕರೇ ಮಾತನಾಡಿದ್ದಾರೆ. ಹೀಗಿದ್ದರೂ ಮುಖ್ಯಮಂತ್ರಿಗಳಿಗೆ ಏನು ಅನಿಸುವುದಿಲ್ಲ. 1975ರಲ್ಲಿ ಬಿಹಾರ ಮತ್ತು ಗುಜರಾತ್ ರಾಜ್ಯಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಪ್ರಕರಣಗಳ ಕರಿನೆರಳು ಇದೀಗ ರಾಜ್ಯದಲ್ಲೂ ಕಂಡು ಬರುತ್ತಿದೆ ಎಂದು ಅಶ್ವತ್ ನಾರಾಯಣ ಟೀಕಿಸಿದರು. ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, 1970ರ ದಶಕದಲ್ಲಿ ಕೇಂದ್ರದಲ್ಲಿ ಅಸ್ತಿತ್ವದಲ್ಲಿದ್ದ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರಕಾರದ ವಿರುದ್ದ ನಡೆಯುತ್ತಿದ್ದ ಹೋರಾಟಗಳನ್ನು ಹತ್ತಿಕ್ಕಲು ಅಂದು ದೇಶದಲ್ಲಿ 19 ತಿಂಗಳು ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು. ಜಿಲ್ಲೆಯಲ್ಲೂ 15ಕ್ಕೂ ಅಧಿಕ ಮಂದಿ ಮುಂಚೂಣಿ ಮುಖಂಡರನ್ನು ಬಂಧಿಸಿ ಅಂದು ಜೈಲಿಗೆ ಅಟ್ಟಲಾಗಿತ್ತು. ಹೋರಾಟದ ಫಲವಾಗಿ ಮೊರಾರ್ಜಿ ದೇಸಾಯಿ, ಚರಣ್ ಸಿಂಗ್ ಅವರುಗಳ ಮೂಲಕ ಜನತಾ ಪಕ್ಷ ಅಧಿಕಾರಕ್ಕೇರಿ ಮಾಜಿ ಪ್ರಧಾನಿ ದಿ.ವಾಜಪೇಯಿ, ಲಾಲ್‍ಕೃಷ್ಣ ಅಡ್ವಾಣಿ ಅವರುಗಳು ದೇಶ ಸುತ್ತಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಕಾಂಗ್ರೆಸ್‍ನ ದುರಾಡಳಿತವನ್ನು ಕಾರ್ಯಕರ್ತರು ಎಲ್ಲರಿಗೂ ತಿಳಿಸಬೇಕಿದೆ ಎಂದು ಕರೆ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ನಗರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಪಕ್ಷದ ಪ್ರಮುಖರಾದ ರೀನಾ ಪ್ರಕಾಶ್, ನೆಲ್ಲಿರ ಚಲನ್, ಅರುಣ್ ಭೀಮಯ್ಯ, ಪಟ್ರಪಂಡ ರಘು ನಾಣಯ್ಯ, ಕಾಂಗೀರ ಸತೀಶ್, ಕಿಲನ್ ಗಣಪತಿ, ತಳೂರು ಕಿಶೋರ್ ಕುಮಾರ್, ನಾಗೇಶ್ ಕುಂದಲ್ಪಾಡಿ, ಬಿ.ಕೆ.ಅರುಣ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಬೂತ್, ಮಂಡಲ, ಶಕ್ತಿ ಕೇಂದ್ರಗಳ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.












