ಮಡಿಕೇರಿ ಜೂ.26 NEWS DESK : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಪ್ರೇರಣಾ ಅನುಭವಾಧಾರಿತ ಕಲಿಕಾ ತರಬೇತಿ ಕಾಯಾ೯ಗಾರದಲ್ಲಿ ಕೊಡಗು ಜಿಲ್ಲೆಯ ವಿದ್ಯಾಥಿ೯ಗಳಾದ ಭವಿಷ್ಯ ಎಮ್ (ಕೊಡಗು ವಿದ್ಯಾಲಯ, ಹತ್ತನೇ ತರಗತಿ ( 2024–25), ಹರ್ಷಿತ್ ಪೊನ್ನಪ್ಪ ಟಿ.ಎಲ್ (ಸೆಂಟ್ ಜೋಸೆಫ್ ಹೈ ಸ್ಕೂಲ್, ಮಡಿಕೇರಿ) ಮತ್ತು ಪಿ.ಎಸ್. ಪೊನ್ನಮ್ಮ (ಸಹಾಯಕ ಶಿಕ್ಷಕಿ, ಕೊಡಗು ವಿದ್ಯಾಲಯ) ಭಾಗವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಭಾಗವಾಗಿ ಯುವಕರಲ್ಲಿ ನಾಯಕತ್ವ ಗುಣಗಳು ಮತ್ತು ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ಕಾಯಾ೯ಗಾರ ರೂಪುಗೊಂಡಿತ್ತು. ಜೂನ್ 15 ರಿಂದ 21 ರವರೆಗೆ ನರೇಂದ್ರ ಮೋದಿಯವರು ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಗುಜರಾತಿನ ವಡ್ನಗರದ ಶಾಲೆಯಲ್ಲಿ ಈ ಕಾಯಾ೯ಗಾರ ಆಯೋಜಿತವಾಗಿತ್ತು. ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಜೊತೆಗೆ ಸಂಯೋಜಿಸಿ, ಭಾರತವನ್ನು 2047ರ ಒಳಗೆ ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ರೂಪಿಸುವ ದೃಷ್ಟಿಕೋನದಲ್ಲಿ ತರಬೇತಿ ನೀಡಲಾಯಿತು. ಪ್ರತಿ ವಾರ ದೇಶದ ಆಯ್ದ ರಾಜ್ಯಗಳಿಂದ 20 ವಿದ್ಯಾರ್ಥಿಗಳು ಮತ್ತು 10 ಶಿಕ್ಷಕರು ಆಯ್ಕೆಯಾಗುತ್ತಾರೆ. ಈ ಸಮಯದಲ್ಲಿ ಅವರು ವಿವಿಧ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಪುರಾತತ್ವ ಕೇಂದ್ರಗಳಿಗೆ ಭೇಟಿ ನೀಡಿ ಭಾರತದ ಸಮೃದ್ಧ ಪರಂಪರೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ವಿದ್ಯಾಥಿ೯ಗಳು ಪಡೆಯುತ್ತಾರೆ. . ಸ್ವಾಭಿಮಾನ, ವಿನಯ, ಶೌರ್ಯ, ಸಾಹಸ, ಪರಿಶ್ರಮ, ಸಮರ್ಪಣಾ ಭಾವನೆ, ಸತ್ಯನಿಷ್ಠೆ, ಶುದ್ಧತೆ, ಕರುಣೆ, ಸೇವೆ ಮೊದಲಾದ ಒಂಬತ್ತು ಮೌಲ್ಯಗಳಿಗೆ ಒತ್ತು ನೀಡಲಾಗುತ್ತದೆ. ‘ವಸುದೈವ ಕುಟುಂಬಕಮ್’ ಎಂಬ ಮಹಾವಾಕ್ಯದ ಸ್ಫೂರ್ತಿಯಲ್ಲಿ, ತಮ್ಮ ಜಿಲ್ಲೆಯ ಅಭಿವೃದ್ಧಿಗೆ ಹಾಗೂ ದೇಶದ ಉಜ್ವಲ ಭವಿಷ್ಯಕ್ಕೆ ಕೆಲಸ ಮಾಡುವ ದೃಢಸಂಕಲ್ಪವನ್ನು ಕಾಯಾ೯ಗಾರದಲ್ಲಿ ಪಾಲ್ಗೊಂಡ ವಿದ್ಯಾಥಿ೯ಗಳು ಹೊಂದುತ್ತಾರೆ. ವಿಕಸಿತ್ ಭಾರತ’ದ ಕನಸನ್ನು ನನಸಾಗಿಸಲು ಅವರು ತಮ್ಮದೇ ಆದ ರೀತಿಯಲ್ಲಿ ಶ್ರಮಿಸುವಂತೆ ಈ ಕಾರ್ಯಕ್ರಮದಿಂದ ಪ್ರೇರಣೆಯಾಯಿತು. ಎಂದು ಕಾಯಾ೯ಗಾರದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ವಿದ್ಯಾಥಿ೯ಗಳು ನುಡಿದರು.













