
ವಿರಾಜಪೇಟೆ ಜು.25 NEWS DESK : ವಿರಾಜಪೇಟೆ ಪುರಸಭಾ ವ್ಯಾಪ್ತಿಯ ಪಂಜರಪೇಟೆಯಲ್ಲಿರುವ ಸರ್ವೋದಯ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕರು, ಕಳೆದ 50 ವರ್ಷಗಳಿಂದ ನಾಡಿನ ಯುವಜನತೆಗೆ ವಿದ್ಯಾರ್ಜನೆ ಮಾಡುತ್ತಾ ಯಶಸ್ಸು ಕಂಡಿರುವ ಈ ವಿದ್ಯಾಸಂಸ್ಥೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸನ್ನು ಕಾಣುತ್ತಾ ನಾಡಿನ ಯುವಕ ಯುವತಿಯರಿಗೆ ಉತ್ತಮ ಶಿಕ್ಷಣ ನೀಡುವಂಥಾಗಲಿ ಎಂದು ಶುಭ ಹಾರೈಸಿದರು. ಕಲಿಕೆಯೇ ದೇಶದ ಅಭಿವೃದ್ಧಿಗೆ ಮೂಲ ಮಂತ್ರವಾಗಿದ್ದು, ಕಾಲೇಜು ಹಂತದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಮುಂದಿನ ಗುರಿ ಸಾಧನೆ ತಮ್ಮ ಗಮನವನ್ನು ಕೇಂದ್ರೀಕರಿಸಲು ಈ ಹಂತದ ವಿದ್ಯಾಭ್ಯಾಸ ಪ್ರಮುಖವಾಗಿರುತ್ತದೆ ಎಂಬ ಕಿವಿ ಮಾತನ್ನು ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕುಲ ಸಚಿವರಾದ ಪ್ರೊ ಅಶೋಕ ಸಂಗಪ್ಪ ಆಲೂರ, ಶಕ್ತಿ ದಿನ ಪತ್ರಿಕೆ ಸಂಪಾದಕ ಚಿದ್ವಿಲಾಸ್ ಜಿ, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಸದಸ್ಯರು, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.










