
ವಿರಾಜಪೇಟೆ ಜು.30 NEWS DESK : ಹೆಗ್ಗಳ ಗ್ರಾಮದ ಪಾಲ್ಟ್ ಮಕ್ಕಿಯಲ್ಲಿರುವ ಶ್ರೀ ನಾಗ ಬನದಲ್ಲಿ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.ಅರ್ಚಕರಾದ ವೇಣುಗೋಪಾಲ್ ಭಟ್ ಅವರು ಸಂಕಲ್ಪ ಪೂಜೆ, ಅಲಂಕಾರ, ಶ್ರೀ ನಾಗ ದೇವರಿಗೆ ಸೀಯಾಳ ಅಭಿಷೇಕ, ಕ್ಷೀರಾಭಿಷೇಕ, ಕುಂಕುಮಾರ್ಚನೆ, ಪುಷ್ಪರ್ಚನೆ ಸೇರಿದಂತೆ ವಿವಿಧ ಪೂಜಾ ವಿಧಾನಗಳನ್ನು ನಡೆಸಿದರು. ನಂತರ ನಾಗ ತಂಬಿಲ ನಡೆಯಿತು. ಮಹಾಪೂಜೆಯ ನಂತರ ನೆರೆದಿದ್ದ ಭಕ್ತಾಧಿಗಳಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದ ಸಮೀಪವಿರುವ ಹುತ್ತಕ್ಕೆ ಗ್ರಾಮದ ಮಹಿಳೆಯರು ಹಾಲನ್ನು ಎರೆಯುವುದರ ಮೂಲಕ ಪೂಜೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.








