
ಮಡಿಕೇರಿ NEWS DESK ಆ.10 : ರಾಷ್ಟ್ರೀಯ ಜನಗಣತಿಯೊಂದಿಗೆ ಜನಾಂಗವಾರು ಮಾಹಿತಿ ಕಲೆಹಾಕುವ ಸಂದರ್ಭ ಆದಿಮ ಸಂಜಾತ ಏಕ-ಜನಾಂಗೀಯ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಸೇರಿಸುವುದರಿಂದ ಕೊಡವರ ಸಾಂವಿಧಾನಿಕ ಹಕ್ಕುಗಳಿಗೆ ಮತ್ತಷ್ಟು ಬಲ ಸಿಗಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ. ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಸೇರಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸುಂಟಿಕೊಪ್ಪದಲ್ಲಿ 9ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಸಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎನ್.ಯು.ನಾಚಪ್ಪ ಅವರು 2026ರ ರಾಷ್ಟ್ರೀಯ ಜನಗಣತಿ ಮತ್ತು ಜನಾಂಗವಾರು ಮಾಹಿತಿ ಸಂಗ್ರಹಿಸುವ ಸಂದರ್ಭ ಪ್ರತ್ಯೇಕ ಕಾಲಮ್ ಮತ್ತು ಕೋಡ್ ಸೇರಿಸುವುದರಿಂದ ಕೊಡವ ಸಮುದಾಯಕ್ಕೆ ಆಗಬಹುದಾದ ಲಾಭಗಳನ್ನು ಸರ್ವ ಕೊಡವರು ಅರಿತುಕೊಳ್ಳಬೇಕು. ಕೊಡವರ ಸಾಂವಿಧಾನಿಕ ಹಕ್ಕುಗಳಿಗಾಗಿ ಸಿಎನ್‌ಸಿ ನಡೆಸುವ ಶಾಂತಿಯುತ ಹೋರಾಟಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು. 2018ರಲ್ಲಿ ಕೊಡವಲ್ಯಾಂಡ್ ನಲ್ಲಿ ವ್ಯಾಪಕ ಜಲಸ್ಫೋಟ ಮತ್ತು ಭೂಸ್ಫೋಟ ಸಂಭವಿಸಿ ಸಾವುನೋವು, ಕಷ್ಟನಷ್ಟಗಳು ಎದುರಾಗಿದ್ದರೂ ಜಿಲ್ಲಾಡಳಿತ ಎಗ್ಗಿಲ್ಲದೆ ಭೂಪರಿವರ್ತನೆಗೆ ಅವಕಾಶ ನೀಡುತ್ತಿದೆ. ಹೊರಗಿನ ಬಂಡವಾಳಶಾಹಿಗಳು ಕಪ್ಪುಹಣವನ್ನು ಬಳಸಿ ಭೂಖರೀದಿಯಲ್ಲಿ ತೊಡಗಿದ್ದಾರೆ. ದೊಡ್ಡ ದೊಡ್ಡ ರೆಸಾರ್ಟ್ಗಳು ತಲೆ ಎತ್ತುತ್ತಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತವೇ ಎದುರಾಗುವ ಸಾಧ್ಯತೆಗಳಿದೆ ಎಂದು ಆರೋಪಿಸಿದರು.ಆದಿಮಸಂಜಾತ ಕೊಡವರಿಗೆ ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯೊಂದಿಗೆ ಸ್ವಯಂ ಆಡಳಿತ ಮತ್ತು ಆಂತರಿಕ ಸ್ವಯಂನಿರ್ಣಯದ ಹಕ್ಕನ್ನು ಖಾತ್ರಿ ಪಡಿಸುವುದರಿಂದ ಈ ರೀತಿಯ ಅಕ್ರಮ ಮತ್ತು ಅನಾಹುತಗಳನ್ನು ತಡೆಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು. ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಕೊಡವರಿಗೆ ಪ್ರತ್ಯೇಕ ಕೋಡ್ ಹಾಗೂ ಕಾಲಮ್ ವ್ಯವಸ್ಥೆ ಮಾಡಬೇಕು. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಸಂವಿಧಾನದಡಿ ಕೊಡವರನ್ನು ಎಸ್‌ಟಿ ಪಟ್ಟಿಯಲ್ಲಿ ಸೇರಿಸಬೇಕು. ಸಿಕ್ಕಿಂನ ಬೌದ್ಧ ಸನ್ಯಾಸಿಗಳಿಗೆ ನೀಡಿದ “ಸಂಘ” ಕ್ಷೇತ್ರದಂತೆಯೇ 2026 ರ ಮತಕ್ಷೇತ್ರ ಪುನರ್ ವಿಂಗಡಣೆ ನಿರ್ಣಯದ ಸಂದರ್ಭ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ಪ್ರತ್ಯೇಕ ವಿಶೇಷ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು. ವಿಶ್ವರಾಷ್ಟ್ರ ಸಂಸ್ಥೆಯ ಅಂತರಾಷ್ಟಿçÃಯ ಕಾನೂನಿನಡಿ ಆದಿಮಸಂಜಾತ ಕೊಡವ ಸಮುದಾಯವನ್ನು ಸಂರಕ್ಷಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯಗಳನ್ನು ಎನ್.ಯು.ನಾಚಪ್ಪ ಮಂಡಿಸಿದರು. ಕೊಡವ ಸಮುದಾಯದ ಸಾಂವಿಧಾನಿಕ ಹಕ್ಕೊತ್ತಾಯಗಳ ಕುರಿತು ಸರಕಾರದ ಗಮನ ಸೆಳೆಯಲು ಮತ್ತು ಜನಜಾಗೃತಿ ಮೂಡಿಸಲು ಕೊಡಗಿನಾದ್ಯಂತ ಮಾನವ ಸರಪಳಿ ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸಲಾಗುತ್ತಿದೆ. ಸುಂಟಿಕೊಪ್ಪ ಭಾಗದ ಕೊಡವ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದರಿಂದ ಸಿಎನ್‌ಸಿಯ ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಿದೆ ಎಂದರು.
*ಆ.21 ರಂದು ಸಿದ್ದಾಪುರದಲ್ಲಿ ಜನಜಾಗೃತಿ* ಆ.21 ರಂದು ಬೆಳಿಗ್ಗೆ 10.30 ಗಂಟೆಗೆ ಸಿದ್ದಾಪುರದಲ್ಲಿ 10ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಎನ್.ಯು.ನಾಚಪ್ಪ ಇದೇ ಸಂದರ್ಭ ತಿಳಿಸಿದರು. ಚೋಳಪಂಡ ಜ್ಯೋತಿ, ನಂದಿನೆರವಂಡ ರೇಖಾ, ಮರುವಂಡ ಲವ್ಲಿ, ಮಂಡಿರ ಸಬಿತಾ, ಮುಕ್ಕಾಟಿರ ಎ.ವಸಂತ್, ಪುಡಿಯಂಡ ಮುತ್ತಣ್ಣ, ದಾಸಂಡ ದೇವಯ್ಯ, ಕುಪ್ಪಂಡ ಮಹೇಶ್, ನಂದಿನೆರವಂಡ ಅಪ್ಪಯ್ಯ, ಮಾಳೇಟಿರ ಉತ್ತಪ್ಪ, ಪುಡಿಯಂಡ ರಂಜಿತ್, ಪುಲ್ಲೇರ ಕಾಳಪ್ಪ, ಬಲ್ಲಾರಂಡ ರಾಜಪ್ಪ, ನಾಗಶೆಟ್ಟಿರ ಮನು, ಚೋಳಪಂಡ ನಾಣಯ್ಯ, ನಾಗಶೆಟ್ಟಿರ ಪ್ರಕಾಶ್, ನಂದಿನೆರವಂಡ ಬಿದ್ದಪ್ಪ, ನಂದಿನೆರವಂಡ ಅಚ್ಚಯ್ಯ, ನಂದಿನೆರವಂಡ ಕುಟ್ಟಪ್ಪ, ನಂದಿನೆರವಂಡ ಪೃಥ್ವಿ, ಪುಲ್ಲೇರ ಹರ್ಷ, ಪುಲ್ಲೇರ ಅಶ್ವಿತ್, ಕಾಯಪಂಡ ತಿಮ್ಮಯ್ಯ, ಮರುವಂಡ ಶರತ್, ಮರುವಂಡ ಕವನ್, ನಂದಿನೆರವಂಡ ರಾಜೇಶ್, ಬೊಟ್ಟೋಳಂಡ ಕುಮಾರ್, ದಾಸಂಡ ವಿಕ್ರಮ್, ಮರುವಂಡ ತಿಮ್ಮಯ್ಯ, ಚೆಟ್ಟಿರ ಕವನ್, ಪಾರುವಂಗಡ ರವಿ, ಕಂಜಿತಂಡ ಅಯ್ಯಣ್ಣ, ಅಜ್ಜಿನಿಕಂಡ ಮೊಣ್ಣಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸೂರ್ಯ-ಚಂದ್ರ, ಭೂದೇವಿ, ಪ್ರಕೃತಿ ದೇವಿ, ಜಲದೇವಿ, ವನದೇವಿ, ಸಂವಿಧಾನ, ಗುರು ಕಾರೋಣ ಹೆಸರಿನಲ್ಲಿ ಸಿಎನ್‌ಸಿಯ ಕೊಡವಲ್ಯಾಂಡ್ ಹೋರಾಟದೊಂದಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಪ್ರತಿಜ್ಞೆ ಸ್ವೀಕರಿಸಿದರು. ರಾಷ್ಟ್ರಗೀತೆ ಜನ-ಗಣ-ಮನದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.









