
ಮಡಿಕೇರಿ ಆ.16 NEWS DESK : ನಗರದ ರಾಜರಾಜೇಶ್ವರಿ ಪದವಿಪೂರ್ವ ಕಾಲೇಜ್ ನ ರೋಟರಿ ಮಡಿಕೇರಿಯಿಂದ ಪ್ರಾಯೋಜಿಸಲ್ಪಟ್ಟ ಇಂಟರಾಕ್ಟ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕ್ಲಬ್ ನ ನೂತನ ಅಧ್ಯಕ್ಷೆಯಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಗೌತಮಿ ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿಯಾಗಿ ಪೆಮ್ಮಯ್ಯ ಪದಗ್ರಹಣ ಮಾಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ರೋ.ಪಿಹೆಚ್‍ಎಫ್ 1 ಸಿಎ ಎಂ.ಈಶ್ವರ ಭಟ್ ಅವರು ಎಲ್ಲಾ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಪದಗ್ರಹಣ ಮಾಡಿಸಿದರು. ನಂತರ ಮಾತನಾಡಿದ ಅವರು ಎಳೆ ವಯಸ್ಸಿನಲ್ಲಿಯೇ ದೊರೆತ ನಾಯಕತ್ವದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಮಂದಿನ ಜೀವನವನ್ನು ಉಜ್ವಲಗೊಳಿಸುವಂತೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಸಂದೇಶ ನೀಡಿದರು. ರೋಟರಿ ಮಡಿಕೇರಿಯ ಅಧ್ಯಕ್ಷರಾದ ರೋ. ಲಲಿತ ರಾಘವನ್ ಮಾತನಾಡಿ 12 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಲ್ಲಿ ಸೇವಾಮನೋಭಾವವನ್ನು ಬೆಳೆಸುವ ಸದುದ್ದೇಶದಿಂದ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಇಂಟರಾಕ್ಟ್ ಕ್ಲಬ್ ನ್ನು ರಚಿಸಿದ್ದು, ಇದರ ಧ್ಯೇಯೋದ್ದೇಶಗಳನ್ನು ಅರಿತುಕೊಳ್ಳಬೇಕೆಂದು ವಿವರಿಸಿದರು. ರೋಟರಿ ಕಾರ್ಯದರ್ಶಿ ರೋ. ಅದರ್ಶ್ ಸೋಮಣ್ಣ, ಇಂಟರಾಕ್ಟ್ ಸಮಿತಿ ಅಧ್ಯಕ್ಷೆ ರೋ.ಮೃಣಾಲಿನಿ, ಯುವ ವಿಭಾಗದ ನಿರ್ದೇಶಕ ರೋ.ಅನಿಲ್ ಕೃಷ್ಣಾನಿ, ರಾಜೇಶ್ವರಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಚಿನ್ ವಾಸುದೇವ, ಕಾಲೇಜು ಆಡಳಿತಾಧಿಕಾರಿ ಲಕ್ಷ್ಮಿ ಸಚಿನ್, ಅಧ್ಯಾಪಕವೃಂದ ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮೈಸೂರಿನಲ್ಲಿ ನಡೆಯಲಿರುವ ಜಿಲ್ಲಾ ಇಂಟರಾಕ್ಟ್ ತರಬೇತಿ ಶಿಬಿರದಲ್ಲಿ ಭಾಗವಹಿಸುವ ಕ್ಲಬ್ ಸದಸ್ಯರ ಪ್ರಯಾಣವೆಚ್ಚವನ್ನು ಇದೇ ಸಂದರ್ಭ ರೋಟರಿ ವತಿಯಿಂದ ರೋ. ಸೋಮಣ್ಣ ಅವರ ಪ್ರಾಯೋಜಕತ್ವದಲ್ಲಿ ನೀಡಲಾಯಿತು.









