
ವಿರಾಜಪೇಟೆ ಆ.18 NEWS DESK : ವಿರಾಜಪೇಟೆ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಕೃಷಿ ಕಾರ್ಯಕ್ರಮದಡಿಯಲ್ಲಿ ಕಾನೂರು ವಲಯದ ಬ್ರಹ್ಮಗಿರಿ ಕಾರ್ಯಕ್ಷೇತ್ರದ ಕೋತೂರು-ಬೊಮ್ಮಾಡು ಸರಕಾರಿ ವಾಲ್ಮೀಕಿ ಆಶ್ರಮ ಶಾಲೆ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ನಡೆಯಿತು. ನಾಲ್ಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಿಡಮರಗಳನ್ನು ಬೆಳೆಸಬೇಕು, ನೆಟ್ಟ ಗಿಡಗಳನ್ನು ಪೋಷಣೆ ಮಾಡಬೇಕು ಪರಿಸರ ಸಂರಕ್ಷಣೆಯಿಂದ ಶುದ್ಧವಾದ ಗಾಳಿ ನೀರು ಸಿಗುತ್ತದೆ ಹಾಗೂ ಎಲ್ಲಾ ವಿದ್ಯಾರ್ಥಿಗಳು ತಮ್ಮ ಮನೆಯ ಪರಿಸರದಲ್ಲಿ ಗಿಡ ನಾಟಿ ಮಾಡಿ ಪರಿಸರ ಸಂರಕ್ಷಿಸಬೇಕು ಎಂದರು. ಶಾಲಾ ಮುಖ್ಯ ಶಿಕ್ಷಕರಾದ ವಿ.ಎಸ್.ಪ್ರಶಾಂತ ಕುಮಾರ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ನಮ್ಮ ಕರ್ತವ್ಯದ ಬಗ್ಗೆ ಮತ್ತು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕ ವಸಂತ್, ಶಾಲಾ ಶಿಕ್ಷಕರಾದ ದಿವ್ಯ ಪಿ.ಎಂ, ಲಕ್ಷ್ಮಿ ಪಿ.ಕೆ ಪ್ರವೀಣ್, ಎಚ್.ಎನ್, ಲಕ್ಷ್ಮಿ ಪಿ.ಎಸ್, ತೀರ್ಥಂಜಲಿ ಬಿ.ಪಿ, ರೂಪ ಜಿ.ಕೆ, ಒಕ್ಕೂಟದ ಅಧ್ಯಕ್ಷರಾದ ಸುನೀತಾ, ಸೇವಾಪ್ರತಿನಿಧಿ ಮುತ್ತಪ್ಪ, ಶಾಲಾ ಮಕ್ಕಳು ಇದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಪ್ರಬಂಧ ಹಾಗೂ ಚಿತ್ರಕಲೆ ಎಲೆಗಳನ್ನು ಗುರುತಿಸುವ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಶಾಲಾ ಆವರಣದಲ್ಲಿ, ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ನೆಡಲಾಯಿತು.









