
ಮಡಿಕೇರಿ ನ.29 NEWS DESK : ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಸಮಗ್ರ ಗ್ರಾಮೀಣ ಅಭಿವೃದ್ಧಿಯಲ್ಲಿ ಸಹಕಾರ ಚಳವಳಿಯ ಪಾತ್ರ’ ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ‘ಸಹಕಾರಿ ವ್ಯವಸ್ಥೆಯ ಸಾಧನೆ, ವೈಫಲ್ಯಗಳ ಪರಾಮರ್ಶೆಯಿಂದ ಮಾತ್ರವೇ ಸಹಕಾರಾಭಿವೃದ್ಧಿ ಬಲಗೊಳ್ಳಲು ಸಾಧ್ಯ’ ಎಂಬ ವಿಷಯದ ಬಗ್ಗೆ ಚರ್ಚಾ ಸ್ಪರ್ಧೆಯನ್ನು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆಯಿತು. ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ ಶಾಲಾ ವಿದ್ಯಾರ್ಥಿಗಳು ಪ್ರಬಂಧವನ್ನು ಮಂಡಿಸಿದರು. ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ವಿಷಯದ ಕುರಿತಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಚರ್ಚಾ ಸ್ಪರ್ಧೆ ಕಾಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು.ರಾಬಿನ್ ದೇವಯ್ಯ ಮಾತನಾಡಿ, ಸಹಕಾರ ಚಳುವಳಿಯಲ್ಲಿ ಕರ್ನಾಟಕದ ಕೊಡುಗೆ ಮಹತ್ತರವಾಗಿದೆ. 1905 ರಲ್ಲಿ ರಾಜ್ಯದ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಪ್ರಾರಂಭವಾದ ಕೃಷಿ ಪತ್ತಿನ ಸಹಕಾರ ಸಂಘ ದೇಶದಲ್ಲಷ್ಟೇ ಅಲ್ಲ ಏಷ್ಯಾ ಖಂಡದಲ್ಲಿಯೇ ಪ್ರಥಮ ಸಂಘವಾಗಿದೆ. ಕೊಡಗು ಜಿಲ್ಲೆಯು ತನ್ನದೇ ಆದ ಕೊಡುಗೆಯನ್ನು ನೀಡಿ ಕೇವಲ 14 ದಿನಗಳ ಅಂತರದಲ್ಲಿ ಶಾಂತಳ್ಳಿಯ ತಲ್ತರೆ ಶೆಟ್ಟಳ್ಳಿಯಲ್ಲಿ ಸಂಘ ಸ್ಥಾಪನೆ ಮಾಡಿರುವುದು ವಿಶೇಷವಾಗಿದೆ. 120 ವರ್ಷಗಳ ಇತಿಹಾಸ ಹೊಂದಿರುವ ಸಹಕಾರ ಚಳುವಳಿಯ ಕುರಿತು ಅರಿವನ್ನು ಮೂಡಿಸಲು ಇಂದು ಸ್ಪರ್ಧೆ ಏರ್ಪಡಿಸಲಾಗಿದೆ. ವಿಷಯ ಮಂಡಿಸಿದ ತಮ್ಮೆಲ್ಲರ ಭಾಗವಹಿಸುವಿಕೆ ಶ್ಲಾಘನೀಯ ಎಂದು ತಿಳಿಸಿ, ಮುಂದಿನ ರಾಜ್ಯಮಟ್ಟದ ಸ್ಪರ್ಧೆಳಲ್ಲಿ ಭಾಗವಹಿಸಿ ಬಹುಮಾನಿತರಾಗಿ ಜಿಲ್ಲೆಗೆ ಕೀರ್ತಿ ತರಲೆಂದು ಶುಭ ಹಾರೈಸಿದರು. ಚರ್ಚಾ ಸ್ಪರ್ಧೆಯ ತೀರ್ಪುಗಾರರಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶೈಲಜಾ, ಯೂನಿಯನ್ ನಿರ್ದೇಶಕರಾದ ಎ.ಎಸ್. ಶ್ಯಾಂಚಂದ್ರ, ಕೆ.ಐ.ಸಿ.ಎಂ.ನ ನಿವೃತ್ತ ಪ್ರಾಂಶುಪಾಲರಾದ ಹಾಗೂ ಯೂನಿಯನ್ ನಿರ್ದೇಶಕರಾದ ಎಂ.ಎಂ.ಶ್ಯಾಮಲಾ ಹಾಗೂ ಪ್ರಬಂಧ ಪತ್ರಿಕೆಯ ಮೌಲ್ಯಮಾಪಕರಾಗಿ ಮೈಸೂರು ಕೆ.ಐ.ಸಿ.ಎಂ.ನ ಉಪನ್ಯಾಸಕರಾದ ಮಹದೇವಪ್ಪ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಪಿ.ಎನ್.ಚಂದ್ರಪ್ರಕಾಶ್ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು. :: ವಿಜೇತರ ವಿವರ : : ಪ್ರಬಂಧ ಸ್ಪರ್ಧೆ :: ಪ್ರಥಮ – ಅಶ್ವಧಿ ಕೆ.ಪಿ., ಶ್ರೀಮತಿ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜು, ಮಾದಾಪುರ, ದ್ವಿತೀಯ – ಹೃಷಿಕ ಬಿ.ಎಸ್., ಸಂತ ಥೋಮಸ್ ಪ್ರೌಢಶಾಲೆ, ಗೋಣಿಕೊಪ್ಪಲು, ತೃತೀಯ – ಸಿಂಚನ ಕೆ.ಐ., ಶಾಂತಿನಿಕೇತನ ಪ್ರೌಢಶಾಲೆ, ಕೊಡಗರಹಳ್ಳಿ, ಸಮಾದಾನಕರ ಬಹುಮಾನ : ಕುಶ್ಮಿತ ಕೆ.ಎಲ್., ಆ್ಯಂಜೆಲಾ ವಿದ್ಯಾನಿಕೇತನ, ಕೂಡಿಗೆ :: ಚರ್ಚಾ ಸ್ಪರ್ಧೆ :: ಪ್ರಥಮ – ಹರಿಕೃಷ್ಣನ್ ಎಂ., ವಿದ್ಯಾನಿಕೇತನ್ ಪದವಿಪೂರ್ವ ಕಾಲೇಜು, ಗೋಣಿಕೊಪ್ಪಲು, ದ್ವಿತೀಯ – ಏಂಜೆಲಿನ್ ಮೆನೆಜಸ್, ವಿದ್ಯಾನಿಕೇತನ್ ಪದವಿಪೂರ್ವ ಕಾಲೇಜು, ಗೋಣಿಕೊಪ್ಪಲು, ತೃತೀಯ – ತನುಶ್ರೀ ಬಿ.ಜೆ, ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜು, ಸಮಾದಾನಕರ ಬಹುಮಾನ : ಪ್ರಜ್ವಲ್ ಎಂ.ಡಿ., ಲಯನ್ಸ್ ಸಂಯುಕ್ತ ಪದವಿಪೂರ್ವ ಕಾಲೇಜು, ಕಳತ್ಮಾಡು.









