
ಮಡಿಕೇರಿ ಡಿ.1 NEWS DESK : ವಿಶ್ವರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯ ಪ್ರಯುಕ್ತ ಜನವರಿಯಲ್ಲಿ ‘ದಲಿತರ ಸ್ವಾಭಿಮಾನಿ ಸಮಾವೇಶ’ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ಸಂಚಾಲಕ ಹೆಚ್.ಎಲ್.ದಿವಾಕರ್ ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ ತಿಂಗಳ ಮೊದಲ ಅಥವಾ ಎರಡನೇ ಭಾನುವಾರ ನಗರದ ಗಾಂಧಿ ಮೈದಾನದಲ್ಲಿ ಮಧ್ಯಾಹ್ನ 2 ಗಂಟೆಗೆ ಸಮಾವೇಶ ನಡೆಯಲಿದ್ದು, ಸಚಿವರಿಗೆ ಹಾಗೂ ಶಾಸಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. ಅಂದು ಬೆಳಿಗ್ಗೆ 10 ಗಂಟೆಗೆ ಅಶೋಕಪುರದಿಂದ ಬುದ್ಧ ಹಾಗೂ ಡಾ.ಅಂಬೇಡ್ಕರ್ ಭಾವಚಿತ್ರವಿರುವ ರಥದ ಮೆರವಣಿಗೆ ನಡೆಯಲಿದೆ. 100 ಬೈಕ್‍ಗಳು, ಕಳಸ ಹಿಡಿದ ಮಹಿಳೆಯರು, ಪೂರ್ವಿಕರ ಸ್ತಬ್ಧ ಚಿತ್ರ, ಡೊಳ್ಳು ಕುಣಿತ ಮತ್ತು ವೀರಗಾಸೆ ಕುಣಿತ ಗಮನ ಸೆಳೆಯಲಿದೆ ಎಂದು ತಿಳಿಸಿದರು. *ದಲಿತ ರತ್ನ ಪ್ರಶಸ್ತಿ ಪ್ರದಾನ* ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲ್ಲೂಕು ಸಂಚಾಲಕ ಎ.ಪಿ.ದೀಪಕ್ ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ‘ದಲಿತ ರತ್ನ ಪ್ರಶಸ್ತಿ’, ಕೊಡಗಿನ ಇಬ್ಬರು ಶಾಸಕರುಗಳಿಗೆ ಅವರ ಅಭಿವೃದ್ಧಿ ಕಾರ್ಯಕ್ರಮಗಳ ಆಧಾರದ ಮೇಲೆ ‘ಕೊಡಗು ರತ್ನ ಪ್ರಶಸ್ತಿ’ ನೀಡಲಾಗುವುದು. ಅಲ್ಲದೆ, ಹೋರಾಟಗಾರಾದ ಜಯಪ್ಪ ಹಾನಗಲ್, ¥ರಿಶಿಷ್ಟ ಜಾತಿ ಮತ್ತು ಪಂಗಡಗಳ ನಿವೃತ್ತ ನೌಕರರ ಸಮಿತಿಯ ಅಧ್ಯಕ್ಷ ಸಿದ್ದಯ್ಯ ಹಾಗೂ ಸಮಾಜ ಸೇವಕ ಹೆಚ್.ವಿ.ದೇವದಾಸ್ ಅವರಿಗೆ ‘ಕೊಡಗು ಭೂಷಣ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದರು. *ಪ್ರತಿಭಾವಂತ 200 ಮಕ್ಕಳಿಗೆ ಸನ್ಮಾನ* ಸಮಾರಂಭದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಸುಮಾರು 200 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಗುವುದು. ಶಿಕ್ಷಣದ ಮೂಲಕ ಮಾತ್ರ ಸಮುದಾಯದ ಏಳಿಗೆ ಸಾಧ್ಯ ಎನ್ನುವ ಚಿಂತನೆಯಡಿ ಕಳೆದ ಹಲವು ವರ್ಷಗಳಿಂದ ಗೌರವಿಸಿ ಪ್ರೋತ್ಸಾಹಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು. ಸಮಾವೇಶದಲ್ಲಿ 5 ಸಾವಿರ ಜನ ಸೇರುವ ನಿರೀಕ್ಷೆ ಇದ್ದು, ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೀಪಕ್ ಮನವಿ ಮಾಡಿದರು. ದಲಿತ ಸಮುದಾಯ ಶೋಷಿತ ವರ್ಗಕ್ಕೆ ಸೇರಿದವರಾಗಿದ್ದು, ಸಮಾಜದ ಮುಖ್ಯ ವಾಹಿನಿಗೆ ಬಾರದೆ ಹಿಂದುಳಿದ್ದಾರೆ. ಶಿಕ್ಷಣ ದೊರೆಯದಿರುವುದು, ಸಮಾಜದಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಇರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಜನಾಂಗದವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ದಲಿತ ಸಂಘರ್ಷ ಸಮಿತಿ ಸಮಾಜಮುಖಿಯಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ದಸಂಸ ಜಿಲ್ಲಾ ಮಹಿಳಾ ಸಂಚಾಲಕಿ ಪ್ರೇಮಾ ಕೃಷ್ಣಪ್ಪ ಹಾಗೂ ಸದಸ್ಯ ಸಿ.ಪಿ.ಸಿದ್ದೇಶ್ವರ್ ಉಪಸ್ಥಿತರಿದ್ದರು.








