ನಾಪೋಕ್ಲು ಡಿ.3 NEWS DESK : ಕಾಫಿ ಬೆಳೆಗಾರರು ಕಾಫಿಯ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆ ಗುಣಮಟ್ಟವನ್ನು ವೃದ್ಧಿಸಬೇಕು. ಆಗ ಬೆಳೆಗಾರರು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಕಾಫಿ ರಾಷ್ಟ್ರೀಯ ಪಾನೀಯ ಹೋರಾಟ ಸಮಿತಿ ಸಂಚಾಲಕ ಮಾಚಿಮಾಡ ರವೀಂದ್ರ ಹೇಳಿದರು. ಭಾರತೀಯ ಕಿಸಾನ್ ಸಂಘದ ವತಿಯಿಂದ ನಾಪೋಕ್ಲು ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷರಾದ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ ಕವಿ ಸಭಾಂಗಣದಲ್ಲಿ ನಡೆದ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಸಾಧಕ, ಬಾಧಕ ಹಾಗೂ ಪರಿಹಾರಕ್ಕೆ ಸಂಬಂಧಿಸಿದ ಕಾಫಿ ಬೆಳೆಗಾರರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದಲ್ಲಿ ಕಾಫಿಯ ಆಂತರಿಕ ಬಳಕೆ ಹೆಚ್ಚಬೇಕು. ಕಾಫಿ ರಾಷ್ಟ್ರೀಯ ಪಾನೀಯ ಆಗಬೇಕು ಎಂದ ಅವರು, ಡಿಸೆಂಬರ್ ತಿಂಗಳಲ್ಲಿ ಕೇಂದ್ರ ಸಚಿವರು ಚಿಕ್ಕಮಂಗಳೂರಿನ ಬಾಳೆಹೊನ್ನೂರಿಗೆ ಆಗಮಿಸಲಿದ್ದು, ಈ ಸಂದರ್ಭ ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಲಾಗುವುದು ಎಂದರು. ಭಾರತೀಯ ಕಿಸಾನ್ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕು. ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಕ್ಕಬೇಕಾದರೆ ಉತ್ತಮ ಸಂಘಟನೆಯಿಂದ ಮಾತ್ರ ಸಾಧ್ಯ ಎಂದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಪೆÇೀಕ್ಲು ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷರಾದ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಕೊಡಗು ಬೆಳೆಗಾರರ ಒಕ್ಕೂಟ ಏಳು ವರ್ಷಗಳ ಕಾಲ ಹೋರಾಟ ಮಾಡಿದೆ. ಸಂಘಟನೆ ಪ್ರಬಲವಾದಾಗ ಸಮಸ್ಯೆಗಳ ಪರಿಹಾರ ಸಾಧ್ಯ. ಕಾಫಿ ಬೆಳೆಗಾರರು ಸಾಧಕ ಬಾದಕಗಳ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸುವ ಅಗತ್ಯವಿದೆ ಎಂದರು. ಭಾರತೀಯ ಕಾಫಿ ಮಂಡಳಿ ಸದಸ್ಯರಾದ ತಳೂರು ಕಿಶೋರ್ ಕುಮಾರ್, ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷರಾದ ಪ್ರವೀಣ್, ಹಾಗೂ ಮುಂಡಂಡ ನಾಣಯ್ಯ, ಮನು ಮುತ್ತಪ್ಪ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಮಾತನಾಡಿದರು. ಬೆಳೆಗಾರರ ಸಮಸ್ಯೆ ಹಾಗೂ ಕಾಫಿ ಮಾರುಕಟ್ಟೆ, ಗುಣಮಟ್ಟ ಹೆಚ್ಚಿಸಿ ರಪ್ತಿಗಿಂತ ಹೆಚ್ಚಾಗಿ ಆಂತರಿಕ ಮಾರುಕಟ್ಟೆ ಬಗ್ಗೆ ಕಾಫಿ ಪುಡಿಗಳಲ್ಲಿ ಚಿಕೋರಿ ಮಿಶ್ರಣದಿಂದಾಗುವ ವಿಚಾರ ಸೇರಿದಂತೆ ಇನ್ನಿತರ ಬೆಳಗಾರರ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು. ಬೆಳೆಗಾರರಾದ ಪಾಂಡಂಡ ನರೇಶ್, ಕೊಂಡೀರ ಗಣೇಶ್, ಎನ್.ಎಸ್.ಉದಯಶಂಕರ್, ಹರೀಶ್ ಪೂವಯ್ಯ ಮತ್ತಿತರ ಬೆಳೆಗಾರರು ಚರ್ಚೆ ಹಾಗೂ ಸಲಹೆ ಸೂಚನೆ ಚರ್ಚೆಗಳಲ್ಲಿ ಪಾಲ್ಗೊಂಡಿದ್ದರು. ಶಿವಚಾಳಿಯಂಡ ಜಗದೀಶ್ ಸ್ವಾಗತಿಸಿ, ವಂದಿಸಿದರು.
ವರದಿ : ದುಗ್ಗಳ ಸದಾನಂದ.











