ವಿರಾಜಪೇಟೆ ಡಿ.9 NEWS DESK : ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಇನ್ಫೋಸಿಸ್ ಕಂಪೆನಿಯ ವತಿಯಿಂದ 15 ದಿವಸಗಳ ಕಾಲ ಸರ್ಟಿಫಿಕೇಟ್ ಕೋರ್ಸ್ ಅನ್ನು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಇನ್ಫೋಸಿಸ್ ಕಂಪನಿಯ ಸಿಎಸ್ಆರ್ ಚಟುವಟಿಕೆಯ ಅನ್ವಯ ಈ ಕೋರ್ಸ್ ಅನ್ನು ಆಯೋಜಿಸಲಾಗಿತ್ತು. ಸರ್ಟಿಫಿಕೇಟ್ ಕೋರ್ಸ್ ಗೆ ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆ.ಫಾ. ಮದಲೈ ಮುತ್ತು ಅವರು ಚಾಲನೆ ನೀಡಿದರು. ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಕಾರ್ಯಕ್ರಮದ ಸ್ವರೂಪದ ಬಗ್ಗೆ ಮಾತನಾಡಿದರು. 15 ದಿವಸಗಳ ಕಾಲ ಜರುಗಿದ ಕೋರ್ಸ್ ನಲ್ಲಿ ಇನ್ಫೋಸಿಸ್ ಕಂಪನಿಯ ತರಬೇತುದಾರರಾದ ನಳಿನಿ ಬಸವರಾಜ್ ಹಾಗೂ ವಿನೋದ್ ಮರಿ ರಾಜನ್ ವಿದ್ಯಾರ್ಥಿಗಳಿಗೆ ಸಂವಹನದ ವಿಧಾನ, ಭಾಷೆ ಹಾಗೂ ಸಾಫ್ಟ್ ಸ್ಕಿಲ್ಸ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ರೆಸ್ಯುಮ್ ಅನ್ನು ತಯಾರಿಸುವ ಬಗ್ಗೆ, ಸಂದರ್ಶನವನ್ನು ಎದುರಿಸುವ ಬಗ್ಗೆ ತರಬೇತಿಯನ್ನು ನೀಡಿದರು. ಜೊತೆಗೆ ವಿದ್ಯಾರ್ಥಿಗಳಿಗೆ ಗುಂಪು ಚಟುವಟಿಕೆಗಳನ್ನು ನೀಡುವುದರ ಮೂಲಕ ಸಂವಹನ, ಕೌಶಲ್ಯ ವೃದ್ಧಿಗೆ ತರಬೇತಿಗೊಳಿಸಿದರು. ಮಾದರಿ ಸಂದರ್ಶನವನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಸಂದರ್ಶನವನ್ನು ಎದುರಿಸುವ ಬಗೆ, ತಯಾರಿ ಮಾಡಿಕೊಳ್ಳುವ ಕುರಿತು ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳು ಹಾಗೂ ವೃತ್ತಿಪರ ಅಭಿವೃದ್ಧಿ ಚಟುವಟಿಕೆಗಳು ಈ ಸರ್ಟಿಫಿಕೇಟ್ ಕೋರ್ಸ್ ನ ಮುಖ್ಯ ಕೇಂದ್ರ ಬಿಂದುಗಳಾಗಿದ್ದವು. ಈ ಕೋರ್ಸ್ ನಲ್ಲಿ ಪದವಿ ಕಾಲೇಜಿನ ಅಂತಿಮ ತರಗತಿಯ ಬಿಕಾಂ, ಬಿಬಿಎ, ಬಿಸಿಎ, ಹಾಗೂ ಬಿಎಸ್ಸಿ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. :: ಮೈಸೂರು ಇನ್ಫೋಸಿಸ್ ಕ್ಯಾಂಪಸ್ ಗೆ ಭೇಟಿ ನೀಡಿದ ವಿದ್ಯಾರ್ಥಿಗಳು :: ಕಾಲೇಜಿನಲ್ಲಿ ಸರ್ಟಿಫಿಕೇಟ್ ಕೋರ್ಸ್ ಮುಕ್ತಾಯಗೊಂಡ ಬಳಿಕ ಅಂತಿಮ ಪದವಿಯ ವಿದ್ಯಾರ್ಥಿಗಳು ಉಪನ್ಯಾಸಕರನ್ನು ಒಳಗೊಂಡು ಮೈಸೂರಿನ ಇನ್ಫೋಸಿಸ್ ಕಾರ್ಪೊರೇಟ್ ತರಬೇತಿ ಕ್ಯಾಂಪಸ್ ಗೆ ಬೇಟಿ ನೀಡಿದರು. ವಿವಿಧಡೆಗಳಿಂದ ಆಗಮಿಸಿದ 900ಕ್ಕೂ ಅಧಿಕ ವಿದ್ಯಾರ್ಥಿಗಳು ಒಂದೆಡೆಯಲ್ಲಿ ಸೇರುವ ಮೂಲಕ ವಿದ್ಯಾರ್ಥಿ ಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇನ್ಫೋಸಿಸ್ ಕಾರ್ಪೊರೇಟ್ ಸಂಸ್ಥೆಯ ಸೆಲ್ವಪತಿ ಹಾಗೂ ಪವಿತ್ರ ರವರು ವಿದ್ಯಾರ್ಥಿಗಳಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಉದ್ಯೋಗ ಹಾಗೂ ಕೌಶಲ ಅಭಿವೃದ್ಧಿ, ಉದ್ಯೋಗ ಅವಕಾಶಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಪರಸ್ಪರ ಚರ್ಚೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಸೆಂಟ್ ಆನ್ಸ್ ಪದವಿ ಕಾಲೇಜಿನ ಉಪನ್ಯಾಸಕರುಗಳಾದ ಸಜೀರ, ಸುನಿತಾ, ನಿರ್ಮಲ, ಶಿಲ್ಪ, ಮುತ್ತಮ್ಮ, ನಮ್ರತಾ ಹಾಗೂ ಬಿನ್ಸಿ ಉಪಸ್ಥಿತರಿದ್ದರು.











