
ಮಡಿಕೇರಿ ಡಿ.12 NEWS DESK : ಇತ್ತೀಚಿನ ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಬಂದೂಕಿನಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬಂದೂಕಿಗೆ ಸಂಬಂಧಿಸಿದ ಕಾನೂನು ಬದಲಾಗಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಅವರು ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಲಹ ನಡೆಯುವ ಸಂದರ್ಭ ಮಹಿಳೆಯರು, ವಯೋವೃದ್ಧರು ಹಾಗೂ ಮಕ್ಕಳ ಮೇಲೆ ಕೂಡ ಬಂದೂಕಿನಿಂದ ದಾಳಿಯಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದ್ದು, ಉತ್ತಮ ನಾಗರೀಕ ಸಮಾಜ ನಿರ್ಮಾಣಕ್ಕೆ ಅಡ್ಡಿಯಾಗಿದೆ. ಪ್ರಸ್ತುತ ಇರುವ ಬಂದೂಕು ಕಾನೂನು ಅಪರಾಧ ತಡೆಗಟ್ಟಲು ವಿಫಲವಾಗಿದ್ದು, ಜನಸಾಮಾನ್ಯರ ರಕ್ಷಣೆ ಅಸಾಧ್ಯವಾಗಿದೆ. ಕೊಡಗಿನ ಸಂಸ್ಕೃತಿಗೆ ವಿರುದ್ಧವಾದ ಪ್ರಕ್ರಿಯೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಜಿಲ್ಲೆಯ ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಬೇಕು. ನಾಗರೀಕರ ರಕ್ಷಣೆಗಾಗಿ ಬಂದೂಕು ಕಾನೂನು ಬದಲಾವಣೆಗೆ ಒತ್ತಡ ಹೇರಬೇಕು ಎಂದು ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ.









