
ಮಡಿಕೇರಿ ಮೇ 26 NEWS DESK : ಕೊಡಗು ಜಿಲ್ಲೆಯಲ್ಲಿರುವ ಸುಮಾರು 60 ಸಾವಿರಕ್ಕೂ ಅಧಿಕ ನಿವೇಶನ ರಹಿತ ಬಡವರಿಗೆ ತಲಾ 5 ಸೆಂಟ್ ನಿವೇಶನ ಮಂಜೂರು ಮಾಡಬೇಕೆಂದು ಆಗ್ರಹಿಸಿ ಮೇ 29 ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಕೊಡಗು ಜಿಲ್ಲಾಧ್ಯಕ್ಷ ಕೆ.ಮೊಣ್ಣಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅವರು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಮತ್ತು ನವ ಕರ್ನಾಟಕ ನಿರ್ಮಾಣ ಆಂದೋಲನ ಸಮಿತಿ ವತಿಯಿಂದ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಹಳೇ ಖಾಸಗಿ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೇಡಿಕೆಗಳನ್ನು ಮಂಡಿಸಲಾಗುವುದು ಎಂದರು. ಪ್ರತಿಭಟನೆಯಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ರಾಜ್ಯ ಸಂಯೋಜಕ ಗೋಪಿನಾಥ್, ಖಜಾಂಚಿ ಆರ್.ಮುನಿಯಪ್ಪ, ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ, ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಹೆಚ್.ಡಿ.ಬಸವರಾಜು, ರೈತ ಸಂಘದ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಎನ್.ಮೂರ್ತಿ, ಯುನೈಟೆಡ್ ಕಿಸಾನ್ ಸಭಾದ ರಾಜ್ಯಾಧ್ಯಕ್ಷ ಡಿ.ಎಸ್.ನಿರ್ವಾಣಪ್ಪ ಸೇರಿದಂತೆ ಹಲವು ರಾಜ್ಯ ನಾಯಕರು ಹಾಗೂ ಕೊಡಗು ಜಿಲ್ಲೆಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಕಳೆದ ಅನೇಕ ವರ್ಷಗಳಿಂದ ಎಸ್.ಸಿ, ಎಸ್.ಟಿ ಸಮುದಾಯ, ಅಲ್ಪಸಂಖ್ಯಾತರು ಹಾಗೂ ಕೂಲಿ ಕಾರ್ಮಿಕ ವರ್ಗದ ಬಡ ಮಂದಿ ಸ್ವಂತ ನಿವೇಶನವಿಲ್ಲದೆ ಗುಡಿಸಲುಗಳಲ್ಲಿ ಮತ್ತು ಲೈನ್ ಮನೆಗಳಲ್ಲಿ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಸ್ವಂತ ನಿವೇಶನಕ್ಕಾಗಿ ಬಡವರು ಎಷ್ಟೇ ಪರಿಣಾಮಕಾರಿಯಾಗಿ ಹೋರಾಟ ನಡೆಸುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬಡವರಿಗೆ ನಿವೇಶನ ಹಂಚಿಕೆ ಮಾಡುವ ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು. ಭೂಕಬಳಿಕೆದಾರರ ಬಳಿ ಇರುವ ಸರಕಾರಿ ಭೂಮಿಯ ಒತ್ತುವರಿಯನ್ನು ತಕ್ಷಣ ತೆರವು ಮಾಡಬೇಕು. ಬಡವರಿಗೆ ನಿವೇಶನ ಹಂಚಿಕೆ ಮಾಡಲು ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ 50 ಎಕರೆ ಭೂಮಿ ಕಾಯ್ದಿರಿಸಬೇಕು. ಮಡಿಕೇರಿ ತಾಲ್ಲೂಕಿನ ಹೊದ್ದೂರು ಗ್ರಾಮ, ಪೊನ್ನಂಪೇಟೆಯ ಬಿ.ಶೆಟ್ಟಿಗೇರಿ, ಚೆಟ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ಪೊನ್ನತ್ ಮೊಟ್ಟೆ ಭಾಗದಲ್ಲಿ ಮತ್ತು ಮಾದಾಪುರದ ಕುಂಬೂರು ಗ್ರಾಮದಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ನಿವೇಶನಕ್ಕಾಗಿ ಹೋರಾಟ ನಡೆಸುತ್ತಿರುವವರ ಬೇಡಿಕೆಯನ್ನು ಆಲಿಸಲು ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಬೇಕು. ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿರುವ 20 ಸಾವಿರ ನಿವೇಶನ ರಹಿತರಿಗೆ ಹಾಗೂ ಕುಶಾಲನಗರ ತಾಲ್ಲೂಕಿನಲ್ಲಿರುವ 6,500 ಬಡ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು. ಕಾಕೋಟುಪರಂಬು, ಹಾಲುಗುಂದ, ಬಿಳಿಬಾಣೆ, ಹೊದ್ದೂರಿನ ಭಗವತಿ ಕಾಲೋನಿ, ಕುಂಬಳದಾಳು, ನರಿಯಂದಡ ವ್ಯಾಪ್ತಿಯ ಬಡವರ ಮನೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಕೆ.ಮೊಣ್ಣಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ಕುಸುಮಾವತಿ, ಉಪಾಧ್ಯಕ್ಷರುಗಳಾದ ಟಿ.ಜಗದೀಶ್ ಕಿರಣ್, ಎಂ.ಮಾದೇಶ, ಕಾರ್ಯದರ್ಶಿಗಳಾದ ಶಿವಪ್ಪ ಹಾಗೂ ಸುದೀಪ್ ಉಪಸ್ಥಿತರಿದ್ದರು.









