
ಮಡಿಕೇರಿ ಏ.29 NEWS DESK : ಸೇವೆ ಅಂದರೆ ನಿಸ್ವಾರ್ಥವೇ, ತ್ಯಾಗವೇ, ಸ್ವಾರ್ಥದ ಮುಖವಾಡವೇ, ವೃತ್ತಿಯೊ, ಹಣ ಹಾಗೂ ಅಧಿಕಾರದ ಪ್ರಚಾರದ ಮೋಹವೊ, ನಾಯಕತ್ವದ ಪ್ರದರ್ಶನವೊ? ಬದುಕಿನ ಸಾರ್ಥಕತೆಯೊ? ಎಂಬ ನನ್ನ ಮನದಲ್ಲಿ ಮೂಡಿದ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಒಂದು ಸಣ್ಣ ಪ್ರಯತ್ನ ಈ ಬರವಣಿಗೆ ಮೂಲಕ. ಸೇವೆ ಅಂದರೆ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವ ಕೆಲಸ ಒಂದು ರೀತಿಯ ಸೇವೆ. ಇನ್ನೊಂದು ರೀತಿಯ ಸೇವೆ ಪ್ರತಿಫಲ ಪಡೆದು ಕೆಲಸ ಮಾಡುವುದು. ಅವುಗಳು ಸರ್ಕಾರಿ ಸೇವೆ, ವಿದ್ಯಾ ಕ್ಷೇತ್ರ, ನಾಗರೀಕ ಸೇವೆ, ವ್ಯದ್ಯಕೀಯ ಸೇವೆ, ಸೇನೆ, ಪೊಲೀಸ್ ಸೇರಿ ದೇಶದ ಸೇವೆ, ರೈತರದು, ವ್ಯಾಪಾರ ಸಾರಿಗೆ ಹೀಗೆ ನಾವು ಅಥವಾ ಸರಕಾರ ಸಂಘ ಸಂಸ್ಥೆಗಳು ಈ ವಿಭಾಗದ ಪಟ್ಟಿ ಮಾಡುತ್ತಾ ಹೋದರೆ ಪುಟಗಟ್ಟಲೆ ಇದೆ. ಇಲ್ಲಿ ಮಾಡುವ ಕೆಲಸಕ್ಕೆ ಪ್ರತಿಫಲ ಪಡೆದರೂ ಸೇವಾ ಮನೋಭಾವ ಇರುತಿತ್ತು. ಹಿಂದೆ ಇದ್ದ ಸೇವಾ ಮನೋಭಾವನೆ ಈಗ ಯಾವ ಕ್ಷೇತ್ರದಲ್ಲೂ ಇಲ್ಲ. ಇಂದು ಸೇವೆ ಎಂಬುದು ಬರಿ ಬಿಕರಿಯ ವಸ್ತುವಾಗಿದೆ. ಸಮಾಜದಲ್ಲಿ ಇದು ವ್ಯಾಪಾರಿ ಮನೋಭಾವದಿಂದ ಕೂಡಿದೆ. ಅದು ಪ್ರತಿಫಲ ಅಪೇಕ್ಷೆ ಇಲ್ಲದೆ ಮಾಡುವುದು ಆಗಿರಬಹುದು ಅಥವಾ ಪ್ರತಿಫಲ ಅಪೇಕ್ಷೆ ಪಡೆದು ಮಾಡುವುದು ಆಗಿರಬಹುದು. ಅದಕ್ಕೆ ಕೆಲವು ಉದಾಹರಣೆ ನೀಡುತ್ತೇನೆ. ಒಂದಷ್ಟು ವರುಷಗಳ ಹಿಂದೆ ನಮ್ಮ ಹಿರಿಯರ ಕಾಲದಲ್ಲಿ ಸಾಧಾರಣವಾಗಿ ಸಮಾಜದಲ್ಲಿ ಸ್ಥಿತಿವಂತರು ಕಾಲದಲ್ಲಿ ಬೆರಳೆಣಿಕೆಯಷ್ಡೇ. ಜನರಿದ್ದರೂ ಅವರು ಊರಿನ ಅಭಿವೃದ್ಧಿಗೆ ದೇವಸ್ಥಾನ, ಜಾತ್ರೆ, ಹಾಸ್ಪಿಟಲ್, ಶಾಲೆ ನಿರ್ಮಾಣಗಳಿಗೆ ಜಾಗ ಹಾಗೂ ಹಣ ಸಹಾಯ ಮಾಡುತ್ತಿದ್ದರು. ಅಂದು ಯಾವುದೇ ಪ್ರಚಾರ ಮಾಡಿದ ಸೇವೆ ನೆಪದಲ್ಲಿ ಇಂದಿಗೂ ಸಮಾಜದಲ್ಲಿ ಉಳಿದಿದೆ. ಇಂದು ಸಮಾಜದ ಸೇವೆಯ ಸಂಘ ಸಂಸ್ಥೆಗಳು ಹುಟ್ಟಿಕೊಂಡಿದೆ. ಕೆಲವು ಸಂದರ್ಭಕ್ಕೆ ತಕ್ಕಂತೆ ಹುಟ್ಟಿಕೊಳ್ಳುತ್ತದೆ. ಇನ್ನು ಕೆಲವರಿಗೆ ಬರಿ ಸಮಾಜದಲ್ಲಿ ಸಮಾಜಮುಖಿ ಕೆಲಸ ಮಾಡುವುದೇ ಅವರ ಕಾಯಕ. ಅವರು ಮಾಡಿದ ಕೆಲಸಕ್ಕೆ ಯಾವುದೇ ಪ್ರತಿಫಲ ನಿರೀಕ್ಷೆ ಇಟ್ಟು ಕೊಳ್ಳುತಿರಲಿಲ್ಲ. ಅದು ಅಂದು ಇತ್ತು ಇಂದು ಇದೆ. ಇನ್ನು ಎರಡನೇ ಕ್ಷೇತ್ರದಲ್ಲಿ ಮಾಡುವ ಕೆಲಸಕ್ಕೆ ಪ್ರತಿಫಲ ಪಡೆದುಕೊಂಡರೂ ಇವರಿಗೆ ಸೇವಾ ಮನೋಭಾವ ಕಂಡು ಬರುತ್ತಾ ಇತ್ತು. ಉದಾಹರಣೆಗೆ ಸರ್ಕಾರದ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಆಗ ಸೇವೆ ಮುಖ್ಯವಾಗಿತ್ತು. ಹಿಂದೆ ಕೆಲಸಕ್ಕೆ ಸಂಬಳ ತೆಗೆದುಕೊಳ್ಳುತಿದ್ದರೂ ಜನರಿಗೆ ಸೇವೆ ಮಾಡುವ ಉದ್ದೇಶ ಇತ್ತು. ಅಂದು ಸರಕಾರಿ ಕಚೇರಿಗೇ ಒಂದು ಸಮಸ್ಯೆ ತೆಗೆದುಕೊಂಡು ಹೋದರೆ ಅದಕ್ಕೆ ಪರಿಹಾರ ಸಿಗುತಿತ್ತು. ಇಂದು ಸಮಸ್ಯೆ ಒಂದನ್ನು ತೆಗೆದುಕೊಂಡು ಹೋದರೆ ಅದು ನೂರು ಸಮಸ್ಯೆಯಾಗಿ ಪರಿವರ್ತನೆಯಾಗಿ ಉತ್ತರ ಸಿಗದೇ ಪರಿತಪಿಸುವಂತೆ ಮಾಡಿ ಬಿಡುತ್ತಾರೆ. ಇನ್ನು ಸಮಾಜದಲ್ಲಿ ಮಾನವನಿಗೆ ಮುಖ್ಯವಾದವು ರಾಜಕೀಯ ಕ್ಷೇತ್ರ ವಿದ್ಯಾ ಕ್ಷೇತ್ರ, ವೈದ್ಯಕೀಯ ಕ್ಷೇತ್ರ ಇಂದು ಸೇವೆ ಎಂಬ ಶಬ್ದ ಸಂಪೂರ್ಣವಾಗಿ ಸತ್ತು ಹೋಗಿ ವರ್ಷಗಳಾಯಿತು. ಇಂದು ರಾಜಕೀಯ ಬಂಡವಾಳ ಹಾಕಿ ಬಂಡವಾಳ ಪಡೆಯುವುದು ಬಿಟ್ಟರೆ ಇಲ್ಲಿ ಜನ ಸೇವೆಗೆ ಅವಕಾಶವಿಲ್ಲ. ಚುನಾವಣೆಗೆ ಕೋಟಿಗಟ್ಟಲೆ ಖರ್ಚು ಮಾಡಿ ಅಧಿಕಾರಕ್ಕೆ ಬರುವುದು. ಬಂದ ನಂತರ ವಾಮಮಾರ್ಗ ಹಿಡ್ಕೊಂಡು ಅದನ್ನು ವಾಪಸ್ಸು ಪಡೆಯುವ ಮಾರ್ಗ ರೂಪಿಸುವುದು. ಇನ್ನು ವೈದ್ಯಕೀಯ ಕ್ಷೇತ್ರವಂತೂ ಸಂಪೂರ್ಣ ಕೆಟ್ಟು ನಿಂತಿದೆ. ಇಂದು ಹಾಸ್ಪಿಟಲ್‍ಗಳೆಂದರೆ ಹಣ ಕೊಟ್ಟು ಹೆಣ ತರುವ ಫ್ಯಾಕ್ಟರಿಯಾಗಿ ಪರಿವರ್ತನೆ ಗೊಂಡಿದೆ. ಇದರ ಕರ್ಮಕಾಂಡ ಬರೆಯುತ್ತಾ ಹೋದರೆ ಸಂಪುಟಗಳ ಪುಸ್ತಕವಾದಿತು. ಇನ್ನು ಬಡವರ ಪಾಲಿಗೆ ಉತ್ತಮ ವೈದ್ಯಕಿಯ ಸೇವೆ, ಒಳ್ಳೆ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ. ಇನ್ನು ಸೇನೆ ಅಥವಾ ಪೊಲೀಸ್ ಇಲಾಖೆಗೆ ಯಾರು ದೇಶದ ಸೇವೆ ಮಾಡಲು ಸೇರಿದ್ದೇವೆ ಅನ್ನುವುದು ಬರಿ ಹಸಿ ಸುಳ್ಳು. ಸೇನೆಗೆ ದೇಶದ ಸೇವೆಗೆ ಎಂದು ಯಾರು ಸೇರುವುದಿಲ್ಲ. ಎಲ್ಲರೂ ಕೆಲಸಕ್ಕಾಗಿ ಸೇರುತ್ತಿದ್ದರು. ಆದರೆ ಹಿಂದೆ ಕೆಲಸಕ್ಕೆ ಸೇರಿದ ನಂತರ ದೇಶದ ಮೇಲಿನ ಅಭಿಮಾನದಿಂದ ಕೆಲಸ ಮಾಡುತಿದ್ದರು. ಅದು ಕೂಡ ಎಲ್ಲರೂ ಅಲ್ಲ. ಈಗ ಅದು ಹೆಚ್ಚಿನವರಿಗೆ ಉದ್ಯೋಗ ಮಾಡುವ ಕ್ಷೇತ್ರವಾಗಿದೆ. ಸೇನೆ ಗಡಿಗಳಲ್ಲಿ ಕಾರ್ಯನಿರ್ವಹಿಸುವ ಯೋಧರು ನಿಜವಾಗಲೂ ಕಷ್ಟ ಪಡುತ್ತಾರೆ. ಹೆಚ್ಚಿನವರು ತಮ್ಮ ಸೇವಾ ಅವಧಿಯನ್ನು ಮುಗಿಯೋದು ಕಾಯುತ್ತಾ ಇರುತ್ತಾರೆ. ಕನಿಷ್ಠ ಸೇವಾ ಅವಧಿ ಮುಗಿಸಿ ಪಿಂಚಣಿ ಪಡೆದು ಹೊರಗೆ ಬಂದು ನಾಗರೀಕ ಸೇವೆಗೆ ಸೇರಿಬಿಡುತ್ತಾರೆ. ಇಲ್ಲಿ ದೇಶದ ಸೇವೆಯ ಪ್ರಶ್ನೆ ಎಲ್ಲಿ ಬಂತು. ಒಂದು ಕಾಲವಿತ್ತು. ಸೇನೆಯಲ್ಲಿ ಸೇವೆ ಸಲ್ಲಿಸಿದವರನ್ನು ಸಮಾಜದಲ್ಲಿ ಗುರುತಿಸಬಹುದಿತ್ತು. ಇಂದು ಅದು ಪೂರ್ಣ ಪ್ರಮಾಣದಲ್ಲಿ ಮಾಯವಾಗಿದೆ. ಈಗ ಏನಿದ್ದರೂ ಲಾಭ ನಷ್ಟದ ಲೆಕ್ಕಚ್ಚಾರ. ಅದು ಎಲ್ಲಾ ಇಲಾಖೆಯಲ್ಲೂ ಸರ್ವೇ ಸಾಮಾನ್ಯ. ಏಕೆಂದರೆ ಇಂದು ಕೆಲಸ ಸೇರುವುದರಿಂದ ಹಿಡಿದು ಬೇಕಾದ ಕಡೆ ಕೆಲಸ ಮಾಡಲು ಲಂಚ, ಪ್ರಭಾವ ಬಳಸಿಕೊಂಡು ತಮಗೆ ಆದಾಯ ಮತ್ತು ಅನುಕೂಲ ಇರುವಲ್ಲಿ ಕೆಲಸ ಮಾಡುತ್ತಾರೆ ಹೊರತು ಸರ್ಕಾರ ನೀಡುವ ಜಾಗದಲ್ಲಿ ಸೇವಾ ಮನೋಭಾವನೆ ಯಿಂದ ಅಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಗ್ರಾಮೀಣ ಭಾಗದಲ್ಲಿ ಇಂದಿಗೂ ಉತ್ತಮ ವೈದ್ಯಕೀಯ ಶಿಕ್ಷಣ ಸೇವೆಗಳು ಎಲ್ಲಾ ಸರಕಾರಿ ಸೇವೆಗಳು ಗ್ರಾಮಾಂತರ ಪ್ರದೇಶದಲ್ಲಿ ಮರೀಚಿಕೆಯಾಗಿದೆ. ಎಲ್ಲರಿಗೂ ನಗರ ಪ್ರದೇಶವೇ ಬೇಕು. ಸರಕಾರಿ ಕೆಲಸ ಮಾಡಲು ಅವರಿಗೆ ಜನಸೇವೆ ಮುಖ್ಯ ಅಲ್ಲ. ಸ್ವಾರ್ಥ ಮುಖ್ಯ ತಮ್ಮ ಅನೂಕೂಲತೆಗೆ ತಕ್ಕಂತೆ ಇವರ ಸೇವೆ. ಇದಕ್ಕೆ ಇನ್ನೊಂದು ಉದಾಹರಣೆ ಎಂದರೆ ಕೃಷಿ ವಿದ್ಯಾನಿಲಯಗಳು ಮತ್ತು ಕೃಷಿ ಇಲಾಖೆಗಳು ಸರಕಾರ ಸಾವಿರಾರು ಕೋಟಿ ಅನುದಾನ ನೀಡಿ ಕೃಷಿ ಅಭಿವೃದ್ಧಿಯ ಉದ್ದೇಶದಿಂದ ಯಾವ ಕ್ಷೇತ್ರಕ್ಕೆ ಹಣ ಖರ್ಚು ಮಾಡುತ್ತಿದೆಯೋ ಆ ಉದ್ದೇಶ ಇಂದಿಗೂ ಫಲಪ್ರದವಿಲ್ಲ. ಏಕೆಂದರೆ ಇಲ್ಲಿಯು ಕೂಡ ಇವರ ಶಬ್ಧ ಭಂಡಾರದಲ್ಲಿ ಸೇವೆ ಎಂಬ ಶಬ್ಧ ನಾಪತ್ತೆಯಾಗಿದೆ. ನೀರಿಗಿಳಿಯದೆ ಮೀನು ಹಿಡಿಯುವ ಎಂಬ ಗಾದೆಯಂತೆ ಮಣ್ಣಿಗೆ ಇಳಿಯದೆ ಕೃಷಿ ಅಭಿವೃದ್ಧಿ ಮಾಡುವ ಅಧಿಕಾರಿಗಳು ಹಳ್ಳಿಯನ್ನೇ ಕಂಡಿಲ್ಲ ಪಟ್ಟಣದಲ್ಲಿಯೇ ಕುಳಿತು ಇವರ ದರಬಾರು. ಕೃಷಿ ಅಧಿಕಾರಿಗಳಿಗಿಂತ ವೃತ್ತಿಪರ ಕೃಷಿಕರೇ ಎಷ್ಟೋ ಮೇಲು. ಇಂದು ಭಾರತದಲ್ಲಿ ಕೃಷಿ ಎಂಬುವುದು ಉಳಿದಿದ್ದರೆ ಕೃಷಿ ವಿಜ್ಞಾನಿಗಳಿಂದ, ಅಧಿಕಾರಿಗಳಿಂದಲ್ಲ ಕೃಷಿಕರಿಂದ ಮಾತ್ರ. ಹಿಂದೆ ನ್ಯಾಯಾವಾದಿಗಳು ಸಮಾಜದ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದರು. ಇಂದು ಅವರು ತಮ್ಮ ಜೀವನ ಕಂಡುಕೊಳ್ಳುವಲ್ಲಿ ಮಾತ್ರ ಅವರ ಜೀವನ ಸೀಮಿತವಾಗಿದೆ. ಇಂದು ವಕೀಲರು ಸಮಾಜದ ಯಾವುದೇ ಅನ್ಯಾಯಗಳ ವಿರುದ್ಧ ಪ್ರತಿಭಟಿಸುವುದು ಮರಿಚಿಕೆಯಾಗಿದೆ. ಇಂದು ಸೇವೆ ಮಾನವನ ಒಂದು ರೀತಿಯ ಫ್ಯಾಷನ್ ಆಗಿ ಪರಿವರ್ತನೆ ಆಗಿದೆ. ಮನುಷ್ಯನ ಸೇವೆ ಎಲ್ಲಿಗೆ ಬಂದಿದೆ ಅಂದರೆ ದೇವರಿಗೂ ಸೇವೆ ಮಾಡುವಷ್ಟ್ಟು ಬೆಳೆದಿದ್ದು ಅನೇಕ ದೇವಾಲಯದ ಮುಂದೆ ಬೋರ್ಡ್‍ಗಳು ರಾರಾಜಿಸುತ್ತಿದೆ ಇಂದಿನ ಸೇವಾ ಕರ್ತರು ಅಂತ. ಅದು ಅಲ್ಲದೇ ದೇವಾಲಯದ ನಿರ್ಮಾಣಕ್ಕೂ ಅದರ ಆಡಳಿತ ಮಂಡಳಿಯಲ್ಲಿ ಕೆಲಸ ಮಾಡಿದಕ್ಕೆ ಸರಕಾರದಿಂದ ಅನುದಾನ ಒದಗಿಸಿ ಕೊಟ್ಟದ್ದಕ್ಕೆ ಸನ್ಮಾನ ಮಾಡಿಸಿಕೊಳ್ಳುವ ಪರಿಪಾಠ ಇತೀಚಿಗಿನ ದಿನಗಳ ಕಾಣಿಸ್ತಾ ಇದೆ. ಇದನ್ನು ಯಾವ ರೀತಿಯ ಸೇವೆ ಎಂದು ಪರಿಗಣಿಸುವುದು ತಿಳಿಯದು. ಇನ್ನು ಹಣವಂತರಿಗೆ ಸೇವೆ ಎಂಬುದು ಸಮಾಜದಲ್ಲಿ ತಮ್ಮ ಘನತೆ ಹೆಚ್ಚಿಸಿಕೊಳ್ಳುವ ದಾರಿ ಹಾಗೂ ತಮ್ಮ ವ್ಯವಹಾರವನ್ನು ವೃದ್ಧಿ ಮಾಡಿಕೊಳ್ಳುವ ಮಾರ್ಗ. ಈಗ ಯಾರನಾದ್ರು ಯಾವುದಾದರು ಸಮಾರಂಭಕ್ಕೆ ಅತಿಥಿಯಾಗಿ ಕರೆಯಬೇಕಾದ್ರು ಅವರಿಂದ ಎಷ್ಟು ಸಿಗುತ್ತೆ ಅಂತ ನೋಡಿಯೇ ಕರೆಯುವುದು. ಮೊದಲೆಲ್ಲ ಸಮಾರಂಭಕ್ಕೆ ಸಂಬಂಧ ಪಡುವಂತಹ ವ್ಯಕ್ತಿಗಳನ್ನೇ ಅತಿಥಿ ಯಾಗಿ ಕರೆಯುವ ಪರಿಪಾಠವಿತ್ತು. ಈಗ ಅದೆಲ್ಲ ಮಾಯಾವಾಗಿದೆ. ಹೀಗೆ ಸೇವೆ ಇಲ್ಲೂ ಪರಿಗಣನೆಗೆ ಬರುವುದಿಲ್ಲ.
ಕೊನೆ ಹನಿ :: ನಮ್ಮ ಹಿರಿಯರು ಹೇಳುತಿದ್ದರು… ನಾವು ಎಡಕೈಯಲ್ಲಿ ಕೊಟ್ಟದ್ದು ಬಲಕೈಗೆ ಗೊತ್ತಾಗಬಾರದು ಅಂತ. ಈಗ ಅದು ಎಡಕೈಯಲ್ಲಿ ಕೊಟ್ಟರೆ ಬಲಕೈಯಲ್ಲಿ ಸೆಲ್ಫಿ ತೆಗೆದುಕೊಂಡು ವೈರಲ್ ಮಾಡಿ ಎಂದು ಬದಲಾವಣೆಯಾಗಿದೆ.
ಬರಹ : ಬಾಳೆಯಡ ಕಿಶನ್ ಪೂವಯ್ಯ
ಲೇಖಕರು ಮತ್ತು ವಕೀಲರು
ಮಡಿಕೇರಿ.
ಫೋನ್: 9448899554










