ಮಡಿಕೇರಿ ಏ.17 : ವಿಧಾನಸಭೆ ಚುನಾವಣೆ ಹಿನ್ನೆಯಲ್ಲಿ ಸಾರ್ವಜನಿಕರು ನಿಭೀತಿಯಿಂದ ಮತ ಚಲಾಯಿಸುವಂತೆ ಧೈರ್ಯ ತುಂಬುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ನಗರದಲ್ಲಿ ಪಥ ಸಂಚಲನ ನಡೆಯಿತು. ಪಥಸಂಚಲನಕ್ಕೆ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಚಾಲನೆ ನೀಡಿದರು. ಮಂಗೇರಿರ ಮುತ್ತಣ್ಣ ವೃತ್ತದ ಮೂಲಕ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ಮಹದೇವಪೇಟೆ, ತ್ಯಾಗರಾಜ ಕಾಲೋನಿ, ಮುತ್ತಪ್ಪ ದೇವಾಲಯ ಮಾರ್ಗವಾಗಿ ಪೊಲೀಸ್ ಕವಾಯತು ಮೈದಾನದವರೆಗೆ ಪಥಸಂಚಲನ ನಡೆಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಮತ್ತು ಸೇನಾ ತುಕಡಿಗಳ ಸಿಬ್ಬಂದಿ ಸೇರಿದಂತೆ ಸುಮಾರು 400 ಮಂದಿ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.
ಲೇಖಕ: admin
ಮಡಿಕೇರಿ ಏ.17 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಅವರು ಇಂದು ನಾಮಪತ್ರ ಸಲ್ಲಿಸಿದರು. ಪಕ್ಷದ ಪ್ರಮುಖರೊಂದಿಗೆ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಮಂಥರ್ ಗೌಡ, ಮಡಿಕೇರಿ ಕ್ಷೇತ್ರದ ಚುನಾವಣಾಧಿಕಾರಿ ಡಾ.ಯತೀಶ್ ಉಲ್ಲಾಳ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಕಾಂಗ್ರೆಸ್ ಪ್ರಮುಖರಾದ ಹೆಚ್.ಎಸ್.ಚಂದ್ರಮೌಳಿ, ಲೋಕೇಶ್ ಹಾಗೂ ಮಂಥರ್ ಗೌಡ ಪತ್ನಿ ದಿವ್ಯ ಹಾಜರಿದ್ದರು. ::: ಮೆರವಣಿಗೆ ::: ನಾಮಪತ್ರ ಸಲ್ಲಿಕೆಗೂ ಮೊದಲು ಡಾ.ಮಂಥರ್ ಗೌಡ ಅವರು ತಮ್ಮ ನಿವಾಸದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿದರು. ನಂತರ ನಗರದ ಶ್ರೀ ಚೌಡೇಶ್ವರಿ ದೇವಾಲಯ ಬಳಿಯಿಂದ ಗಾಂಧಿ ಮೈದಾನದವರೆಗೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು.
ನಾಪೋಕ್ಲು ಏ.17 : ನಾಪೋಕ್ಲು ಸಮೀಪದ ಕಕ್ಕುಂದಕಾಡು ಪೌರಾಣಿಕ ಹಿನ್ನೆಲೆಯ ಶ್ರೀ ಕರಿಚಾಮುಂಡಿ ದೈವದ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯದ ತಕ್ಕ ಮುಖ್ಯಸ್ಥ ಸೂರ್ಯಕುಮಾರ್ ಅವರ ಮನೆಯಿಂದ ಭಕ್ತಾಧಿಗಳೊಂದಿಗೆ ಕರಿಚಾಮುಂಡಿ ದೇವಸ್ಥಾನಕ್ಕೆ ದೈವದ ಆಯುಧ ಹಾಗೂ ವಸ್ತ್ರ ಆಭರಣಗಳಿರುವ ಭಂಡಾರವನ್ನು ತರಲಾಯಿತು. ನಂತರ ರಾತ್ರಿ ತೋತ, ಚನ್ನಾಲೆ ಮೂರ್ತಿ, ತಮ್ಮಚ್ಚ ಪೊಟ್ಟು ಗುಳಿಗ, ಕೊರತಿ,ಆಂಗಾರೆ ಉತ್ಸವ ನಡೆಯಿತು. ಗುಳಿಗ ಹಾಗೂ ಕರಿ ಚಾಮುಂಡಿ ಕೋಲ ಗಮನ ಸೆಳೆಯಿತು. ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಹರಕೆ ಕಾಣಿಕೆ ಒಪ್ಪಿಸಿ ದೈವದ ಪ್ರಸಾದ ಪಡೆದುಕೊಂಡರು.(ದುಗ್ಗಳ ಸದಾನಂದ).
ಚೆಟ್ಟಳ್ಳಿ ಏ.17 : ಚೆಟ್ಟಳ್ಳಿಯ ಶ್ರೀಮಂಗಲ (ಪೊವ್ವೊದಿ ) ಭಗವತಿ ಉತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಪಟ್ಟಣಿ ಹಬ್ಬದೊಂದಿಗೆ ಆರಂಭವಾದ ಉತ್ಸವವು ಊರಿನವರ ಸಮ್ಮುಖದಲ್ಲಿ ದುಡಿಕೊಟ್ಟುಹಾಡಿನೊಂದಿಗೆ ದೇವಾಲಯ ತಕ್ಕರಾದ ಮುಳ್ಳಂಡ ಐನ್ ಮನೆಯಿಂದ ಎತ್ತುಪೋರಾಟ ದೊಂದಿಗೆ ದೇವರಭಂಡಾರವನ್ನು ತರಲಾಯಿತು. ನಂತರ ದೇವಿಗೆ ವಿಶೇಷ ಪೂಜೆ ನೆರವೇರಿತು. ದೊಡ್ದಹಬ್ಬ ದಂದು ದೇವರ ಭಂಡಾರವನ್ನು ದೇವಾಲಯಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ತೆಂಗಿಕಾಯಿ ಎಳೆಯುವುದು,ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ಬೊಳಕ್ ಮರವನ್ನು ತೆಗೆದು ದೇವಾಲಯದ ಗರ್ಭಗುಡಿಯೊಳಗೆ ಇಡಲಾಯಿತು. ದೇವರ ನೆಲೆಯಲ್ಲಿ ಭಕ್ತಾದಿಗಳು ಹರಕೆ ಕಾಣಿಕೆ ಒಪ್ಪಸಿದರು. ಪ್ರಸಾದ ವಿತರಣೆ ನೆರವೇರಲಿತು. ಬಳಿಕ ದೇವಾಲಯದಲ್ಲಿ ಶುದ್ದ ಕಳಸ ಪೂಜೆ ನೆವೇರಿಸಿ, ಭಂಡಾರವನ್ನು ತಕ್ಕರಾದ ಮುಳ್ಳಂಡ ಐನ್ ಮನೆಯಲ್ಲಿ ಒಪ್ಪಿಸಲಾಯಿತು.
ಮಡಿಕೇರಿ ಏ.17 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಕೆ.ಜಿ.ಬೋಪಯ್ಯ ಅವರು ಇಂದು ವಿರಾಜಪೇಟೆಯಲ್ಲಿ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿ ಶಬಾನಾ ಎಂ.ಶೇಕ್ ಅವರಿಗೆ ನಾಮಪತ್ರ ಸಲ್ಲಿಸಿದ ಶಾಸಕರು 5 ನೇ ಬಾರಿಗೆ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು. ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆ ನಡೆಸಿ ಬೋಪಯ್ಯ ಪರ ಘೋಷಣೆಗಳನ್ನು ಕೂಗಿದರು. ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾಕುಶಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮತ್ತಿತರರು ಹಾಜರಿದ್ದರು.
ಮಡಿಕೇರಿ ಏ.17 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಇಂದು ನಾಮಪತ್ರ ಸಲ್ಲಿಸಿದರು. ಮಡಿಕೇರಿಯಲ್ಲಿ ಪಕ್ಷದ ಪ್ರಮುಖರೊಂದಿಗೆ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಎಂ.ಪಿ.ಅಪ್ಪಚ್ಚು ರಂಜನ್ , ಕ್ಷೇತ್ರದ ಚುನಾವಣಾಧಿಕಾರಿ ಡಾ.ಯತೀಶ್ ಉಲ್ಲಾಳ್ ಅವರಿಗೆ ನಾಮಪತ್ರ ಸಲ್ಲಿಸಿದರು. ::: ಮೆರವಣಿಗೆ ::: ನಾಮಪತ್ರ ಸಲ್ಲಿಕೆಗೂ ಮುನ್ನ ಅಪ್ಪಚ್ಚು ರಂಜನ್ ಅವರು ನಗರದ ಶ್ರೀ ಚೌಡೇಶ್ವರಿ ದೇವಾಲಯದ ಆವರಣದಿಂದ ಗಾಂಧಿ ಮೈದಾನದವರೆಗೆ ಪಕ್ಷದ ನೂರಾರು ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು.
ಮಡಿಕೇರಿ ಏ.17 : ಪಕ್ಷೇತರ ಅಭ್ಯರ್ಥಿಯಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಗರಗಂದೂರು ಗ್ರಾಮದ ಜಿ.ಜಿ.ಹೇಮಂತ್ ಕುಮಾರ್ ಇಂದು ನಾಮಪತ್ರ ಸಲ್ಲಿಸಿದರು. ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ ಹೇಮಂತ್ ಕುಮಾರ್ ಮಡಿಕೇರಿ ಕ್ಷೇತ್ರದ ಚುನಾವಣಾಧಿಕಾರಿ ಡಾ.ಯತೀಶ್ ಉಲ್ಲಾಳ್ ಅವರಿಗೆ ನಾಮಪತ್ರ ಸಲ್ಲಿಸಿದರು. ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿರುವ ಇವರು ಕ್ಷೇತ್ರದ ಮತದಾರರು ಬದಲಾವಣೆಯನ್ನು ಬಯಸಿದ್ದಾರೆ ಎಂದರು. ಕಳೆದ 30 ವರ್ಷಗಳಿಂದ ಬಿಜೆಪಿಯ ಪ್ರಮಾಣಿಕ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸಿದ್ದೇನೆ. ಆದರೆ ಬಿಜೆಪಿಯಲ್ಲಿ ನೈಜ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಆದ್ದರಿಂದ ಮನನೊಂದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಮಂತ್ ಕುಮಾರ್ ಸ್ಪಷ್ಟಪಡಿಸಿದರು.
ಮಡಿಕೇರಿ ಏ.17 : ಪೊನ್ನಂಪೇಟೆಯ ಆಸ್ಟ್ರೋ ಟ್ರಾಫ್ ಮೈದಾನದಲ್ಲಿ ಹಾಕಿ ಬೇಸಿಗೆ ಶಿಬಿರ ಆರಂಭಗೊಂಡಿದ್ದು, 75ಕ್ಕೂ ಹೆಚ್ಚು ಭವಿಷ್ಯದ ಹಾಕಿ ಕ್ರೀಡಾ ಕಲಿಗಳು ಲವಲವಿಕೆಯಿಂದ ಪಾಲ್ಗೊಂಡಿದ್ದರು. ಶಿಬಿರದಲ್ಲಿ ವ್ಯಾಯಾಮ, ಪ್ರಥಮ ಹಂತದಲ್ಲಿ ಹಾಕಿ ಆಟದ ಬಗ್ಗೆ ತರಬೇತಿ ಹಾಗೂ ಎರಡು ವಿಭಾಗಗಳಲ್ಲಿ ತಂಡ ರಚಿಸಿ ಹಾಕಿ ತರಬೇತಿ ನೀಡಿದ್ದಾರೆ. ಡಿ ವೈ ಎಸ್ ಎಸ್ ನ ತರಬೇತಿದಾರರಾದ ಕುಪ್ಪಂಡ ಸುಬ್ಬಯ್ಯ ಅವರ ಮುಂದಾಳತ್ವದಲ್ಲಿ, ಮುಕಳಮಾಡ ಗಣಪತಿ, ಕೆಲೋ ಇಂಡಿಯಾ ಸೆಂಟ್ರಿನ ತರಬೇತಿದಾರ ಸೌಮ್ಯ, ಮತ್ತು ಮಂಗಳೂರು ವಿಶ್ವವಿದ್ಯಾಲಯದ ಹಾಕಿ ಕ್ರೀಡಾಪಟು ಹಾಗು ಕಾವೇರಿ ಕಾಲೇಜಿನ ದೈಹಿಕ ಶಿಕ್ಷಕ ಕೆ.ತಮ್ಮಯ್ಯ ತರಬೇತಿಯನ್ನು ನೀಡುತ್ತಿದ್ದಾರೆ. ಏ.21 ರವರೆಗೆ ಈ ತರಬೇತಿ ಶಿಬಿರ ನಡೆಯಲಿದ್ದು, ಒಂದೆರಡು ದಿನಗಳು ಮುಂದೂಡುವ ಸಾಧ್ಯತೆ ಇದೆ ಎಂದು ತರಬೇತಿದಾರ ಸುಬ್ಬಯ್ಯ ಹೇಳಿದ್ದಾರೆ. ಬೆಳಿಗ್ಗೆ ಶಿಬಿರಾರ್ಥಿಗಳಿಗೆ ಪೌಷ್ಟಿಕ ಆಹಾರವನ್ನು ಕೂಡ ನೀಡುತ್ತಿದ್ದಾರೆ. ಮುಂಜಾನೆ ಈ ಮೈದಾನಕ್ಕೆ ಶಿಬಿರಾರ್ಥಿಗಳು ತಮ್ಮ ಪೋಷಕರೊಂದಿಗೆ ಆಗಮಿಸಿ ಶಿಬಿರದಲ್ಲಿ ಲವಲವಿಕೆಯಿಂದ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.
ಮಡಿಕೇರಿ ಏ.17 : ಪೊನ್ನಂಪೇಟೆಯ ಭಾರತೀಯ ಜನತಾ ಪಕ್ಷದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾ ಕಚೇರಿಯನ್ನು ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿದರು. ನಂತರ ಕೊಡವ ಸಮಾಜದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಜಿ.ಬೋಪಯ್ಯ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮಾಚಿಮಾಡ ರವೀಂದ್ರ, ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್, ಶಕ್ತಿ ಕೇಂದ್ರದ ಅಧ್ಯಕ್ಷರುಗಳಾದ, ಮುಕುಳಿಯರ ಮಧುಕುಮಾರ್ ಹಾಗೂ ಕೋಟೆರ ಕಿಶನ್, ಗ್ರಾ.ಪಂ ಅಧ್ಯಕ್ಷ ಗಿರಿಜಾ ವೆಂಕಟೇಶ್, ಉಪಾಧ್ಯಕ್ಷ ದಶಮಿ ಉಪಸ್ಥಿತರಿದ್ದರು. ಇದೇ ಸಂದರ್ಭ ಹಲವರು ಬಿಜೆಪಿಗೆ ಸೇರ್ಪಡೆಗೊಂಡರು. ಪೊನ್ನಂಪೇಟೆಯ ಜೆ. ಡಿ.ಎಸ್ ಪಕ್ಷದ ಹಿರಿಯ ಮುಖಂಡ ಬಲ್ಸೇರಾ ಕಾಂತರಾಜ್ ಅವರು ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭ ಶಾಸಕ ಕೆ.ಜಿ.ಬೋಪಯ್ಯ ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು.
ಬೆಂಗಳೂರು ಏ.17 : ಬಿಜೆಪಿಯ ಮಾಜಿ ನಾಯಕ ಜಗದೀಶ್ ಶೆಟ್ಟರ್ ಇಂದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ನಿನ್ನೆ ರಾತ್ರಿಯೇ ಬಿಜೆಪಿ ಕಚೇರಿಗೆ ಆಪ್ತ ಸಹಾಯಕರ ಮೂಲಕ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಪತ್ರವನ್ನು ರವಾನಿಸಿದ್ದ ಶೆಟ್ಟರ್ ಇಂದು ಬೆಳಗ್ಗೆ ಕಾಂಗ್ರೆಸ್ ಪಕ್ಷ ಸೇರಿದರು. ಈ ಮೂಲಕ ತಮ್ಮ ಮೂರು ದಶಕಗಳ ಬಿಜೆಪಿಯೊಂದಿಗಿನ ಸಂಬಂಧಕ್ಕೆ ಜಗದೀಶ್ ಶೆಟ್ಟರ್ ವಿದಾಯ ಹಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಸೇರ್ಪಡೆಯಾದರು.ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.






