ಮಡಿಕೇರಿ ಜ.4 : ಕೊಡಗು ಜಿಲ್ಲೆಯ ತೋಟ ಮತ್ತು ಗದ್ದೆಗಳನ್ನು ಗಮನಿಸಿದರೆ ಅರಣ್ಯದಲ್ಲಿರಬೇಕಾದ ಜೀವಿಗಳೆಲ್ಲವೂ ಇಲ್ಲೇ ಬಂದು ನೆಲೆ ನಿಂತಂತ್ತಿದೆ. ಕಾಡಾನೆ ಹಾಗೂ ಹುಲಿಯನ್ನು ಕಂಡಿದ್ದ ಬೆಳೆಗಾರ ಇದೀಗ ಎಲ್ಲಾ ಪ್ರಾಣಿಗಳನ್ನು ತಮ್ಮ ಜಮೀನಿನಲ್ಲಿ ಕಂಡು ಬೆರಗಾಗಿದ್ದಾನೆ.
ಜಿಲ್ಲೆಯ ಕಾಫಿ ತೋಟ ಮತ್ತು ಭತ್ತದ ಗದ್ದೆಗಳು ಕಾಡಾನೆ ದಾಳಿಯಿಂದ ನಾಶವಾಗುತ್ತಿವೆ. ಕಾಡಾನೆಗಳು ತೋಟಗಳನ್ನೇ ತಮ್ಮ ವಾಸಸ್ಥಾನಗಳನ್ನಾಗಿ ಮಾಡಿಕೊಂಡಿದ್ದರೆ ಹುಲಿ ಆಗೊಮ್ಮೆ, ಈಗೊಮ್ಮೆ ಬಂದು ಹಸುಗಳನ್ನು ಭಕ್ಷಿಸಿ ಹೋಗುತ್ತಿವೆ. ಕಾಡಾನೆ ಉಪಟಳದಿಂದ ರೋಸಿ ಹೋಗಿದ್ದ ಬೆಳೆಗಾರರನ್ನು ಇದೀಗ ಕಾಡೆಮ್ಮೆ, ಕಾಡುಹಂದಿ, ಮುಳ್ಳಂದಿ, ಮಂಗ, ಬಾವಲಿ, ಅಳಿಲುಗಳೂ ಕಾಡಲಾರಂಭಿಸಿವೆ.
ಕಾಡಾನೆಗಳು ಕಾಫಿ ಹಣ್ಣನ್ನು ತಿನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಹಿಂಡು ಹಿಂಡಾಗಿ ಬರುತ್ತಿರುವ ಮಂಗಗಳು ಪ್ರತಿಯೊಂದು ಗಿಡದ ಕಾಫಿ ಹಣ್ಣನ್ನು ತಿಂದು ತೇಗುತ್ತಿವೆ. ಇದರೊಂದಿಗೆ ಅಳಿಲು ಮತ್ತು ಬಾವಲಿಗಳು ಕೂಡ ಸೇರಿಕೊಂಡು ಸಹ ಭೋಜನ ಮಾಡುತ್ತಿವೆ. ಕಾಫಿ ಗಿಡಗಳ ಬುಡದಲ್ಲಿ ರಾಶಿ ರಾಶಿ ಕಾಫಿ ಬೇಳೆ ಕಂಡು ಬರುತ್ತಿದ್ದು, ವನ್ಯಜೀವಿಗಳ ಉಪಟಳದ ಬಗ್ಗೆ ಬೆಳೆಗಾರರು ಬೇಸರಗೊಂಡಿದ್ದಾರೆ.
ದುಬಾರಿ ನಿರ್ವಹಣಾ ವೆಚ್ಚ, ಅಕಾಲಿಕ ಮಳೆ, ಸಾಲದ ಹೊರೆ ಮತ್ತಿತರ ಸಮಸ್ಯೆಗಳ ನಡುವೆ ಕೃಷಿಕ ವರ್ಗ ಪ್ರಾಣಿಗಳ ಕಾಟವನ್ನೂ ಸಹಿಸಿಕೊಳ್ಳಬೇಕಾಗಿದೆ. ಮಳೆಹಾನಿಯಿಂದಾದ ನಷ್ಟಕ್ಕೆ ಸರ್ಕಾರದಿಂದ ಕೊಂಚ ಪರಿಹಾರ ದೊರೆತ್ತಿದೆ. ಆದರೆ ವನ್ಯಜೀವಿಗಳಿಂದ ನಿರಂತರವಾಗಿ ಆಗುತ್ತಿರುವ ಬೆಳೆಹಾನಿಗೆ ಯಾರು ಪರಿಹಾರ ನೀಡುತ್ತಾರೆ ಎಂದು ವಾಲ್ನೂರು, ತ್ಯಾಗತ್ತೂರು, ಅಭ್ಯತ್‍ಮಂಗಲ ಭಾಗದ ಬೆಳೆಗಾರರು ಪ್ರಶ್ನಿಸುತ್ತಿದ್ದಾರೆ.
ಈ ಗ್ರಾಮಗಳ ವ್ಯಾಪ್ತಿಯಲ್ಲಿ ಮಂಗ, ಬಾವಲಿ ಮತ್ತು ಅಳಿಲಿನ ಉಪಟಳ ಮಿತಿ ಮೀರಿದೆ. ಅರಣ್ಯದಲ್ಲಿ ಆಹಾರ ಸಿಗದೆ ಪ್ರಾಣಿಗಳೆಲ್ಲವು ನಾಡಿನೆಡೆಗೆ ಮುಖ ಮಾಡಿವೆ. ಪ್ರಾಣಿಗಳು ಹೊಟ್ಟೆ ತುಂಬಿಸಿಕೊಳ್ಳುತ್ತಿವೆ, ಸಾಲ ಮಾಡಿ ಕೃಷಿ ಮಾಡಿದ ನಾವು ಉಪವಾಸ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ.
ಕಾಡಾನೆ ನುಸುಳದಂತೆ ಕಂದಕಗಳನ್ನು ತೋಡಲು ಕೋಟ್ಯಾಂತರ ರೂಪಾಯಿಗಳನ್ನು ಸರ್ಕಾರ ಖರ್ಚು ಮಾಡುತ್ತಿದೆ. ಆದರೆ ಈ ಯೋಜನೆ ವಿಫಲವಾಗುತ್ತಿದ್ದು, ಆಹಾರ ಮತ್ತು ನೀರನ್ನು ಹುಡುಕಿಕೊಂಡು ಗ್ರಾಮಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ನಿಷ್ಪ್ರಯೋಜಕ ಯೋಜನೆಗಳ ಮೂಲಕ ದುಂದು ವೆಚ್ಚ ಮಾಡದೆ ಅರಣ್ಯ ಭಾಗದಲ್ಲಿ ವನ್ಯಜೀವಿಗಳಿಗೆ ಬೇಕಾದ ಆಹಾರವನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.