ಮಡಿಕೇರಿ ಫೆ.7 : ಮುಂದಿನ ದಿನಗಳಲ್ಲಿ ಕೊಡಗಿನಲ್ಲೂ ನಾಟಕೋತ್ಸವ ಆಯೋಜಿಸುವ ಚಿಂತನೆ ಇದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಹೇಳಿದರು.
ಕೊಡಗು ಪ್ರೆಸ್‍ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ‘ಪರಶುರಾಮ’ ನಾಟಕ ಪ್ರದರ್ಶನ ಸಂದರ್ಭದಲ್ಲಿ ಮಾತನಾಡಿದರು.
ಮೈಸೂರು ಮತ್ತಿತರ ಭಾಗಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ನಾಟಕ ನೋಡುವವರ ಸಂಖ್ಯೆ ಕಡಿಮೆ ಇದೆ. ಇತರ ಜಿಲ್ಲೆಗಳಲ್ಲಿ ನವರಾತ್ರಿ ಸಂದರ್ಭ 9 ದಿನಗಳೂ ನಾಟಕ ಪ್ರದರ್ಶನ ಏರ್ಪಡಿಸಲಾಗುತ್ತದೆ. ಸಾಧ್ಯವಾದರೆ ಮಡಿಕೇರಿಯಲ್ಲೂ ಮುಂದಿನ ದಿನಗಳಲ್ಲಿ ಇಂತಹ ಪ್ರಯೋಗ ಮಾಡುವ ಪ್ರಯತ್ನ ನಡೆಸಲಾಗುವುದು ಎಂದರು.
ಪರಶುರಾಮ ನಾಟಕದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಪುರಾಣದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಇಂತಹ ನಾಟಕಗಳು ಸಹಾಯ ಮಾಡುತ್ತದೆ ಎಂದು ಹೇಳಿದರು.
ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್‍ಕುಟ್ಟಪ್ಪ ಜಿಲ್ಲಾಧಿಕಾರಿ ಚಿಂತನೆಗೆ ಪೂರಕವಾಗಿ ಮಾತನಾಡಿ, ಸ್ಥಳೀಯ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ನಾಟಕೋತ್ಸವವನ್ನು ಎಲ್ಲರೂ ಸೇರಿ ಆಯೋಜನೆ ಮಾಡಬಹುದು. ವೈಯಕ್ತಿಕ ಮತ್ತು ವೃತ್ತಿಕಾರಣದಿಂದ ಒತ್ತಡದಲ್ಲಿ ಇರುವ ಇಂದಿನ ದಿನಗಳಲ್ಲಿ ಎಲ್ಲರೂ ಸೇರುವ ಮತ್ತು ಮನೋರಂಜನೆ ಪಡೆಯುವ ಅವಕಾಶಗಳು ಕಡಿಮೆ ಆಗುತ್ತಿದೆ.ನಾಟಕಗಳ ಮೂಲಕ ಮನೋಲ್ಲಾಸದ ಅವಕಾಶಗಳು ದೊರೆಯುವಂತಾಗಲಿ ಎಂದರು.
ಇದಕ್ಕೂ ಮೊದಲು ನಾಟಕ ಪ್ರದರ್ಶನ ಉದ್ಘಾಟಿಸಿದ ಕೊಡಗು ಪ್ರೆಸ್‍ಕ್ಲಬ್ ಬೆಳ್ಳಿಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಉಳ್ಳಿಯಡ ಎಂ.ಪೂವಯ್ಯ ಮಾತನಾಡಿ, ಪ್ರೆಸ್‍ಕ್ಲಬ್ ಬೆಳ್ಳಿ ಮಹೋತ್ಸವ ಹಿನ್ನೆಲೆಯಲ್ಲಿ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಮಾಜಮುಖಿ ಮತ್ತು ಜನಪರ ಕಾರ್ಯಕ್ರಮಗಳು ಸೆಪ್ಟೆಂಬರ್ ತನಕವೂ ಮುಂದುವರಿಯಲಿದೆ ಎಂದರು.
ಕೊಡಗು ಪ್ರೆಸ್‍ಕ್ಲಬ್ ಬೆಳ್ಳಿಮಹೋತ್ಸವ ಸಮಿತಿ ಮಹಾಪೋಷಕ ಜಿ.ರಾಜೇಂದ್ರ ಮಾತನಾಡಿ, ಪರಶುರಾಮ ಕ್ಷೇತ್ರದಿಂದ ಬಂದಿರುವ ಜೀವನ್‍ರಾಂ ಸುಳ್ಯ ಅವರ ನಾಟಕ ಮನೋರಂಜನ ಒದಗಿಸುವುದರ ಜೊತೆಗೆ ಅರ್ಥಗ್ರಹಿಸುವ ಶಕ್ತಿ ಮೂಲಕ ಪುರಾಣ ಲೋಕಕ್ಕೆ ಕರೆದುಕೊಂಡು ಹೋಯಿತು ಎಂದು ಹೇಳಿದರು.
ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ನಾಟಕದ ನಿರ್ದೇಶಕ ಡಾ.ಜೀವನ್‍ರಾಂ ಸುಳ್ಯ, ಕೊಡಗು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾರೈ, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ ಮಾತನಾಡಿದರು.
ಕಲಾ ಶಿಕ್ಷಕ ಉ.ರಾ.ನಾಗೇಶ್, ಲೇಖಕಿ ಕೊಟ್ಟಕೇರಿಯನ ಲೀಲಾದಯಾನಂದ ಹಾಗೂ ಪುಟಾಣಿ ತಿಷ್ಯಾ ಪೊನ್ನೇಟಿ ನಾಟಕದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಕೊಡಗು ಪ್ರೆಸ್‍ಕ್ಲಬ್ ಪ್ರಧಾನ ಕಾರ್ಯದರ್ಶಿ ರೆಜಿತ್‍ಕುಮಾರ್ ಗುಹ್ಯ ಕಾರ್ಯಕ್ರಮ ನಿರ್ವಹಿಸಿದರು.
ಮಡಿಕೇರಿಯ ಚಳಿಯ ವಾತಾವರಣ ಮಧ್ಯೆ ಕಾರ್ಕಳದ ಯಕ್ಷರಂಗಾಯಣ ಪ್ರಸ್ತುತಪಡಿಸಿದ ಕರಾವಳಿ ಸೃಷ್ಟಿಯಕತೆ ಹೇಳುವ ಪರಶುರಾಮ ನಾಟಕ ರಂಗಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು. ಡಾ. ಜೀವನ್‍ರಾಂ ಸುಳ್ಯ ನಿರ್ದೇಶನದಲ್ಲಿ ಪೈಪೋಟಿಗೆ ಬಿದ್ದಂತೆ ಅಭಿನಯಿಸಿದ ಕಲಾವಿದರು ಸುಮಾರು 2 ಗಂಟೆ ಕಾಲ ಸಂತಜೋಸೆಫರ ವಿದ್ಯಾಸಂಸ್ಥೆ ಸಭಾಂಗಣಬತುಂಬಾತುಂಬಿದ್ದ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸಫಲರಾದರು.
ಕಾಂತಾರ ಸಿನಿಮಾದ ವರಾಹರೂಪಂಗೀತೆ ರಚನೆಕಾರ ಶಶಿರಾಜ್ ಕಾವೂರು ಪರಶುರಾಮ ನಾಟಕವನ್ನು ರಚಿಸಿದ್ದಾರೆ. ಪುರಾಣದ ಎಳೆ ಇಟ್ಟುಕೊಂಡು ರಚನೆಯಾಗಿರುವ ನಾಟಕದಲ್ಲಿ ವರ್ತಮಾನದ ಸಂಗತಿಗಳಾದ ನದಿ ತಿರುವುಯೋಜನೆ, ಗೋಹತ್ಯೆ, ಜಾತಿ ಪದ್ಧತಿ, ನಮ್ಮನ್ನಾಳುವವರ ದುರಾಡಳಿತ, ಭ್ರಷ್ಟ ವ್ಯವಸ್ಥೆಯ ವಿರುದ್ಧಆಕ್ರೋಶ ಸೂಕ್ಷ್ಮವಾಗಿ ಕಾಣಿಸಿಕೊಳ್ಳುತ್ತದೆ. ಪರಶುರಾಮ ಸೃಷ್ಟಿಯ ತುಳುನಾಡು, ಅಲ್ಲಿಯ ಭೂತಾರಾಧನೆಯ ಹಿನ್ನೆಲೆಯ ಅರಿವನ್ನೂ ಮೂಡಿಸುತ್ತದೆ.
ಕಲಾವಿದರ ಅಭಿನಯಕ್ಕೆ ರಂಗಸಜ್ಜಿಕೆ, ಬೆಳಕು ವಿನ್ಯಾಸ, ಧ್ವನಿ ವ್ಯವಸ್ಥೆಯೂ ಪೂರಕವಾಗಿ ಇದ್ದಕಾರಣ ನಾಟಕ ಎಲ್ಲೂ ಬೇಸರ ಹುಟ್ಟಿಸಲಿಲ್ಲ. ಕೊನೆಯತನಕವೂ ಕುಳಿತಿದ್ದ ಪ್ರೇಕ್ಷಕರ ಸಂಖ್ಯೆಯೇ ಇದಕ್ಕೆ ಸಾಕ್ಷಿಆಗಿತ್ತು.