ಮಡಿಕೇರಿ ಫೆ.19 : ಬೆಟ್ಟ ಗುಡ್ಡಗಳಲ್ಲಿ ರೆಸಾರ್ಟ್ಗಳನ್ನು ನಿರ್ಮಾಣ ಮಾಡುವ ಮೂಲಕ ಸುಂದರ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಕೊಡಗನ್ನು ನಾಶ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಪತ್ರಿಕಾಭವನ ಸಭಾಂಗಣದಲ್ಲಿ ನಡೆದ ಕೊಡವ ಮಕ್ಕಡ ಕೂಟ ಮತ್ತು ಕಾವೇರಿಕೇರಿ ಕೊಡವ ಸಂಘದ ಸಂಯುಕ್ತಾಶ್ರಯದಲ್ಲಿ ವಕೀಲ, ಕ್ರೀಡಾಪಟು ಹಾಗೂ ಬರಹಗಾರ ಬಾಳೆಯಡ ಕಿಶನ್ ಪೂವಯ್ಯ ಅವರು ಬರೆದಿರುವ “ವ್ಯಕ್ತಿ ಪರಿಚಯ ಮತ್ತು ಸಾಮಾಜಿಕ ಚಿಂತನೆ” ಹಾಗೂ “ರಾಜಕೀಯ ಮತ್ತು ಪ್ರಕೃತಿ” ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರ ಮಾತನಾಡಿದರು.
ಇಂದು ಯಾವುದೇ ವಿಧದಲ್ಲೂ ಪುಟ್ಟ ಜಿಲ್ಲೆ ಕೊಡಗಿನ ಪ್ರಕೃತಿಯನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಬೇರೆ ಜಿಲ್ಲೆಗಳನ್ನು ಹೋಲಿಸಿದರೆ ಕೊಡಗು ಹವಾನಿಯಂತ್ರಿತ ಗುಣವನ್ನು ಹೊಂದಿದೆ. ಅತ್ಯಂತ ಶ್ರೇಷ್ಠತೆಯನ್ನು ಹೊಂದಿರುವ ಇಲ್ಲಿನ ಪರಿಸರ ಮತ್ತು ಬೆಟ್ಟ ಗುಡ್ಡಗಳು ರೆಸಾರ್ಟ್ ಗಳ ನಿರ್ಮಾಣದಿಂದ ನಾಶವಾಗುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಜನಪ್ರತಿನಿಧಿಗಳು ಮಾತ್ರ ಏನನ್ನೂ ಮಾತನಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಭ್ರಷ್ಟಾಚಾರ ಮಿತಿ ಮೀರಿದೆ, ರಾಜಕೀಯ ಹೊಲಸು ಎನ್ನುವ ಅಭಿಪ್ರಾಯ ಎಲ್ಲೆಡೆ ಮೂಡಿದೆ. ಹೊಡಿ, ಬಡಿ, ಕಡಿ ರಾಜಕಾರಣ ನಿರ್ಮಾಣವಾಗಿದೆ, ನಾನು ರಾಜಕೀಯದಿಂದ ದೂರ ಉಳಿಯಲು ಈ ಸಂದಿಗ್ಧ ಪರಿಸ್ಥಿತಿಯೂ ಒಂದು ಕಾರಣವಾಗಿದೆ ಎಂದರು.
ದೇಶದ ಬಹುತೇಕ ಪತ್ರಿಕೆಗಳು ಮತ್ತು ಮಾಧ್ಯಮಗಳು ಇಂದು ಉದ್ಯಮಿಗಳ ಕೈಯಲ್ಲಿದೆ. ಬೆರಳೆಣಿಕೆಯಷ್ಟು ಪತ್ರಿಕೆಗಳು ಮಾತ್ರ ನೇರವಾಗಿ ಬರೆಯುವುದನ್ನು ಮುಂದುವರೆಸಿವೆ ಎಂದು ಎಂ.ಸಿ.ನಾಣಯ್ಯ ಗಮನ ಸೆಳೆದರು.
ಬರಹಗಾರ ಕಿಶನ್ ಪೂವಯ್ಯ ಅವರ ಬರವಣಿಗೆಯ ಶೈಲಿಯನ್ನು ಕೊಂಡಾಡಿದರು.
“ರಾಜಕೀಯ ಮತ್ತು ಪ್ರಕೃತಿ” ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ವಕೀಲ ಹಾಗೂ ಸಾಹಿತಿ ಕೆ.ಪಿ.ಬಾಲಸುಬ್ರಹ್ಮಣ್ಯ, ಬರಹದಿಂದ ಸಮಾಜವನ್ನು ತಿದ್ದಬಹುದು ಎನ್ನುವ ಭ್ರಮೆ ಬೇಡ, ವೇದವ್ಯಾಸರ ಕಾಲದಿಂದಲೂ ಇದು ಸಾಧ್ಯವಾಗಿಲ್ಲ. ಆದರೆ ಪ್ರಯತ್ನಗಳು ಮುಂದುವರೆಯಲಿ, ಬರಹದ ಮೂಲಕ ಅಳಲನ್ನು ತೋಡಿಕೊಳ್ಳಬಹುದು, ಆತ್ಮವಂಚನೆ ಮಾಡದೆ ಬರೆಯುವುದು ಮುಖ್ಯ ಎಂದರು.
ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಇತಿಹಾಸವಿದೆ, ಆದರೆ ಇಂದು ಸಾಹಿತ್ಯ ಮಾರುಕಟ್ಟೆಯ ಸರಕಾಗಿ ಮಾರ್ಪಟ್ಟಿದೆ. ಕೆಲವು ಬರಹಗಾರರು ದೊಡ್ಡ ಬರಹಗಾರರೊಂದಿಗೆ ಸೆಲ್ಫಿ ತೆಗೆಸಿಕೊಂಡು ದೊಡ್ಡವರೆನಿಸಿಕೊಳ್ಳುತ್ತಿದ್ದಾರೆ. ಇಂದು ಖಾಲಿ ಪಾತ್ರೆಗಳು ಶಬ್ಧ ಮಾಡುತ್ತಿವೆ, ಜ್ಞಾನ ತುಂಬಿದವರು ಸುಮ್ಮನಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ತಪ್ಪನ್ನು ಮುಚ್ಚಿಕೊಳ್ಳುವವರು ದೊಡ್ಡವರೆನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲರಿಗೂ ದುರ್ಗುಣಗಳಿವೆ, ಕಡಿಮೆ ದುರ್ಗುಣಗಳನ್ನು ಹೊಂದಿರುವವರನ್ನು ಬೆಂಬಲಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ “ಶಕ್ತಿ” ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳೆಡೆಗೆ ಜನ ಆಕರ್ಷಿತರಾಗುತ್ತಿದ್ದಾರೆ, ಇದರಿಂದ ಪ್ರಚೋದನೆ ಮತ್ತು ಗಾಳಿ ಸುದ್ದಿಗಳು ಹೆಚ್ಚಾಗುತ್ತಿದೆ. ಸಮಾಜದಲ್ಲಿ ದ್ವೇಷದ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬರಹಗಾರನಿಗೆ ಸಾಮಾಜಿಕ ಚಿಂತನೆ ಮತ್ತು ಜಾಗೃತಿ ಅತಿಮುಖ್ಯ. ಆಳವಾದ ಚಿಂತನ, ಮಂಥನಗಳ ಮೂಲಕ ಲೇಖನಗಳನ್ನು ಬರೆದು ಪುಸ್ತಕಗಳನ್ನು ಪ್ರಕಟಿಸಬೇಕು, ಇವುಗಳಿಂದ ಸಮಾಜದ ಸುಧಾರಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
“ವ್ಯಕ್ತಿ ಪರಿಚಯ ಮತ್ತು ಸಾಮಾಜಿಕ ಚಿಂತನೆ” ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಎಕ್ಸ್ಪ್ರೆಸ್ ಲಿ. ಸೌತ್ ಬ್ಲೂ ಡಾರ್ಟ್ ನ ಹಿರಿಯ ಉಪಾಧ್ಯಕ್ಷ ಹಾಗೂ ಪ್ರಾದೇಶಿಕ ಮುಖ್ಯಸ್ಥ ಬಾಳೆಯಡ ಸಿ.ಕಾಳಪ್ಪ, ಪುಸ್ತಕಗಳು ಮಾರ್ಗದರ್ಶಕವಾಗಿ ಕೆಲಸ ಮಾಡುತ್ತವೆ, ಜೀವನದಲ್ಲಿ ಬದಲಾವಣೆಯನ್ನು ತರುತ್ತವೆ. ಆದರೆ ಇಂದು ಮೊಬೈಲ್ ಮತ್ತು ಟಿವಿ ಪ್ರಭಾವದಿಂದಾಗಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.
ಬರಹಗಾರ ಪುಸ್ತಕದ ಆಧಾರಸ್ತಂಭವಾಗಿದ್ದಾನೆ, ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಮೂಲಕ ಬರಹಗಾರನಿಗೆ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.
::: ಸಾಹಿತ್ಯಾಭಿಮಾನ ಶೂನ್ಯ :::
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ಕೊಡಗಿನಲ್ಲಿ ಬರಹಗಾರರಿದ್ದಾರೆ, ಆದರೆ ಸಾಹಿತ್ಯಾಭಿಮಾನಿಗಳು ಶೂನ್ಯ ಸಂಖ್ಯೆಯಲ್ಲಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಪತ್ರಿಕೆ ಮತ್ತು ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ. ಪುಸ್ತಕಗಳನ್ನು ಓದುವುದರಿಂದ ಜ್ಞಾನ ಹೆಚ್ಚಾಗುತ್ತದೆ, ಬರಹಗಾರರು ಹಾಗೂ ಓದುಗರ ಸಂಖ್ಯೆ ಹೆಚ್ಚಾಗಲಿ, ಎಲ್ಲರಲ್ಲಿ ಅರಿವು ಮೂಡಲಿ ಎಂದರು.
ಕೊಡವ ಮಕ್ಕಡ ಕೂಟ ದಶಮಾನೋತ್ಸವದ ಸಂಭ್ರಮದಲ್ಲಿದ್ದು, ಈ ಸಂದರ್ಭ 61 ಮತ್ತು 62 ನೇ ಪುಸ್ತಕವನ್ನು ಬಿಡುಗಡೆಗೊಳಿಸುತ್ತಿರುವುದು ಹೆಮ್ಮೆ ಎನಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಎರಡು ಪುಸ್ತಕಗಳ ಬರಹಗಾರ, ವಕೀಲ ಬಾಳೆಯಡ ಕಿಶನ್ ಪೂವಯ್ಯ ಮಾತನಾಡಿ ಬರಹಗಾರರು ಆರ್ಥಿಕವಾಗಿ ಬಡವರಾಗಿರುತ್ತಾರೆ, ದಾನಿಗಳ ಪ್ರೋತ್ಸಾಹದಿಂದ ಪುಸ್ತಕಗಳನ್ನು ಹೊರ ತರುತ್ತಾರೆ. ನನಗೂ ದಾನಿಗಳು ಸಹಕಾರ ನೀಡಿದ್ದಾರೆ, ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಕುಟುಂಬದ ಸದಸ್ಯರ ಪರಿಶ್ರಮ, ಹಿರಿಯರ ಪ್ರೋತ್ಸಾಹ ಮತ್ತು ಕೊಡವ ಮಕ್ಕಡ ಕೂಟದಿಂದ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲು ಸಾಧ್ಯವಾಯಿತು ಎಂದು ಸ್ಮರಿಸಿಕೊಂಡರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿಕೇರಿ ಕೊಡವ ಸಂಘದ ಅಧ್ಯಕ್ಷರಾದ ಬಲ್ಯಾಟಂಡ ಲತಾ ಚಂಗಪ್ಪ ಪುಸ್ತಕಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತದೆ. ಮಕ್ಕಳು ಮೊಬೈಲ್ ಮತ್ತು ಟಿವಿ ಯಿಂದ ದೂರ ಉಳಿದು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಓದುವುದರ ಮೂಲಕ ಬರಹಗಾರರಿಗೆ ಪ್ರೋತ್ಸಾಹವನ್ನು ನೀಡಬೇಕು ಎಂದರು.
ಪಾಲೆಯಂಡ ಕಾವ್ಯ ದೇವಯ್ಯ ಪ್ರಾರ್ಥಿಸಿ, ಕರುವಂಡ ಸೀಮಾ ಗಣಪತಿ ಸ್ವಾಗತಿಸಿ, ಬಾಳೆಯಡ ದಿವ್ಯಾ ಮಂದಪ್ಪ ಕಾರ್ಯಕ್ರಮ ನಿರೂಪಿಸಿದರು.
ಕೊಡವ ಮಕ್ಕಡ ಕೂಟ ಹೊರ ತಂದಿರುವ 61ನೇ ಪುಸ್ತಕ “ವ್ಯಕ್ತಿ ಪರಿಚಯ ಮತ್ತು ಸಾಮಾಜಿಕ ಚಿಂತನೆ” ಯಲ್ಲಿ ಸಾಮಾಜಿಕ ಚಿಂತನೆಯ ಹಲವು ಬರಹಗಳಿವೆ. ಹಿರಿಯ ರಾಜಕೀಯ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ, ಎ.ಕೆ.ಸುಬ್ಬಯ್ಯ, ಎಂ.ಸಿ.ನಾಣಯ್ಯ, ಟಿ.ಪಿ.ರಮೇಶ್, ಡಾ.ಗಣಪತಿ, ಡಾ.ಸೂರ್ಯಕುಮಾರ್, ಪುನೀತ್ ರಾಜ್‌ಕುಮಾರ್, ರೆಬೆಲ್ ಸ್ಟಾರ್ ಅಂಬರೀಶ್ ಸೇರಿದಂತೆ ಶ್ರೇಷ್ಠ ವ್ಯಕ್ತಿಗಳ ಪರಿಚಯ ಮತ್ತು ಜೀವನ ಚರಿತ್ರೆಯನ್ನು ಬಾಳೆಯಡ ಕಿಶನ್ ಪೂವಯ್ಯ ಅತ್ಯಂತ ಸುಂದರವಾಗಿ ನಿರೂಪಿಸಿದ್ದಾರೆ.
62ನೇ ಪುಸ್ತಕ “ರಾಜಕೀಯ ಮತ್ತು ಪ್ರಕೃತಿ” ಯಲ್ಲಿ ಪ್ರಕೃತಿಯ ಮೇಲೆ ದಾಳಿಗಳು ನಡೆದಾಗ ಮುಂದಿನ ಭವಿಷ್ಯದ ಯುವ ಪೀಳಿಗೆಯ ಮೇಲೆ ಯಾವ ದುಷ್ಪರಿಣಾಮವನ್ನು ಬೀರಬಲ್ಲದು ಮತ್ತು ಕೊಡಗಿನ ಆಸ್ತಿಯೇ ಆಗಿರುವ ಪ್ರಕೃತಿಯ ವಿನಾಶ ಹೇಗೆ ಆಗಬಹುದು ಎನ್ನುವ ಬಗ್ಗೆ ತಮ್ಮ ಲೇಖನದ ಮೂಲಕ ಮನಮುಟ್ಟುವಂತೆ ವಿವರಿಸಿದ್ದಾರೆ. ಪುಸ್ತಕಗಳಿಗಾಗಿ ಬಾಳೆಯಡ ಕಿಶನ್ ಪೂವಯ್ಯ 94488 99554 ಹಾಗೂ ಬೊಳ್ಳಜಿರ ಬಿ.ಅಯ್ಯಪ್ಪ 98807 78047 ನ್ನು ಸಂಪರ್ಕಿಸಬಹುದು.
Breaking News
- *85 ಕಿ.ಮೀ ಕ್ರಮಿಸಲಿದೆ ಕೊಡವರ ಬೃಹತ್ ಪಾದಯಾತ್ರೆ*
- *ವಿರಾಜಪೇಟೆ : ಗಾಂಜಾ ಸಾಗಾಟ : ಆರೋಪಿ ಸಹಿತ 3.90 ಕೆ.ಜಿ ಗಾಂಜಾ ವಶ*
- *ರಾಷ್ಟ್ರಪತಿಗಳ ಕುರಿತು ಹೇಳಿಕೆ ಖಂಡನೀಯ : ಕ್ಷಮೆಯಾಚಿಸಲು ಕೊಡಗು ಬಿಜೆಪಿ ಎಸ್ಟಿ ಮೋರ್ಚಾ ಆಗ್ರಹ*
- *ಕೊಡವರ ಬೃಹತ್ ಪಾದಯಾತ್ರೆ ಆರಂಭ : ಸಾವಿರಾರು ಮಂದಿ ಭಾಗಿ*
- *ನಾಗರಹೊಳೆಯಲ್ಲಿ ಬೇಟೆ : ಕೊಡಗಿನ ಆರೋಪಿಗಳ ಬಂಧನ*
- *ಅರ್ಚಕ ವಿಘ್ನೇಶ್ ಭಟ್ ಮೇಲೆ ಹಲ್ಲೆ : ಆರೋಪಿಗಳ ಬಂಧನ*
- *ಸಾಮಾನ್ಯ ವರ್ಗಕ್ಕೆ ಸಹಾಯವಾಗದ ಬಜೆಟ್*
- *ಸ್ವಾವಲಂಬಿ ಭಾರತಕ್ಕೆ ಪೂರಕವಾದ ಜನಪರ ಬಜೆಟ್*
- *ದೆಹಲಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಜೆಟ್*
- *ಮಡಿಕೇರಿಯಲ್ಲಿ ಮಡಿವಾಳ ಮಾಚಿದೇವರ ಜಯಂತಿ : ವಚನಗಳ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರ ಕೊಡುಗೆ ಅಪಾರ : ಬಿ.ಸಿ.ಶಂಕರಯ್ಯ*