ಮಡಿಕೇರಿ ಫೆ.19 : ಪರಿಶಿಷ್ಟ 101 ಜಾತಿಗೆ ಒಳ ಮೀಸಲಾತಿ ಕಲ್ಪಿಸಬೇಕೆಂದು ಹಲವು ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿರುವ ಹಿನ್ನೆಲೆ, ಸದಾಶಿವ ಆಯೋಗದ ವರದಿ ಜಾರಿಗೆ ಸರ್ಕಾರದ ಸಹಮತ ಇದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.
ಕೊಡವ 18 ಭಾಷಿಕ ಜನಾಂಗದ ಸಮುದಾಯಗಳ ವತಿಯಿಂದ ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಗ್ರಾಮದ ಕೊಡಗು ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ಭಾನುವಾರ ನಡೆದ ‘ಒತ್ತೋರ್ಮೆ ಕೂಟ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು.
ಸದಾಶಿವ ಆಯೋಗ ವರದಿ ಜಾರಿ ಸಂಬoಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ, ಧ್ವನಿ ಇಲ್ಲದವರಿಗೆ ಧ್ವನಿ ನೀಡಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದು ಸಮಾಜ ಕಲ್ಯಾಣ ಸಚಿವರು ನುಡಿದರು.
ಕೊಡಗು ಜಿಲ್ಲೆಯಲ್ಲಿ ಕೊಡವ ಭಾಷೆ ಮಾತನಾಡುವ 18 ಸಣ್ಣ ಸಣ್ಣ ಸಮಾಜಗಳು ಇದ್ದು, ಈ ಸಮಾಜಗಳಿಗೆ ಒಳ ಮೀಸಲಾತಿ ಕಲ್ಪಿಸಬೇಕು ಎಂಬ ಬೇಡಿಕೆಗೆ ಸ್ಪಂದಿಸಿ ಸಚಿವರು ಈ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಒಳ ಮೀಸಲಾತಿ ಎಂಬುದು ಮತ್ತಷ್ಟು ಜಟಿಲ ಸಮಸ್ಯೆ ಆಗುತ್ತಿದೆ. ಆದರೂ ಸರ್ಕಾರದ ಸೌಲಭ್ಯಗಳು ಇದುವರೆಗೆ ಯಾರಿಗೆ ತಲುಪಿಲ್ಲ, ಅಂತಹ ಕಟ್ಟ ಕಡೆಯ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂಬುದು ಸರ್ಕಾರದ್ದಾಗಿದೆ. ಧ್ವನಿ ಇಲ್ಲದವರಿಗೆ ಧ್ವನಿ ನೀಡಬೇಕು ಎಂಬುದೇ ಪ್ರಸ್ತುತ ಸರ್ಕಾರದ ಉದ್ದೇಶವಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.
ಕೊಡವ ಭಾಷಿಕರ ಎಲ್ಲಾ ಸಮಾಜಗಳ ಕುರಿತು ಕುಲಶಾಸ್ತ್ರ ಅಧ್ಯಯನ ಮಾಡಲು 25 ಲಕ್ಷ ರೂ ಬಿಡುಗಡೆ ಮಾಡಲಾಗುವುದು. ಆ ನಿಟ್ಟಿನಲ್ಲಿ ಮೈಸೂರು ಬುಡಕಟ್ಟು ಸಂಶೋಧನಾ ಸಂಸ್ಥೆ ಅಥವಾ ಹಂಪಿ ವಿಶ್ವವಿದ್ಯಾನಿಯಕ್ಕೆ ಅಧ್ಯಯನದ ಹೊಣೆ ವಹಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವರು ವಿವರಿಸಿದರು.
ಕೊಡಗಿನ ಸಂಸ್ಕೃತಿ, ಆಚಾರ ವಿಚಾರಗಳನ್ನು ಪ್ರತಿಬಿಂಬಿಸುವಲ್ಲಿ ಐನ್‌ಮನೆಗಳು ಪ್ರಮುಖ ಪಾತ್ರ ವಹಿಸಿದ್ದು, ಆ ದಿಸೆಯಲ್ಲಿ ಐನ್‌ಮನೆಗಳ ಅಭಿವೃದ್ಧಿಗೆ 5 ಕೋಟಿ ರೂ ಬಿಡುಗಡೆ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
ಭಾಷೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲಸ ಮಾಡುತ್ತಿದ್ದು, ಆ ನಿಟ್ಟಿನಲ್ಲಿ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಿ, ತೆರೆಮರೆಯಲ್ಲಿ ಇರುವ ಗ್ರಾಮೀಣ ಪ್ರದೇಶದವರನ್ನು ಗುರ್ತಿಸಿ ಪದ್ಮಶ್ರೀ ಅಂತಹ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ನೀಡುತ್ತಿರುವುದು ಆಡಳಿತ ವ್ಯವಸ್ಥೆ ಎಷ್ಟು ಬದಲಾವಣೆ ಆಗಿದೆ ಎಂಬುದನ್ನು ತಿಳಿಯಬೇಕಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ನುಡಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಪೌಷ್ಟಿಕ ಆಹಾರ ವಿತರಣೆಯನ್ನು ಬೆಟ್ಟ ಗುಡ್ಡಗಳಲ್ಲಿ ವಾಸಿಸುವ ಕುಡಿಯ ಸಮಾಜಕ್ಕೂ ತಲುಪಿಸಲು ಪ್ರಯತ್ನಿಸಿಲಾಗುವುದು ಎಂದರು.
ಕೊಡವ ಭಾಷಿಕ ಸಮಾಜಗಳ ಆಚಾರ ವಿಚಾರದಲ್ಲಿ ಒಂದೇ ಇದ್ದು, ಅನೇಕತೆಯಲ್ಲಿ ಏಕತೆಯನ್ನು ಕಾಣುತ್ತೇವೆ. ಆ ನಿಟ್ಟಿನಲ್ಲಿ ಕೊಡವ ಭಾಷಿಕ ಸಮಾಜಗಳ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಎಲ್ಲರ ಸಲಹೆ ಪಡೆದು ಅನುಷ್ಠಾನಕ್ಕೆ ಶ್ರಮಿಸಲಾಗುವುದು. ಎಲ್ಲರ ನೋವುಗಳಿಗೆ ಸ್ಪಂದಿಸಲಾಗುವುದು ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು.
ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲು ಅವರು ಮಾತನಾಡಿ ಕೊಡವ ಮತ್ತು ತುಳು ಭಾಷೆ ಒಂದಕ್ಕೊಂದು ಸಾಮ್ಯತೆ ಇದ್ದು, ಶ್ರೀಮಂತಿಕೆ ಹೊಂದಿದೆ ಎಂದರು.
ಐನ್‌ಮನೆಗಳಿಗೆ ವಿಶೇಷ ಪ್ರಾದನ್ಯತೆ ನೀಡುವಲ್ಲಿ ಸರ್ಕಾರ ಮುಂದಾಗಿದೆ. ಆ ದಿಸೆಯಲ್ಲಿ ಕೊಡವ ಭಾಷೆ, ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.
ಹಂಪಿ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ವಿಜಯ್ ಪೂಣಚ್ಚ ತಂಬಂಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕೊಡವ ಭಾಷೆ ಮಾತನಾಡುವ ಎಲ್ಲಾ ಸಮಾಜಗಳಿಗೆ ‘ಒಳ ಮೀಸಲಾತಿ’ ಜಾರಿಗೊಳಿಸಿ, ರಾಜಕೀಯ, ಸಾಮಾಜಿಕ ನ್ಯಾಯ ದೊರಕಿಸಬೇಕು ಎಂದು ಅವರು ಒತ್ತಾಯಿಸಿದರು.
ಕೊಡವ ಭಾಷೆಯನ್ನು 8 ನೇ ಪರಿಚ್ಚೇದಕ್ಕೆ ಸೇರ್ಪಡೆ ಮಾಡಬೇಕು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಕೊಡವ ಭಾಷೆ ಮಾತನಾಡುವ ಇತರೆ ಸಣ್ಣ ಪುಟ್ಟ ಸಮಾಜಗಳಿಗೂ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಅವರು ಮನವಿ ಮಾಡಿದರು.
ಕೊಡವ ಭಾಷಿಕ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ, ಹಾಗೆಯೇ ಸ್ಮಶಾನ ಭೂಮಿ ಒದಗಿಸಬೇಕು. ಸರ್ಕಾರದ ಸೌಲಭ್ಯಗಳು ಕೊಡವ ಭಾಷಿಕ ಎಲ್ಲಾ ಜನಾಂಗಗಳಿಗೂ ತಲುಪಬೇಕು ಎಂದು ಡಾ.ವಿಜಯ್ ಪೂಣಚ್ಚ ತಂಬಂಡ ಕೋರಿದರು.
ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ ಅವರು ಮಾತನಾಡಿ ಸರ್ಕಾರದ ಸೌಲಭ್ಯಗಳು ಕಟ್ಟಕಡೆಯ ಜನರಿಗೂ ತಲುಪಬೇಕು ಎಂದು ಅವರು ಪ್ರತಿಪಾದಿಸಿದರು.
ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷರಾದ ಡಾ.ಮೇಚಿರ ಸುಭಾಶ್ ನಾಣಯ್ಯ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಮಾಜಿ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ, ಮಾಜಿ ಅಡ್ವಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ಸಮಾಜ ಸೇವಕರಾದ ಕೆ.ಎಂ.ಬಿ.ಗಣೇಶ್, ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದ ಅಧ್ಯಕ್ಷರಾದ ಕೊರಕುಟ್ಟಿರ ಸರಾ ಚಂಗಪ್ಪ, ಜಿ.ಪಂ.ಮಾಜಿ ಸದಸ್ಯರಾದ ಬಬ್ಬೀರ ಸರಸ್ವತಿ ಅವರು ಮಾತನಾಡಿದರು.
ಹೆಗ್ಗಡೆ ಸಮಾಜದ ಅಧ್ಯಕ್ಷರಾದ ಪಡಿಞರಂಡ ಅಯ್ಯಪ್ಪ, ಅಖಿಲ ಅಮ್ಮಕೊಡವ ಸಮಾಜದ ಅಧ್ಯಕ್ಷರಾದ ಬಾನಂಡ ಪ್ರಥ್ಯು, ಐರಿ ಸಮಾಜದ ಅಧ್ಯಕ್ಷರಾದ ಮೇಲತ್ತಂಡ ರಮೇಶ್, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ಕಸ್ತೂರಿ ಗೋವಿಂದಮ್ಮಯ್ಯ, ಕೊಡಗು ಕೆಂಬಟ್ಟಿ ಸಮಾಜದ ಅಧ್ಯಕ್ಷರಾದ ದೊಡ್ಡಕುಟ್ಟಡ ರಾಮು ಅಯ್ಯಪ್ಪ, ಕೊಯವ ಸಮಾಜದ ಅಧ್ಯಕ್ಷರಾದ ಜಿಲ್ಲಂಡ ದಾದು ಮಾದಪ್ಪ, ಸವಿತ ಸಮಾಜದ ಅಧ್ಯಕ್ಷರಾದ ವೇದಪ್ಪಂಡ ಬಿದ್ದಪ್ಪ, ಕುಡಿಯ ಸಮಾಜದ ಅಧ್ಯಕ್ಷರಾದ ಕುಡಿಯರ ಮುತ್ತಪ್ಪ, ಕಣಿಯ ಸಮಾಜದ ಮುಖಂಡರಾದ ಕಣಿಯರ ಪ್ರಕಾಶ, ಪಣಿಕ ಸಮಾಜದ ಅಧ್ಯಕ್ಷರಾದ ಪೊನ್ನಜ್ಜೀರ ದಿನೇಶ್ ಸೋಮಯ್ಯ, ಕೊಲೇಯ ಸಮಾಜದ ಅಧ್ಯಕ್ಷರಾದ ಕೊಲೇಯಂಡ ಗಿರೀಶ್, ಬೂಣೆಪಟ್ಟಮ ಸಮಾಜದ ಮುಖಂಡರಾದ ಜೋಕೀರ ಜೀವನ್, ಬಣ್ಣ ಸಮಾಜದ ಮುಖಂಡರಾದ ಬೀಕಚಂಡ ಬೆಳ್ಯಪ್ಪ, ಮಡಿವಾಳ ಸಮಾಜದ ಮುಖಂಡರಾದ ಪಾತಂಡ ಸಂತೋಷ್, ಗೊಲ್ಲ ಸಮಾಜದ ಅಧ್ಯಕ್ಷರಾದ ಪೊನ್ನುಕಂಡ ಚಿತ್ರಾ ಮಾದಪ್ಪ, ಮಲೀಯ ಸಮಾಜದ ಅಧ್ಯಕ್ಷರಾದ ಮಲೆಯಡ ರಾಜಾ ಮುತ್ತಪ್ಪ, ಕೊಡಗು ನಾಯರ್ ಸಮಾಜದ ಮುಖಂಡರಾದ ರನ್ನ ಮೇದಪ್ಪ, ಕಾಪಾಳ ಸಮಾಜದ ಮುಖಂಡರಾದ ಕೆ.ಮಿಲನ್, ಮೇದ ಸಮಾಜದ ಮುಖಂಡರಾದ ಎಂ.ಚಂದ್ರ, ಅರಮನೆ ಪಾಲೆ ಸಮಾಜದ ಅಧ್ಯಕ್ಷರಾದ ಎ.ಮಂದಣ್ಣ ಇದ್ದರು.
ಒತ್ತೋರ್ಮೆ ಕೂಟದ ಜಾನಪದ ಕಲಾ ಮೆರವಣಿಗೆ ನಡೆಯಿತು. ವಸ್ತುಪ್ರದರ್ಶನ ಹಾಗೂ ಜಾನಪದ ಸಾಂಸ್ಕೃತಿಕ ಮತ್ತು ಕಲಾ ಪ್ರದರ್ಶನ ಗಮನ ಸೆಳೆಯಿತು.
Breaking News
- *ರಾಷ್ಟ್ರಪತಿಗಳ ಕುರಿತು ಹೇಳಿಕೆ ಖಂಡನೀಯ : ಕ್ಷಮೆಯಾಚಿಸಲು ಕೊಡಗು ಬಿಜೆಪಿ ಎಸ್ಟಿ ಮೋರ್ಚಾ ಆಗ್ರಹ*
- *ಕೊಡವರ ಬೃಹತ್ ಪಾದಯಾತ್ರೆ ಆರಂಭ : ಸಾವಿರಾರು ಮಂದಿ ಭಾಗಿ*
- *ನಾಗರಹೊಳೆಯಲ್ಲಿ ಬೇಟೆ : ಕೊಡಗಿನ ಆರೋಪಿಗಳ ಬಂಧನ*
- *ಅರ್ಚಕ ವಿಘ್ನೇಶ್ ಭಟ್ ಮೇಲೆ ಹಲ್ಲೆ : ಆರೋಪಿಗಳ ಬಂಧನ*
- *ಸಾಮಾನ್ಯ ವರ್ಗಕ್ಕೆ ಸಹಾಯವಾಗದ ಬಜೆಟ್*
- *ಸ್ವಾವಲಂಬಿ ಭಾರತಕ್ಕೆ ಪೂರಕವಾದ ಜನಪರ ಬಜೆಟ್*
- *ದೆಹಲಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಜೆಟ್*
- *ಮಡಿಕೇರಿಯಲ್ಲಿ ಮಡಿವಾಳ ಮಾಚಿದೇವರ ಜಯಂತಿ : ವಚನಗಳ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರ ಕೊಡುಗೆ ಅಪಾರ : ಬಿ.ಸಿ.ಶಂಕರಯ್ಯ*
- *ವಿರಾಜಪೇಟೆ : ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು : ಅನೂಪ್ ಮಾದಪ್ಪ ಕರೆ*
- *ದೀಪ್ತಿ ದೇಚಮ್ಮ ಗೆ ಪಿ.ಹೆಚ್.ಡಿ ಪದವಿ ಪ್ರದಾನ*