ಶ್ರೀ ಗುರು ಮರುಳ ಸಿದ್ದೇಶ್ವರ ಸ್ವಾಮಿ ದೇವಾಲಯವು ಹಾಸನ ಜಿಲ್ಲೆಯ ಅರಸೀಕೆರೆ ತಾಲೋಕಿನ ಕಣಕಟ್ಟೆ ಹೋಬಳಿಯ ಕಲ್ಗುಂಡಿಯಲ್ಲಿ ಇದೆ. ಈ ದೇವಾಲಯದಲ್ಲಿ ನಾಲ್ಕು ಪ್ರಮುಖವಾದ ದೇವರುಗಳನ್ನು ಪೂಜಿಸಲಾಗುತ್ತದೆ. ಶ್ರೀ ಗುರು ಮರುಳ ಸಿದ್ದೇಶ್ವರ ಸ್ವಾಮಿ, ಶ್ರೀ ರಾಮ, ಶ್ರೀ ಜಟ್ಟಿಲಿಂಗೇಶ್ವರ ಸ್ವಾಮಿ, ಶ್ರೀ ಕೆಂಚಾಂಬ ದೇವಿ. ಈ ದೇವಸ್ಥಾನದಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸ್ವಾಮಿಯ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ.
ಪ್ರತಿ ಸೋಮವಾರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಇರುತ್ತವೆ. ಶ್ರೀ ಗುರು ಮರುಳ ಸಿದ್ದೇಶ್ವರ ಸ್ವಾಮಿಗೆ ಅಭಿಷೇಕ ಮತ್ತು ವಿಶೇಷಹೂವಿನ ಅಲಂಕಾರವನ್ನು ಮಾಡಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಾರೆ.
ಪ್ರತಿ ವರ್ಷ ಯುಗಾದಿ ಹಬ್ಬದ ದಿನದಿಂದ ಶ್ರೀ ರಾಮದೇವರ ಜಾತ್ರಮಹೋತ್ಸವ ಪ್ರಾರಂಭವಾಗುತ್ತದೆ.ಯುಗಾದಿ ಹಬ್ಬದ ದಿನ ಗಂಗಾಪೂಜೆಯನ್ನು ಮಾಡಿ, ದೇವಾಸ್ಥಾನಕ್ಕೆ ಶ್ರೀ ರಾಮದೇವರ ಉತ್ಸವದೊಂದಿಗೆ ಗಂಗೆಯನ್ನು ತರಲಾಗುತ್ತದೆ . ಈ ಹಬ್ಬದ ದಿನದಿಂದ ಶ್ರೀ ಗುರು ಮರುಳ ಸಿದ್ದೇಶ್ವರ ಸ್ವಾಮಿ ಮತ್ತು ಶ್ರೀ ರಾಮದೇವರಿಗೆ ವಿಶೇಷ ಅಭಿಷೇಕ ಮತ್ತು ಪೂಜೆಗಳು ನಡೆಯುತ್ತವೆ.
ಶ್ರೀ ರಾಮದೇವರ ಜಾತ್ರಮಹೋತ್ಸವವು 9 ದಿನ ನೆಡೆಯುತ್ತದೆ. ಪ್ರತಿ ದಿನ ಸಾಯಂಕಾಲ ಶ್ರೀ ರಾಮದೇವರ ಉತ್ಸವಗಳು ನೆಡೆಯುತ್ತವೆ. ಬಿಲ್ವಪತ್ರೋತ್ಸವ, ಅಶ್ವತೋತ್ಸವ, ಗಜೆಂದ್ರೋತ್ಸವ, ಸರ್ಪೋತ್ಸವ, ಪಲ್ಲಕಿ ಉತ್ಸವ,ಸೂರ್ಯಮಂಡಲ ಉತ್ಸವ ಮತ್ತು ಬೃಂದಾವನ ಉತ್ಸವ. ಬೃಂದಾವನ ಉತ್ಸವದಿನದಂದು ದೇವಸ್ಥಾನದಲ್ಲಿವಿಶೇಷ ಹೋಮ, ಅಭಿಷೇಕಗಳು ನಡೆಯುತ್ತವೆ. ಈ ದಿನದಂದು ಬಸವನಪಟ್ಟ ವನ್ನು ಕಟ್ಟಲಾಗುತ್ತದೆ ಮತ್ತು ಶ್ರೀ ರಾಮದೇವರ ರಥಕ್ಕೆ ಕಳಶ ಸ್ಥಾಪನೆ ಮಾಡಲಾಡಲಾಗುತ್ತದೆ.
9ನೇ ದಿನ ಅಂದರೆ ಶ್ರೀ ರಾಮನವಮಿಯ ದಿನದಂದು ಶ್ರೀ ರಾಮದೇವರ ರಥೋತ್ಸವ ಬಹಳ ವಿಜ್ರಂಬಣೆಯಿಂದ ನಡೆಯುತ್ತದೆ. ಈ ರಥೋತ್ಸವದ ಜೊತೆಯಲ್ಲಿ ಕಲ್ಗುಂಡಿಯ ಗ್ರಾಮದೇವತೆ ಶ್ರೀ ಕಲ್ಲುಕೋಡಮ್ಮ ದೇವಿಯ ರಥೋತ್ಸವವು ನಡೆಯುತ್ತದೆ. ಈ ದಿನದಂದು ಸಾವಿರಾರು ಭಕ್ತಾಧಿಗಳು ಆಗಮಿಸುತ್ತಾರೆ. ಇದೆ ದಿನ ರಾತ್ರಿ ಶ್ರೀ ರಾಮದೇವರ ಹನುಮಂತೋತ್ಸವ ಮತ್ತು ಉಯ್ಯಾಲೆ ಉತ್ಸವವನ್ನು ಮಾಡಲಾಗುತ್ತದೆ. ರಥೋತ್ಸವದ ಮರುದಿನ ಬೆಳಗ್ಗೆ ಹೋಳಿಹಬ್ಬ ಇರುತ್ತದೆ ಮತ್ತು ಸಾಯಂಕಾಲ ಶ್ರೀ ಜಟ್ಟಿಲಿಂಗೇಶ್ವರ ಸ್ವಾಮಿಯ ಧೂಳುಮೆರವಣಿಗೆ ಇರುತ್ತದೆ. ಈ ಉತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಾರೆ.
ಈ ದೇವಸ್ಥಾನದಲ್ಲಿ ಭಕ್ತರ ಎಲ್ಲಾ ಸಮಸ್ಯೆಗಳನ್ನು ಶ್ರೀ ಗುರು ಮರುಳ ಸಿದ್ದೇಶ್ವರ ಸ್ವಾಮಿ ಮತ್ತು ಶ್ರೀ ರಾಮದೇವರ ಅಪ್ಪಣೆಕೇಳಿ ಬಗೆಹರಿಸಿಕೊಡಲಾಗುತ್ತದೆ. ಶ್ರೀ ಗುರು ಮರುಳ ಸಿದ್ದೇಶ್ವರ ಸ್ವಾಮಿಯ ಮೂಲಸ್ಥಾನವು ಬಳ್ಳಾರಿ ಜೆಲ್ಲೆಯ ಕೂಡ್ಲಿಗಿ ತಾಲೋಕಿನ ಉಜ್ಜಿನಿಯಲ್ಲಿದೆ.