ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆ ಮುಗಿದ ನಂತರ ಬಹುತೇಕ ವಿದ್ಯಾರ್ಥಿಗಳದ್ದು ಒಂದೇ ಪ್ರಶ್ನೆ ಮುಂದೇನು ?
ಎಲ್ಲರ ಚಿತ್ತವೂ ಒಳ್ಳೆಯ ಉದ್ಯೋಗ ಮಾಡುವುದೇ ಆಗಿದ್ದರೂ, ಕಣ್ಣೆದುರು ಬಂದು ನಿಲ್ಲುವುದು ಮಾತ್ರ ಪ್ರಚಲಿತದಲ್ಲಿರುವ ಕೆಲವೇ ಕೆಲವು ಕೋರ್ಸುಗಳು ಆದರೆ ನಮ್ಮ ನಡುವೆಯೇ ಇರುವ, ಡಿಪ್ಲೋಮಾ ಕೊನೆಯ ಸೆಮಿಸ್ಟರ್ ನಲ್ಲೇ ಇಂಟರ್ನ್ ಶಿಪ್ ಮೂಲಕ ಉದ್ಯೋಗ ದೊರಕಿಸುವ ಹಲವು ಕೋರ್ಸುಗಳು ಗಮನಕ್ಕೆ ಬಾರದೆ ಹೋಗುತ್ತಿವೆ. ಅಂಥ ಕೋರ್ಸುಗಳಲ್ಲಿ ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ(ಸಿಪೆಟ್)ನೀಡುತ್ತಿರುವ ಡಿಪ್ಲೋಮ ಕೂಡ ಒಂದು.
ಪ್ಲಾಸ್ಟಿಕ್ ಎಂದಾಕ್ಷಣ ನಕಾರಾತ್ಮಕ ಭಾವನೆಯೇ ಮೂಡುತ್ತದೆ ಆದರೆ ಅದರ ಪ್ರಯೋಜನಗಳು ಸಾವಿರಾರು. ನಿತ್ಯೋಪಯೋಗಿ ವಸ್ತುಗಳಾದ ಮೊಬೈಲ್ ಫೋನ್, ಫ್ರಿಡ್ಜ್, ಕಂಪ್ಯೂಟರ್ , ಟಿ.ವಿ. ವೈದ್ಯಕೀಯ ಕ್ಷೇತ್ರದಲ್ಲಿ ಟ್ಯಾಬ್ಲೆಟ್ , ಸಿರಿಂಜ್, ಸೆಂಟ್, ಕ್ರೀಮ್ ಮುಂತಾದವುಗಳ ತಯಾರಿಕೆಗೆ ವಿಜ್ಞಾನ–ತಂತ್ರಜ್ಞಾನ ಕ್ಷೇತ್ರದಲ್ಲಿ ಬಳಸುವ ಯಂತ್ರೋಪಕರಣಗಳಿಗೆ ಆಹಾರ ಪದಾರ್ಥ ಗಳಾದ ಬಿಸ್ಕೆಟ್, ಚಾಕಲೇಟ್, ಹಾಲು, ತುಪ್ಪ ಪ್ಯಾಕಿಂಗ್ ಗಳಿಗೆ… ಎಲ್ಲದರಲ್ಲೂ ಪ್ಲಾಸ್ಟಿಕ್ ಬೇಕೇ ಬೇಕು.ಆದರೆ ಎಲ್ಲಿ ಎಷ್ಟು ಉಪಯೋಗಿಸಬೇಕು, ಹೇಗೆ ಮರುಬಳಕೆ ಮಾಡಬೇಕು ಅದರ ಉದ್ಯಮ ಸ್ಥಾಪಿಸಿ ಉದ್ಯೋಗ ಸೃಷ್ಟಿ ಮಾಡುವುದು ಹೇಗೆ ಎಂಬುದರ ಅರಿವು ನಮಗಿರಬೇಕು. ಇವೆಲ್ಲವನ್ನೂ ಕಲಿಸಿಕೊಡಲಿದೆ ‘ಸಿಪೆಟ್ ‘.
ಪಾಲಿಮರ್/ಪ್ಲಾಸ್ಟಿಕ್ಸ್ ::
ಇಂದು ಪ್ಲಾಸ್ಟಿಕ್ ಮಾನವ ಜೀವನದ ಅವಿಭಾಜ್ಯ ನಿರ್ವಹಣೆಯಾಗಿದೆ. ಪ್ಲಾಸ್ಟಿಕ್ ಇಲ್ಲದೇ ಜೀವನ ಸಾಧ್ಯವಿಲ್ಲ ಎನ್ನುವಂತಾಗಿದೆ. ಲೋಹದ ಬೆಲೆ ಮತ್ತು ಕೊರತೆ ಹೆಚ್ಚಿದಂತೆಲ್ಲಾ ಪ್ರತಿ ಕ್ಷೇತ್ರದಲ್ಲೂ ಪ್ಲಾಸ್ಟಿಕ್ ನ ಬಳಕೆ ದಿನೇ ದಿನೇ ಅಧಿಕಗೊಳ್ಳುತ್ತಿದೆ. ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ಬಳಕೆಯಿಂದ ತೊಂದರೆಗಳಿಲ್ಲ. ಈ ಹಿನ್ನಲೆಯಲ್ಲಿ ಇಂದು ಅನೇಕ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಾಣುತ್ತಿದ್ದೇವೆ. ಆಟೋಮೊಬೈಲ್, ಕೃಷಿ, ಆರೋಗ್ಯ, ಶಿಕ್ಷಣ , ಸಾರಿಗೆ, ವಿದ್ಯುನ್ಮಾನ ಮುಂತಾದ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ಅಧಿಕವಾಗಿದೆ. ಹಾಗಾಗಿ ಪ್ಲಾಸ್ಟಿಕ್ ಆಧಾರಿತ ಕೋರ್ಸ್ ಗಳಿವೆ ಎಂಬುದು ಎಷ್ಟು ಆಶ್ಚರ್ಯವೋ , ಇಂತಹ ಕೋರ್ಸ್ ಗಳು ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಿಂದಲೇ ನಡೆಯುತ್ತಿವೆ ಎಂಬುದೂ ಸಂತಸದ ಸಂಗತಿ. ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯು ಇಂತಹ ಅನೇಕ ಕೋರ್ಸ್ ಗಳನ್ನು ನೀಡುವ ಮೂಲಕ ಯುವಕರಲ್ಲಿ ವೃತ್ತಿ ಕೌಶಲ್ಯ ಹೆಚ್ಚಿಸಿ ಸ್ವಾಲಂಬಿಗಳನ್ನಾಗಿ ಮಾಡುವ ಉದ್ದೇಶ ಹೊಂದಿದೆ.
ಸಿಪೆಟ್: ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆ (ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ ) ಸಿಪೆಟ್ ಸಂಸ್ಥೆಯು ಭಾರತ ಸರ್ಕಾರದ ರಸಾಯನ ಪೆಟ್ರೋರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದೆ. ಪ್ಲಾಸ್ಟಿಕ್ ಉತ್ಪನ್ನಗಳು ದೇಶದ ಪ್ರಗತಿಗೂ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಹಾಗಾಗಿ ಇವುಗಳ ಉತ್ಪನ್ನಗಳ ತಯಾರಿ ಉತ್ತೇಜಿಸಲು ಕೇಂದ್ರ ಸರ್ಕಾರವು ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯನ್ನು (CIPET) ಸ್ಥಾಪಿಸಿದೆ.1968 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಗೆ ಈಗ 55 ರ ಹರೆಯ.ನಮ್ಮ ರಾಜ್ಯದಲ್ಲಿ ಕರ್ನಾಟಕದಲ್ಲಿ 1991 ರಲ್ಲಿ ಮೈಸೂರಲ್ಲಿ ಆರಂಭವಾಯಿತು. ಪಾಲಿಮರ್/ ಪ್ಲಾಸ್ಟಿಕ್ ಕೈಗಾರಿಕೆ ಕುರಿತ ಕೋರ್ಸ್ ಗಳನ್ನು ಹೊಂದಿರುವ ಕರ್ನಾಟಕದ ಏಕೈಕ ಶಿಕ್ಷಣ ಸಂಸ್ಥೆ ಇದು. ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸ್ಥಾಪಿಸಿದ ದೇಶದ 40 ಸಂಸ್ಥೆಗಳಲ್ಲಿ ಇದು ಕೂಡ ಒಂದು. ಆದರೂ ಕರ್ನಾಟಕದ ಯುವಕರಿಗೆ ಇದರ ಅರಿವೇ ಇಲ್ಲ ಆದ್ದರಿಂದ ಹೊರ ರಾಜ್ಯಗಳಿಂದ ಬರುವವರೇ ಹೆಚ್ಚು. ವಿವಿಧ ಪರಿಕರಗಳ ಉತ್ಪಾದನೆ ಹಾಗೂ ಸಂರಕ್ಷಣಾ ಘಟಕಗಳಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಿಪೆಟ್ ಸ್ವಾಯತ್ತ ಸಂಸ್ಥೆಯಾಗಿ ಬೆಳೆದಿದೆ.
ಏನಿದು ಕೋರ್ಸ್?
ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಕೃಷಿ, ಆರೋಗ್ಯ, ಸಾರಿಗೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಪಾಲಿಮರ್/ಪ್ಲಾಸ್ಟಿಕ್ಸ್ ಅವಶ್ಯಕತೆ ಇದ್ದೇ ಇದೆ. ಇಂಥ ಪ್ಲಾಸ್ಟಿಕ್ಸ್ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸಿ ಕೊಡಬಲ್ಲದು. ಅದಕ್ಕೆ ದಾರಿ ಮಾಡಿಕೊಡುತ್ತಿದೆ ಮೈಸೂರಿನಲ್ಲಿರುವ ಕೇಂದ್ರ ಸರ್ಕಾರದ “ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆ”. ಶೈಕ್ಷಣಿಕ, ತಂತ್ರಜ್ಞಾನ ಮತ್ತು ಸಂಶೋಧನೆ ವ್ಯವಸ್ಥೆಯಲ್ಲಿ ಸ್ನಾತಕ ಡಿಪ್ಲೋಮಾ ಮತ್ತು ಡಿಪ್ಲೋಮಾ ನೀಡಲಾಗುತ್ತಿದೆ. ಮಾನವ ಸಂಪನ್ಮೂಲದ ಭಾರೀ ಬೇಡಿಕೆಯಿಂದಾಗಿ ಸಿಪೆಟ್ ಕರ್ನಾಟಕದ ವಿದ್ಯಾರ್ಥಿಗಳು ಪೆಟ್ರೋಕೆಮಿಕಲ್ಸ್ /ಪ್ಲಾಸ್ಟಿಕ್ಸ್ /ಪಾಲಿಮರ್ ಸಂಬಂಧಿತ ಕೈಗಾರಿಕಾ ವಲಯದಲ್ಲಿ ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದಾರೆ.
ಯಾರು ಮಾಡಬಹುದು?
ಅಖಿಲ ಭಾರತ ತಾಂತ್ರಿಕ ಮಂಡಳಿಯಿಂದ ಮಂಜೂರಾತಿ ದೊರೆತ ಈ ಕೆಳಗಿನ ವಿಭಾಗಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಈ ವೃತ್ತಿಪರ ಶಿಕ್ಷಣದ ನಂತರ ಉದ್ಯೋಗಕ್ಕೆ ವಿಪುಲ ಅವಕಾಶಗಳು ದೊರೆಯುತ್ತವೆ.
ಕೇಂದ್ರದಲ್ಲಿ ದೊರೆಯುವ ಕೋರ್ಸ್ ಗಳು ಕೆಳಗಿನಂತಿವೆ ::
ಡಿಪ್ಲೋಮಾ ಕೋರ್ಸ್ ನ ಹೆಸರು ಪ್ರವೇಶಕ್ಕಾಗಿ ಅರ್ಹತೆ
ಎಂಎಸ್ಸಿ ಇನ್ ಪಾಲಿಮರ್ ಸೈನ್ಸ್ – 2 yearS ಬಿ.ಎಸ್ಸಿ (3 YEARS)
ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಪ್ರೊಸೆಸಿಂಗ್ & ಟೆಸ್ಟಿಂಗ್ (PGD-PPT) – 2 yearS ಬಿ.ಎಸ್ಸಿ (3 YEARS)
ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (DPT) 3 year 10ನೇ ತರಗತಿ ಪಾಸ್
ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ DPMT- 3 year 10ನೇ ತರಗತಿ ಪಾಸ್
ಎಸ್.ಎಸ್.ಎಲ್.ಸಿ , ಪಿ.ಯು.ಸಿ (ವಿಜ್ಞಾನ) ಮತ್ತುಬಿ.ಎಸ್.ಸ್ಸಿ ಪರೀಕ್ಷೆಯಲ್ಲಿತೇರ್ಗಡೆಯಾದವರು/ಹಾಜರಾದವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Link:https://cipet23.onlineregistration.org/CIPಇಖಿಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ www.cipet.gov.in
ಡಿಪ್ಲೋಮಾ 2 ನೇ ವರ್ಷಕ್ಕೆ ನೇರ ಪ್ರವೇಶ (Lateral Entry for Direct 2nd year Diploma)
ಡಿಪ್ಲೋಮಾ ಕೋರ್ಸ್ ನ ಹೆಸರು ಪ್ರವೇಶಕ್ಕಾಗಿ ಅರ್ಹತೆ
ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (DPT) ? 2 year P.U.C (PCM), ITI(Fitter, Machinist/Turner)
ಡಿಪ್ಲೋಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ DPMT)- 2 year
ಪ್ರವೇಶ ಹೇಗೆ?
ಈ ಕೋರ್ಸ್ ಗಳಿಗೆ ಅಖಿಲ ಭಾರತ ಮಟ್ಟದಲ್ಲಿ ಪ್ರವೇಶ ಪರೀಕ್ಷೆ (CAT) ನಡೆಯುತ್ತದೆ. 2023-24 ಸಾಲಿನ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಮೈಸೂರಿನ ಸಿಪೆಟ್ ನ ಕೋರ್ಸ್ ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಾಗ ಕರ್ನಾಟಕ ದವರಿಗೆ ಆದ್ಯತೆ ನೀಡಲಾಗುತ್ತದೆ.
ಇಲ್ಲಿ ವ್ಯಾಸಂಗ ಮಾಡಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ಉದ್ಯೋಗ ದೊರಕಿದೆ. ಅನೇಕರು ಸ್ವಉದ್ಯೋಗ ಆರಂಭಿಸಿದ್ದಾರೆ. ಇಲ್ಲಿ ವಿದ್ಯಾರ್ಥಿನಿಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯಿದೆ. ವಿದ್ಯಾರ್ಥಿ ವೇತನ ಸೌಲಭ್ಯವು ಇದೆ. ಪ್ರತಿ ಸೆಮಿಸ್ಟರ್ ಗೆ ರೂ.20 ಸಾವಿರದಷ್ಟು ಖರ್ಚು ಬರುತ್ತದೆ.
ಏನೆಲ್ಲ ಕಲಿಯಬಹುದು?
ಪ್ಲಾಸ್ಟಿಕ್ ವೈವಿದ್ಯಮಯ ಬಳಕೆ, ಪ್ಲಾಸ್ಟಿಕ್ ಮೌಲ್ದಿಂಗ್, ಪ್ಲಾಸ್ಟಿಕ್ ಸಂಸ್ಕರಣೆ, ಪ್ಲಾಸ್ಟಿಕ್ ನ ಗುಣಮಟ್ಟ ಪರಿಶೀಲನೆ, ಆಧುನಿಕ ವಿನ್ಯಾಸದಲ್ಲಿ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಪ್ಲಾಸ್ಟಿಕ್ ಮರುಬಳಕೆ ವಿಧಾನ , ಪ್ಲಾಸ್ಟಿಕ್ ಪೈಪ್ ಗಳು ಮತ್ತು ಇನ್ನಿತರೆ ವಸ್ತುಗಳ ತಯಾರಿಕೆ, ಮಾರುಕಟ್ಟೆ ಹಾಗೂ ದರ ಪರಿಷ್ಕರಣೆ.
ಉದ್ಯೋಗಾವಕಾಶಗಳು ಏನೆಲ್ಲ?
● ಆಟೋಮೊಬೈಲ್ಸ್ ಕೈಗಾರಿಕೆಗಳು
● ವಾಹನದ ಬಿಡಿ ಭಾಗಗಳನ್ನು ತಯಾರಿಸುವ ಉದ್ಯಮಗಳು
● ಪಿ.ವಿ.ಸಿ ಪೈಪ್ ತಯಾರಿಕಾ ಕಂಪೆನಿಗಳು ಮತ್ತು ವಿದ್ಯುನ್ಮಾನ
● ಪ್ಲಾಸ್ಟಿಕ್ ವಸ್ತು ಉತ್ಪಾದನಾ ಕಂಪೆನಿಗಳಲ್ಲಿ
● ಆಹಾರೋದ್ಯಮ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ
● ಆಗ್ರೋ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ ಕ್ಷೇತ್ರ
● ಎಲೆಕ್ಟ್ರಿಕಲ್ಸ್ ,ಎಲೆಕ್ಟ್ರಾನಿಕ್ಸ್ ಕ್ಷೇತ್ರ
● ಆಹಾರೋದ್ಯಮ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 0821-2516322
ವರದಿ : ಆರ್.ಕೆ.ಬಾಲಚಂದ್ರ,
ಅಂಕಣಕಾರರು,
ಬ್ಯಾಂಕಿಂಗ್ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು
ಹಾಗೂ ವೃತ್ತಿ ಮಾರ್ಗದರ್ಶಕರು. ಮಡಿಕೇರಿ.