ಮಡಿಕೇರಿ, ಜೂ.6 : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಡಿಕೇರಿ ನಗರದ ಹೊರ ವಲಯದ
ಕೊಡಗು ಜಿಲ್ಲಾ ಪಂಚಾಯತ್ ಆವರಣದಲ್ಲಿ ಆರ್ಟಿಫಿಶಿಯಲ್ ರಿಜನರೇಷನ್ ಮಾದರಿಯಲ್ಲಿ
ಭೂಕುಸಿತ ಹಾಗೂ ಬರೆ ಕುಸಿಯುವ ಜಾಗದಲ್ಲಿ ಇರುವ ಜಾಗದಲ್ಲಿ ಔಷಧೀಯ ಗುಣ ಹಾಗೂ ಬಹುಪಯೋಗಿ ಹೊಂದಿರುವ ಲಾವಂಚ ( ಕಸ್ಸ್ ಗ್ರಾಸ್ ) ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯಕ್ಕೆ ಜಿ.ಪಂ ಸಿಇಒ ಡಾ. ಎಸ್.ಆಕಾಶ್ ಚಾಲನೆ ನೀಡಿದರು.
ಜಿ.ಪಂ ಕಚೇರಿಯ ಗುಡ್ಡದ ಸುತ್ತಲಿನ ಇಳಿಜಾರು ಪ್ರದೇಶದಲ್ಲಿ 1600 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸುವ ಉದ್ದೇಶ ಹೊಂದಿರುವ ಸ್ಥಳದಲ್ಲಿ ಅಧಿಕಾರಿಗಳು, ಸ್ವಯಂಸೇವಕರು ಜತೆಗೂಡಿ ಸಸಿನೆಟ್ಟರು.
ಈ ಸಂದರ್ಭ ಮಾತನಾಡಿದ ಜಿ.ಪಂ ಸಿಇಓ ಡಾ ಎಸ್.ಆಕಾಶ್, ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪ್ರದೇಶದಲ್ಲಿ ಹಸಿರು ಗಿಡ ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು ಎಂದರು.
ನಾವು ಪರಿಸರವನ್ನು ಸಂರಕ್ಷಿಸಿದರೆ, ಪರಿಸರ ನಮ್ಮನ್ನು ಸಂರಕ್ಷಿಸುತ್ತದೆ ಎಂದು ತಿಳಿಸಿದರು.
ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ಎನ್. ಮೂರ್ತಿ ಮಾತನಾಡಿ, ಪರಿಸರ ಸಮತೋಲನ ಕಾಪಾಡಿಕೊಳ್ಳುವ ದಿಸೆಯಲ್ಲಿ ನಾವು ಹೆಚ್ಚೆಚ್ಚು ಗಿಡ ಮರಗಳನ್ನು ಬೆಳೆಸುವ ಮೂಲಕ ಉತ್ತಮ ಪರಿಸರ ಕಾಪಾಡಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಮಾಹಿತಿ ನೀಡಿ ಪರಿಸರ ಘೋಷಣೆಗಳನ್ನು ಹೇಳಿದ
ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್ ನ ಜಿಲ್ಲಾ ಘಟಕದ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ನಾವು ನೆಟ್ಟ ಗಿಡಗಳ ಸಂಪೋಷಿಸಿ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ತಿಳಿಸಿದರು.
ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮಾಥ್ಯೂ, ಸಂಯೋಜಕಿ ಯು.ಸಿ. ದಮಯಂತಿ, ಜಿ.ಪಂ. ಉಪ ಕಾರ್ಯದರ್ಶಿ ಧನಂಜಯ್, ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ. ಎಸ್ .ಚಂಗಪ್ಪ, ವಲಯ ಅರಣ್ಯ ಅಧಿಕಾರಿ ಮಯೂರ್ ಕಾರವೇಕರ, ಉಪ ವಲಯ ಅರಣ್ಯ ಅಧಿಕಾರಿ ಎಂ ಜಿ.ದರ್ಶಿನಿ ಗಸ್ತು ಅರಣ್ಯಪಾಲಕ ಬಿ.ಪಿ. ಚಂದ್ರಾವತಿ ಹಾಗೂ ಅರಣ್ಯ ಇಲಾಖೆಯ, ಜಿಲ್ಲಾ ಪಂಚಾಯತಿ ಕಛೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಿಲ್ಲಾ ಸಾಮಾಜಿಕ ಅರಣ್ಯ ಇಲಾಖೆಯ ಮಡಿಕೇರಿ ವಲಯದ ವತಿಯಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್ ನ ಜಿಲ್ಲಾ ಘಟಕ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಪರಿಸರ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಶಿಕ್ಷಕರು, ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ವಯಂ ಸೇವಕರು ಜತೆಗೂಡಿ ಲಾವಂಚ ಸಸಿಗಳನ್ನು ನೆಟ್ಟರು.
ಇದೇ ವೇಳೆಯಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಪರಿಸರ ಘೋಷಣೆಗಳನ್ನು ವಿದ್ಯಾರ್ಥಿಗಳು ಪ್ರಚುರಪಡಿಸಿದರು.