ದಾಸವಾಳ ಒಂದು ಸುಂದರವಾದ ಹೂವು. ಈ ಅದ್ಭುತವಾದ ಹೂವು ಅನೇಕ ಆರೊಗ್ಯ ಸಮಸ್ಯೆಗಳಿಂದ ದೂರ ಉಳಿಸುತ್ತದೆ. ಇದು ನಿಮ್ಮ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವುದಲ್ಲದೇ, ಹೃದಯ ರಕ್ತನಾಳದ ಕಾಯಿಲೆಗಳನ್ನು ತಡೆಯುತ್ತದೆ.
ದಾಸವಾಳ ಹೂವಿನಲ್ಲಿ ಅತ್ಯಂತ ಪ್ರಯೋಜನಕಾರಿಯಾದ ಆರೋಗ್ಯಕರ ಅಂಶಗಳಿವೆ ಅನ್ನೋದು ಬಹುತೇಕ ಮಂದಿಗೆ ಗೊತ್ತಿಲ್ಲ. ದಾಸವಾಳ ಹೂವು ತನ್ನ ಒಡಲಲ್ಲಿ ಹೃದಯಕ್ಕೆ ಸಂಬಂಧಿಸಿದಂತೆ ಹಲವಾರು ಆರೋಗ್ಯದಾಯಕ ಗುಣಗಳನ್ನು ಹೊಂದಿದೆ. ಈ ಹೂವು ಅನೇಕ ಔಷಧೀಯ ಗುಣಗಳನ್ನು ಒಳಗೊಂಡಿರುವುದಲ್ಲದೆ, ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ರಕ್ಷಣೆ ಕೊಡುವ ಆಹಾರವಾಗಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.
ಅದರಲ್ಲೂ ಕೂದಲು ಉದುರುವಿಕೆ ನಿವಾರಣೆಗೆ ದಾಸವಾಳವು ಹೇಳಿ ಮಾಡಿಸಿದ ಔಷಧ. ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಬದಲಾಗಿ ತ್ವಚೆಯಲ್ಲಿನ ವಯಸ್ಸಾದ ಚಿಹ್ನೆಗಳನ್ನು ಕೂಡ ತಡೆಯಲು ಸಹಾಯ ಮಾಡುತ್ತದೆ.
ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ : ದಾಸವಾಳವು ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಪರಿಣಾಮಕಾರಿಯಾಗಿದೆ. ‘ಜರ್ನಲ್ ಆಫ್ ನ್ಯೂಟ್ರೀಶನ್’ನಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ ದಾಸವಾಳದ ಚಹಾವನ್ನು ಕುಡಿಯುವುದರಿಂದ ಸಿಸ್ಟೋಲಿಕ್ ರಕ್ತದೊತ್ತಡ ಕಡಿಮೆಯಾಗುತ್ತದೆ. ಜತೆಗೆ ಡಯಾಸ್ಟೋಲಿಕ್ ರಕ್ತದೊತ್ತಡವನ್ನೂ ಕಡಿಮೆ ಮಾಡುವಲ್ಲಿ ಸಹಕಾರಿ ಎಂಬುದು ತಿಳಿದು ಬಂದಿದೆ.
ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುತ್ತದೆ : ಜರ್ನಲ್ ಆಫ್ ಆಲ್ಟರ್ನೇಟಿವ್ ಮತ್ತು ಕಾಂಪ್ಲಿಮೆಂಟರಿ ಮೆಡಿಸಿನ್’ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ದಾಸವಾಳ ಚಹಾದ ಸೇವೆನೆಯಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಶೇ.22 ರಷ್ಟು ಕಡಿಮೆ ಮಾಡುತ್ತದೆ. ಜತೆಗೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಡೆದು ಹೃದಯಕ್ಕೆ ಸಂಭವಿಸುವ ಅಪಾಯವನ್ನು ತಡೆಯಲು ಹೆಚ್ಚು ಸಹಾಯ ಮಾಡುತ್ತದೆ.
ಮುಟ್ಟಿನ ನೋವನ್ನು ನಿವಾರಿಸುತ್ತದೆ ; ಋತುಚಕ್ರದ ಸಮಯದಲ್ಲಿ ದಾಸವಾಳ ಹೂವು ಹೆಚ್ಚು ಪ್ರಯೋಜನಕಾರಿಯಾಗಿದೆ. ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನುಭವಿಸುವ ನೋವು ಮತ್ತು ಸೆಳೆತದಿಂದ ಹೊರಬರಲು ದಾಸವಾಳ ಬೆಸ್ಟ್ ಎಂದೇ ಹೇಳಬಹುದು.
ಏಕೆಂದರೆ, ಇದು ಹಾರ್ಮೋನುಗಳ ಸಮತೋಲನವನ್ನು ಮರುಸ್ಥಾಪಿಸುವ ಮೂಲಕ ಅದನ್ನು ನಿವಾರಿಸಲು ಅನುವು ಮಾಡಿಕೊಡುತ್ತದೆ. ಈ ಹೂವಿನ ಚಹಾ ಕುಡಿಯವುದರಿಂದ ಮನಸ್ಥಿತಿ ಮತ್ತು ಖಿನ್ನತೆಯಿಂದ ದೂರ ಉಳಿಯಬಹುದು. ಇದೊಂದು ಪರಿಪೂರ್ಣವಾದ ಪಾನೀಯವಾಗಿದ್ದು, ನಿಮ್ಮ ದೈನಂದಿನ ಜೀವನದಲ್ಲಿ ದಾಸವಾಳ ಹೂವನ್ನು ಆಹಾರವಾಗಿ ಬಳಸಿ.
ಮೊಡವೆಗೆ ಮದ್ದು : ಮೊಡವೆ ಕಡಿಮೆ ಮಾಡಲು ದುಬಾರಿ ಚಿಕಿತ್ಸೆ ಮಾಡಿಸುತ್ತೇವೆ, ಆದರೆ ದಿನಾ ದಾಸವಾಳ ಹೂವಿನ ಜ್ಯೂಸ್ ಕುಡಿಯುವುದರಿಂದ ಮೊಡವೆ ಬರುವುದನ್ನು ತಡೆಯಬಹುದು, ಅಲ್ಲದೆ ಈ ಜ್ಯೂಸ್ ನಿಮ್ಮ ತ್ವಚೆ ಕಾಂತಿಯನ್ನೂ ಹೆಚ್ಚಿಸುತ್ತದೆ.
ದೇಹದ ನೀರಿನಂಶ : ದೇಹದಲ್ಲಿ ನೀರಿನಂಶ ಕಮ್ಮಿಯಾಗದಂತೆ ನೋಡಿಕೊಳ್ಳುತ್ತದೆ. ನೀರಿನಂಶದ ಕೊರತೆಯಿಂದ ಬಳಲುತ್ತಿರುವವರು, ಡ್ರೈ ಸ್ಕಿನ್ ಇರುವವರು ಇದರ ಜ್ಯೂಸ್ ಕುಡಿಯುವುದು ಒಳ್ಳೆಯದು. ಕೆಲವರಿಗೆ ಹೊಟ್ಟೆ ಸರಿಯಾಗಿ ಹಸಿಯುವುದಿಲ್ಲ, ಹೊಟ್ಟೆ ಹಸಿಯುತ್ತಿಲ್ಲ ಎಂದು ಊಟ ಸರಿಯಾಗಿ ಮಾಡದಿದ್ದರೆ ನಿಶ್ಯಕ್ತಿ ಉಂಟಾಗುವುದು. ಹೊಟ್ಟೆ ಹಸಿವು ಸರಿಯಾದ ರೀತಿಯಲ್ಲಿ ಆಗಲು ದಾಸವಾಳವನ್ನು ತಿನ್ನುವುದು ಒಳ್ಳೆಯದು.
ಕೂದಲುದುರುವಿಕೆಗೆ ಮದ್ದು : ಕೂದಲು ಉದುರುವುದನ್ನು ತಡೆಯುವ ಉತ್ತಮ ಮನೆ ಮದ್ದು ಇದಾಗಿದೆ. ಎಣ್ಣೆಯಲ್ಲಿ ದಾಸವಾಳ ಹೂವನ್ನು ಹಾಕಿ ಕಾಯಿಸಿ, ಆ ಎಣ್ಣೆಯನ್ನು ಬಳಸಿದರೆ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲ, ಪ್ರತೀದಿನ ಈ ಎಣ್ಣೆ ಹಚ್ಚಿದರೆ ಕಪ್ಪಾದ ಕೂದಲಿನ ಸೌಂದರ್ಯ ನಿಮ್ಮದಾಗುವುದು. ಈ ಹೂವಿನಿಂದ ತೆಗೆದ ರಸ ಕೂದಲಿಗೆ ಹೊಳಪು ನೀಡಿ ಉತ್ತಮ ಕಂಡೀಶನರ್ ನಂತೆ ವರ್ತಿಸುತ್ತದೆ. ತಲೆಹೊಟ್ಟು ನಿವಾರಿಸಿ, ಇದು ಕೂದಲಿಗೆ ಕಪ್ಪು ಬಣ್ಣ ನೀಡುತ್ತದೆ. ದಾಸವಾಳ ಎಲೆಯ ಲೋಳೆ, ಸ್ವಲ್ಪ ತೆಂಗಿನೆಣ್ಣೆಗೆ 7-8 ಬಿಳಿ ದಾಸವಾಳದ ಎಲೆ ಹಾಕಿ ಕಾಯಿಸಿ ತಣಿಸಿ ಕೂದಲಿಗೆ ಹಚ್ಚಿ ನಂತರ ಸ್ನಾನ ಮಾಡಿದರೆ ಕೂದಲು ಸ್ಮೂತ್ ಆಗಿ ಹೊಳಪು ಬರುತ್ತದೆ.
ಚರ್ಮದ ಆರೈಕೆ : ದಾಸವಾಳ ಹೂವಿನ ತೈಲದ ಬಳಕೆಯಿಂದ ಚರ್ಮಕ್ಕೆ ಹೊಳಪು ಬರುತ್ತದೆ. ಹೂವು ಹಾಗೂ ಎಲೆಗಳನ್ನು ಒಣಗಿಸಿ, ಸುಟ್ಟ ಬಳಿಕ ಸಿಗುವ ಬೂದಿಯನ್ನು ಹಚ್ಚಿದರೆ, ಕಣ್ಣಹುಬ್ಬುಗಳು ಹೊಳಪು ಪಡೆಯುತ್ತವೆ. ಈ ಸಸ್ಯದ ಬೇರುಗಳನ್ನು ಎಣ್ಣೆಯಲ್ಲಿ ಹಾಕಿ, ಬೇರಿನಲ್ಲಿರುವ ನೀರಿನ ಅಂಶ ಆವಿಯಾಗುವವರೆಗೂ ಕುದಿಸಬೇಕು. ಗಾಯಗಳಿಗೆ ಈ ಎಣ್ಣೆ ಲೇಪಿಸಿದರೆ ಗುಣಮುಖವಾಗುತ್ತದೆ.
ದಾಸವಾಳವು ಹೃದ್ರೋಗ ಸೇರಿದಂತೆ ವಿವಿಧ ರೋಗಗಳನ್ನು ಉಂಟು ಮಾಡುವ ಜೀವಕೋಶಗಳನ್ನು ನಾಶಪಡಿಸಲು ಸಹಕಾರಿಯಾಗಿದೆ. ಹೀಗಾಗಿ ವೈದ್ಯರ ಸಲಹೆ ಪಡೆದು ದಾಸವಾಳ ಚಹಾ ಸೇವಿಸುವುದನ್ನು ರೂಢಿಸಿಕೊಂಡರೆ ಉತ್ತಮ ಆರೋಗ್ಯವನ್ನು ಕಂಡುಕೋಳ್ಳಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಪ್ರಮಾಣ ಹೆಚ್ಚಾಗಿದ್ದು, ಇದಕ್ಕೆಲ್ಲ ದಾಸವಾಳ ರಾಮಬಾಣದಂತೆ ಕೆಲಸ ಮಾಡುತ್ತದೆ.