ಮಡಿಕೇರಿ ಜೂ.13 : ಕಾವೇರಿ ನದಿಯ ಉಗಮ ಸ್ಥಾನ ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಆರಂಭಗೊಂಡಿದ್ದರೂ ನಿರೀಕ್ಷಿತ ಮಳೆಯಾಗುತ್ತಿಲ್ಲ. ಜೂನ್ 15ಕ್ಕೆ ಬಿಪೊರ್ ಜೋಯ್ ಚಂಡಮಾರುತ ಗುಜರಾತ್ ಪ್ರವೇಶಿಸಲಿದ್ದು, ಅದರ ಪರಿಣಾಮ ದಕ್ಷಿಣ ಕನ್ನಡ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಈಗಾಗಲೇ ಕಂಡು ಬಂದಿರುವುದರಿಂದ ಕೊಡಗಿನಲ್ಲೂ ಶೀತ ಗಾಳಿಯೊಂದಿಗೆ ಸಾಧಾರಣ ಮಳೆಯಾಗುತ್ತಿದೆ.
ವಾರ್ಷಿಕ 150 ರಿಂದ 200 ಇಂಚಿಗೂ ಅಧಿಕ ಮಳೆಯಾಗುವ ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಆರಂಭಗೊಂಡು ಎರಡು ವಾರವೇ ಆಗಿದ್ದರೂ ಉತ್ತಮ ಮಳೆಯಾಗಿಲ್ಲ. ಬಿಸಿಲ ನಡುವೆಯೇ ತುಂತುರು ಮಳೆಯಾಗುತ್ತಿದ್ದು, ಕಳೆದ 2 ದಿನಗಳಿಂದ ಚಳಿಯ ವಾತಾವರಣ ಮೂಡಿದೆ. ಚಂಡಮಾರುತದ ಪರಿಣಾಮ ಮೋಡ ಕವಿದ ವಾತಾವರಣದೊಂದಿಗೆ ಚಳಿಯೂ ಇದ್ದು, ಮಳೆ ಆರಂಭಗೊಳ್ಳುವ ಲಕ್ಷಣ ಗೋಚರಿಸಿದೆ.
ಚಂಡಮಾರುತದಿಂದ ಉಂಟಾಗಬಹುದಾದ ಅನಾಹುತ ಮತ್ತು ವಾಡಿಕೆ ಮಳೆ ಅತಿಯಾದರೆ ಎದುರಾಗಬಹುದಾದದ ಕಷ್ಟ ನಷ್ಟಗಳನ್ನು ಎದುರಿಸಲು ಜಿಲ್ಲಾಡಳಿತ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜಿಲ್ಲೆಯ ಇಬ್ಬರು ಶಾಸಕರು ಕೂಡ ಮುಂಜಾಗೃತಾ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.
::: ಗ್ರಾಮಗಳಲ್ಲಿ ಆತಂಕ :::
2018 ರಲ್ಲಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದಾಗಿ ಉಂಟಾದ ಸಾವು ನೋವುಗಳ ಕರಿ ನೆರಳು ಈಗಲೂ ಜಿಲ್ಲೆಯ ಜನರನ್ನು ಕಾಡುತ್ತಿದ್ದು, ಮಳೆಗಾಲವೆಂದರೆ ಭಯ ಪಡುವ ಪರಿಸ್ಥಿತಿ ಪ್ರತಿವರ್ಷ ಉದ್ಭವಿಸುತ್ತಿದೆ. ಈ ಬಾರಿ ಕೂಡ 45 ಕ್ಕೂ ಹೆಚ್ಚು ಗ್ರಾಮಗಳಿಗೆ ಭೂಕುಸಿತ ಮತ್ತು ಪ್ರವಾಹದ ಆತಂಕವಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.
ಮೂರು ತಿಂಗಳು ಎಡಬಿಡದೆ ಮಳೆ ಸುರಿಯುವುದರಿಂದ ಬೆಟ್ಟಗುಡ್ಡಗಳಿಂದ ಕೂಡಿರುವ ಜಿಲ್ಲೆ ಅಲ್ಲಲ್ಲಿ ಭೂಕುಸಿತ, ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆಗಳಿದೆ. ಕಳೆದ 5 ವರ್ಷಗಳಲ್ಲಿ ಎದುರಾಗಿರುವ ಭೂಕುಸಿತ, ಪ್ರವಾಹದ ಸ್ಥಿತಿಗಳನ್ನು ಅಧ್ಯಯನ ಮಾಡಿರುವ ವಿಪ್ಪತ್ತು ನಿರ್ವಹಣಾ ತಂಡ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿರುವ ಅಪಾಯದಂಚಿನ ಗ್ರಾಮಗಳನ್ನು ಗುರುತಿಸಿದೆ.
ಮಡಿಕೇರಿ ತಾಲ್ಲೂಕಿನ ತಾವೂರು, ತಣ್ಣಿಮಾನಿ, ಪದಕಲ್ಲು, ಕಡಿಯತ್ತೂರು, ಚರಿಯಪರಂಬು ಪೈಸಾರಿ, ಚೆರಿಯಪರಂಬು, ಬಲಮುರಿ, ದೊಡ್ಡಪುಲಿಕೋಟು, ಎಮ್ಮೆಮಾಡು, ಕಾಂತೂರು, ಮಕ್ಕಂದೂರು. ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ, ಗುಮ್ಮನಕೊಲ್ಲಿ ಬಸವನಹಳ್ಳಿ, ಮಾದಪಟ್ಟಣ, ನೆಲ್ಯಹುದಿಕೇರಿ, ಕಣಿವೆ, ಕೂಡಿಗೆ, ಹೆಗ್ಗಡಹಳ್ಳಿ, ಕುಶಾಲನಗರ ಪಟ್ಟಣದ ಹಲವು ಬಡಾವಣೆಗಳು ಸೇರಿದಂತೆ 45 ಕ್ಕೂ ಹೆಚ್ಚು ಪ್ರದೇಶಗಳು ಕಾವೇರಿ ನದಿಯಿಂದ ಎದುರಾಗಬಹುದಾದ ಪ್ರವಾಹದಿಂದ ತಪ್ಪಿಸಿಕೊಳ್ಳಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಮಡಿಕೇರಿ ತಾಲ್ಲೂಕಿನಲ್ಲಿ 765 ಕುಟುಂಬಗಳು, ಸೋಮವಾರಪೇಟೆ ತಾಲ್ಲೂಕಿನಲ್ಲಿ 1143 ಕುಟುಂಬಗಳು ಮತ್ತು ವಿರಾಜಪೇಟೆ ತಾಲ್ಲೂಕಿನಲ್ಲಿ 582 ಕುಟುಂಬಗಳು ಮಳೆಗಾಲದ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಡಳಿತ ವರದಿ ಮಾಡಿದೆ. ಈಗಾಗಲೇ ಅಪಾಯದಂಚಿನಲ್ಲಿರುವ ಕುಟುಂಬಗಳಿಗೆ ಸುರಕ್ಷಿತವಾಗಿರುವಂತೆ ಸೂಚನೆ ನೀಡಲಾಗಿದೆ.
::: ಕಾರ್ಯಾಚರಣೆಗೆ ಸಜ್ಜು :::
ಜಿಲ್ಲೆಯಲ್ಲಿ ಮಳೆಗಾಲದ ಮಳೆ ಸುರಿಯಲು ಮೀನಾ ಮೇಷ ಎಣಿಸುತ್ತಿದೆ. ಅಲ್ಲಲ್ಲಿ ತುಂತುರು ಮಳೆಯಾಗುತ್ತಿದ್ದು, ಮುಂದಿನ ವಾರದಿಂದ ಮಳೆ ತೀವ್ರಗೊಳ್ಳುವ ಸಾಧ್ಯತೆಗಳಿದೆ. ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ್ದಲ್ಲಿ ಎದುರಿಸಲು ವಿವಿಧ ಇಲಾಖೆಗಳು ಸನ್ನದ್ಧಗೊಂಡಿವೆ.
ಎನ್‍ಡಿಆರ್‍ಎಫ್ ತಂಡದ ಸಿಬ್ಬಂದಿಗಳು ವಿಪತ್ತು ನಿರ್ವಹಣೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈಗಾಗಲೇ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಾಕೃತಿಕ ವಿಕೋಪವನ್ನು ಎದುರಿಸಲು ಅಗ್ನಿಶಾಮಕ ದಳ, ಪೊಲೀಸ್ ರಕ್ಷಣಾ ಪಡೆ ಸೇರಿದಂತೆ ವಿವಿಧ ಇಲಾಖೆಗಳ ಜೊತೆ ಎನ್‍ಡಿಆರ್‍ಎಫ್ ತಂಡವು ಕಾರ್ಯನಿರ್ವಹಿಸಲಿದೆ. ಇನ್ಸ್‍ಪೆಕ್ಟರ್ ಶಾಂತಿಲಾಲ್ ಜಾಟಿಯಾ ನೇತೃತ್ವದಲ್ಲಿ 23 ಸಿಬ್ಬಂದಿಯ ತಂಡ ಆಗಮಿಸಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
2018 ರಲ್ಲಿ ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಭೂಕುಸಿತವಾದಾಗ ಅನೇಕರು ಪ್ರಾಣವನ್ನು ಕಳೆದುಕೊಂಡಿದ್ದರು, ಸಾವಿರಾರು ಕುಟುಂಬಗಳು ಮನೆಗಳನ್ನು ಕಳೆದುಕೊಂಡಿದ್ದವು. 2019 ರಲ್ಲಿ ಭಾಗಮಂಡಲ ಸಮೀಪದ ಕೋರಂಗಾಲದಲ್ಲಿ ಭೂಕುಸಿತವಾಗಿ ಒಂದೇ ಬಾರಿಗೆ ಐವರ ಪ್ರಾಣಪಕ್ಷಿ ಹಾರಿಹೋಗಿತ್ತು.













