ಸೋಮವಾರಪೇಟೆ ಜೂ.22 : ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ವಾರ್ಷಿಕ ಸಭೆಯು ಸಂಘದ ಅಧ್ಯಕ್ಷ ಸಿ.ಕೆ.ಮಲ್ಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪಟ್ಟಣದ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಘಕ್ಕೆ 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಮುಂದಿನ ಸಾಲಿನಲ್ಲಿ ಅದ್ಧರೂರಿಯಾಗಿ ರಜತಮಹೋತ್ಸವ ನಡೆಸಲು ಸಭೆ ತೀರ್ಮಾನಿಸಿತು.
ಈ ಸಂದರ್ಭ ಸಂಘದ ಸಾಧನೆಯ ಸ್ಮರಣ ಸಂಚಿಕೆ ಹೊರತರಬೇಕೆಂದು ಸದಸ್ಯರು ಸೂಚಿಸಿದರು.
ಸಂಘದ ಅಧ್ಯಕ್ಷ ಸಿ.ಕೆ.ಮಲ್ಲಪ್ಪ ಮಾತನಾಡಿ, ಇಂದಿಗೂ ಸಾಕಷ್ಟು ನಿವೃತ್ತ ಸರ್ಕಾರಿ ನೌಕರರು ಸಂಕಷ್ಟದ ಜೀವನ ನಡೆಸುತ್ತಿದ್ದು, ತಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಪರದಾಡುತ್ತಿದ್ದಾರೆ. ನಮ್ಮ ನೆರವಿಗಾಗಿ ಸರ್ಕಾರ ಆರೋಗ್ಯ ಸಂಜೀವಿನಿಯಲ್ಲಿ ನಿವೃತ್ತ ಸರ್ಕಾರಿ ನೌಕರರನ್ನು ಸೇರ್ಪಡೆಗೊಳಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರೂ, ಇಂದಿಗೂ ಈಡೇರಿಲ್ಲ. ಸಂಘದ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದರು.
ಸಂಘದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಳವಾಗಬೇಕಿದೆ. ಎಲ್ಲ ನಿವೃತ್ತ ನೌಕರರನ್ನು ಸದಸ್ಯರನ್ನಾಗಿ ಮಾಡಬೇಕಾಗಿದೆ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದಸ್ಯರ ಅನುಕೂಲಕ್ಕಾಗಿ ಇನ್ನೂ ಹೆಚ್ಚಿನ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ಮಾದಮಯ್ಯ, ಸಂಘದ ಪದಾಧಿಕಾರಿಗಳಾದ ಹಾಲೆಬೇಲೂರು ನಿರ್ವಾಣಿ ಶೆಟ್ಟಿ, ಎಚ್.ಜಿ. ಕುಟ್ಟಪ್ಪ, ಬಿ.ಎಂ. ಆನಂದ, ಎಸ್.ಬಿ. ರಾಜಪ್ಪ, ಸಿ.ಬಿ. ಈರಪ್ಪ, ಬಿ.ಎಸ್. ನಿರ್ಮಲ, ಚಂದ್ರಹಾಸ್ ಭಟ್, ಕೆ.ಟಿ. ಮೇದಪ್ಪ, ಮಾಚಯ್ಯ, ಬಿ.ಕೆ. ಕುಟ್ಟಪ್ಪ, ಅಣ್ಣಪ್ಪ ಶೆಟ್ಟಿ, ಐ.ಜಿ. ಸುರೇಶ್, ಎಂ.ಎ. ವೀರಪ್ಪ ಇದ್ದರು.
ಇದೇ ಸಂದರ್ಭ ಸಂಘದ ಹಿರಿಯ ಸದಸ್ಯರಾದ ಎಚ್. ಶಿವಣ್ಣ, ಬಿ.ಬಿ.ಮೀನಾಕ್ಷಿ, ನಾಗಮ್ಮ ಹಾಗೂ ಸಚ್ಚಿದಾನಂದ ಅವರುಗಳನ್ನು ಸನ್ಮಾನಿಸಲಾಯಿತು.








