ಮಡಿಕೇರಿ ಜು.22 : ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಎಲ್ಲರೂ ಪಣತೊಟ್ಟು, ಸರ್ಕಾರಿ ಶಾಲೆಗಳನ್ನು ಉಳಿಸಬೇಕಾಗಿದೆ ಎಂದು ಚೆಟ್ಟಳ್ಳಿ ಗ್ರಾಮ ಪಂಚಾಯತಿ ಸದಸ್ಯರ ಸಿ.ಇ ತೀರ್ಥಕುಮಾರ್ ಅಭಿಪ್ರಾಯಪಟ್ಟರು.
ಗಾಂಧಿ ಯುವಕ ಸಂಘ ಕಂಡಕರೆ ಹಾಗೂ ಗಾಂಧಿ ಯುವಕ ಸಂಘ ಸರ್ವಧರ್ಮೀಯ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಸಮಿತಿ ವತಿಯಿಂದ ಕಂಡಕರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 25 ಕುರ್ಚಿಗಳ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಯ ಬಗ್ಗೆ ಎಲ್ಲರಿಗೂ ಕೀಳರಿಮೆ ಉಂಟಾಗಿದೆ. ಮಕ್ಕಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ನೀಡಿದರೆ ಮಾತ್ರ ಸರ್ಕಾರಿ ಶಾಲೆ ಉಳಿಯುವುದು. ಇತ್ತೀಚಿನ ದಿನಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆಯಿಂದ ಸರ್ಕಾರಿ ಶಾಲೆಗಳು ಮುಚ್ಚುವಂತಹ ಪರಿಸ್ಥಿತಿ ಎದುರಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ನೀಡುವಂತೆ ಮುತುವರ್ಜಿವಹಿಸಿದರೆ ಮಾತ್ರ ಸರ್ಕಾರಿ ಶಾಲೆಗಳು ಉಳಿಯುವಂತಾಗುವುದು. ಮುಂದಿನ ದಿನಗಳಲ್ಲಿ ಕಂಡಕರೆ ಶಾಲೆಗೆ ಗ್ರಾಮ ಪಂಚಾಯತಿ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಶ್ರಮವಹಿಸಲಾಗುವುದೆಂದು ಚೆಟ್ಟಳ್ಳಿ ಗ್ರಾಮ ಪಂಚಾಯತಿ ಸದಸ್ಯ ಸಿ.ಇ ತೀರ್ಥಕುಮಾರ್ ಹೇಳಿದರು.
ಗಾಂಧಿ ಯುವಕ ಸಂಘದ ಅಧ್ಯಕ್ಷ ಪತ್ರಕರ್ತ ಇಸ್ಮಾಯಿಲ್ ಕಂಡಕರೆ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸುವುದು ಸ್ಥಳೀಯರ ಕರ್ತವ್ಯವಾಗಿದೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪಡೆದವರು ಇಂದು ಸಮಾಜದಲ್ಲಿ ಉನ್ನ ಸ್ಥಾನವನ್ನು ಅಲಂಕರಿಸಿದ್ದಾರೆ.
ಸರ್ಕಾರವೂ ಸರ್ಕಾರಿ ಶಾಲೆಗಳನ್ನು ಉಳಿಸಲು ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ.
ವಿದ್ಯಾರ್ಥಿಗಳು ಸಂಖ್ಯೆಯ ನೆಪವೊಡ್ಡಿ ಶಿಕ್ಷಕರ ಸಂಖ್ಯೆಯಲ್ಲಿ ಕಡಿತಗೊಳಿಸುತ್ತಿರುವುದರಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿದೆ. ಪೋಷಕರು ಇಂಗ್ಲಿಷ್ ವ್ಯಾಮೋಹ ಬಿಟ್ಟು,ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಬೇಕಾಗಿದೆ. ಇದೇ ವರ್ಷ ಗಾಂಧಿ ಯುವಕ ಸಂಘದ ವತಿಯಿಂದ ಇದೇ ವರ್ಷ ಸರ್ವಧರ್ಮೀಯ ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.ಅದರ ಅಂಗವಾಗಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಕಂಡಕರೆ ಶಾಲೆಯ ಅಭಿವೃದ್ಧಿಗೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದೆಂದು ಗಾಂಧಿ ಯುವಕ ಸಂಘದ ಅಧ್ಯಕ್ಷರಾದ ಪತ್ರಕರ್ತ ಇಸ್ಮಾಯಿಲ್ ಕಂಡಕರೆ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಖ್ಯೋಪಾಧ್ಯಾಯ ಎಂ.ಪಿ ಧನುಪ್ರಕಾಶ್, ಶಾಲೆಗೆ 25 ಕುರ್ಚಿಗಳ ಅವಶ್ಯಕತೆ ಇತ್ತು. ಕಂಡಕರೆಯ ಗಾಂಧಿ ಯುವಕ ಸಂಘದ ಸದಸ್ಯರ ಬಳಿ ಕೇಳಿಕೊಂಡು ತಕ್ಷಣ ಸ್ಪಂದಿಸಿ, ಶಾಲೆಗೆ ಅತ್ಯುತ್ತಮ ಗುಣಮಟ್ಟದ 25 ಕುರ್ಚಿಗಳನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಶಾಲೆಗೆ ಬೇಕಾದ ಎಲ್ಲಾ ರೀತಿಯ ಅಭಿವೃದ್ಧಿ ಕೆಲಸಗಳಿಗೆ ಕೈ ಜೋಡಿಸಿದ್ದಾರೆ ಎಂದು ಭರವಸೆ ನೀಡಿದ್ದಾರೆ.
ಪೋಷಕರು ಕೂಡ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಬೇಕಾಗಿ ಮುಖ್ಯೋಪಾಧ್ಯಾಯರಾದ ಎ.ಪಿ ಧನುಪ್ರಕಾಶ್ ಅಭಿಪ್ರಾಯಪಟ್ಟರು.
ಕಂಡಕರೆ ಶಾಲೆಯಿಂದ ವರ್ಗಾವಣೆಗೊಂಡ ದೈಹಿಕ ಶಿಕ್ಷಕ ಹೆಚ್. ದಿನಕರ್ ಶೆಟ್ಟಿ ಹಾಗೂ ಸಹ ಶಿಕ್ಷಕಿಯಾದ ಟಿ.ಪಿ ಜನಿತ ಅವರಿಗೆ ಶಾಲೆಯ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಹಾಗೂ ಗಾಂಧಿ ಯುವಕ ಸಂಘದ ಉಪಾಧ್ಯಕ್ಷ ಸವಾದ್ ಉಸ್ಮಾನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಹಶಿಕ್ಷಕರಾದ ರತೀಶ್ ಟಿ.ಎನ್ ಕಾರ್ಯಕ್ರಮವನ್ನು ನಿರೂಪಿಸಿದರು.
ಗಾಂಧಿ ಯುವಕ ಸಂಘದ ಕಾರ್ಯದರ್ಶಿ ಸುಹೈಲ್ ಓ.ಎಸ್ ವತಿಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸಿಹಿ ತಿಂಡಿ ವಿತರಿಸಲಾಯಿತು.
ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಸಜೀನಾ ಈ.ಯು,ಆಶಾ ಕಾರ್ಯಕರ್ತೆ ಸುಮಿತ್ರ ಕಂಡಕರೆ, ಗಾಂಧಿ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಷರೀಫ್ ಪಿ.ಎಂ,ಉಪಾಧ್ಯಕ್ಷ ಇರ್ಷಾದ್ ಕೆ.ಎಂ, ಶಿಬಿಲ್ ಕೆ.ಜೆ, ಸದಸ್ಯಾದ ಕರೀಮ್ ಪಿ.ಎಂ ಹಾಗೂ ಶಿಕ್ಷಕ ವೃಂದದವರು, ಎಸ್.ಡಿ.ಎಂ.ಸಿ ಸದಸ್ಯರು ಇದ್ದರು.