ಮಡಿಕೇರಿ ಆ.7 : ದಡಾರ, ರುಬೆಲ್ಲಾ ಸೇರಿದಂತೆ ಹಲವು ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಿಸಲು ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಲಸಿಕಾಕರಣ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಲಸಿಕೆಯನ್ನು ಕಾಲ ಕಾಲಕ್ಕೆ ಪಡೆಯದ ಮತ್ತು ಬಿಟ್ಟುಹೋದ ಹಾಗೂ ಹೊರಗುಳಿದ 5 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ತಿಳಿಸಿದ್ದಾರೆ.
ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಕ್ಕಳ ಲಸಿಕಾ ವಿಭಾಗದಲ್ಲಿ ಇಂದ್ರಧನುಷ್ 5.0 ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊಡಗು ಜಿಲ್ಲೆಯ 207 ಕಡೆಗಳಲ್ಲಿ ಇಂದ್ರಧನುಷ್ ಲಸಿಕಾಕರಣ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಮಕ್ಕಳಿಗೆ ಬರುವ ದಡಾರ, ರುಬೆಲ್ಲಾ ಸೇರಿದಂತೆ ಹಲವು ರೋಗಗಳನ್ನು ತಡೆಯಲು ಇಂದ್ರಧನುಷ್ 5.0 ಸಹಕಾರಿಯಾಗಿದೆ ಎಂದರು.
ಇಂದ್ರಧನುಷ್ 5.0 ಅಭಿಯಾನದಲ್ಲಿ ಲಸಿಕೆ ಬಿಟ್ಟು ಹೋಗಿರುವ, ವಿಶೇಷವಾಗಿ ದಡಾರ-ರುಬೆಲ್ಲಾ ಲಸಿಕಾಕರಣ, ಪಿಸಿವಿ ಲಸಿಕಾಕರಣ ಮತ್ತು ಇತ್ತೀಚೆಗೆ 3 ನೇ ಡೋಸ್ ಆಗಿ ಸೇರ್ಪಡೆಗೊಳಿಸಲಾಗಿರುವ ಎಫ್‍ಎಲ್‍ಪಿವಿ ಲಸಿಕಾಕರಣದ ಪ್ರಗತಿಯನ್ನು ಹೆಚ್ಚಿಸುವ ಸಲುವಾಗಿ ಪರಿಣಾಮಕಾರಿ ಮಿಷನ್ ಇಂದ್ರಧನುಷ್ ಅಭಿಯಾನ 5.0 ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ನಿರ್ದೇಶನದಂತೆ ರಾಜ್ಯ ಸರ್ಕಾರವು ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮವನ್ನು ಮೂರು ಸುತ್ತುಗಳ ಮೂಲಕ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಆ.7 ರಿಂದ 12 ರವರೆಗೆ ಮೊದಲ ಸುತ್ತು, ಸೆಪ್ಟೆಂಬರ್, 11 ರಿಂದ 16 ರವರೆಗೆ 2ನೇ ಸುತ್ತು ಮತ್ತು ಅಕ್ಟೋಬರ್, 9 ರಿಂದ 14 ರವರೆಗೆ 3 ನೇ ಸುತ್ತಿನಲ್ಲಿ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳು, ಉಪ ಕೇಂದ್ರಗಳು, ಅಂಗನವಾಡಿ ಕೇಂದ್ರಗಳು ಮತ್ತು ಶಾಲೆಗಳಲ್ಲಿ ಪರಿಣಾಮಕಾರಿ ಇಂದ್ರಧನುಷ್ 5.0 ಲಸಿಕಾಕರಣ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದರು.
ಆರ್‍ಸಿಎಚ್ ಅಧಿಕಾರಿ ಡಾ.ಗೋಪಿನಾಥ್ ಕೊಡಗು ಜಿಲ್ಲೆಯಲ್ಲಿ ಇಂದ್ರಧನುಷ್ ಲಸಿಕಾಕರಣ ಸಂಬಂಧಿಸಿದಂತೆ 2 ವರ್ಷದೊಳಗಿನ 1,169 ಮಕ್ಕಳನ್ನು ಗುರುತಿಸಲಾಗಿದೆ. 2 ರಿಂದ 5 ವರ್ಷದೊಳಗಿನ 23 ಮಕ್ಕಳನ್ನು ಗುರುತಿಸಲಾಗಿದೆ. ಹಾಗೆಯೇ ಗರ್ಭಿಣೀಯರಲ್ಲಿ 278 ಮಂದಿಯನ್ನು ಗುರುತಿಸಲಾಗಿದ್ದು, ಲಸಿಕೆಯನ್ನು ನೀಡಿದ ಲಸಿಕಾಕರಣ ವಿವರವನ್ನು ಯು-ವಿನ್ ಪೋರ್ಟಲ್‍ನಲ್ಲಿ ದಾಖಲಿಸಿ ಇ-ಲಸಿಕಾ ಕರಣದ ಪ್ರಮಾಣಪತ್ರ ನೀಡಲಾಗುತ್ತದೆ ಎಂದರು.
ಇಂದ್ರಧನುಷ್ ಸರ್ಕಾರದ ಅತೀ ಮುಖ್ಯ ಕಾರ್ಯಕ್ರಮವಾಗಿದ್ದು, 7 ಮಾರಕ ರೋಗಗಳನ್ನು ತಡೆಯಲು ಈ ಲಸಿಕಾಕರಣ ಸಹಕಾರಿಯಾಗಲಿದೆ ಎಂದು ಡಾ.ಗೋಪಿನಾಥ್ ವಿವರಿಸಿದರು.
ದಡಾರ ಮತ್ತು ರುಬೆಲ್ಲಾವನ್ನು ನಿರ್ಮೂಲನೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ಲಸಿಕಾಕರಣಕ್ಕೆ ಬಿಟ್ಟುಹೋದ ಮಕ್ಕಳು ಮತ್ತು ಗರ್ಭಿಣೀಯರಿಗೆ ಇಂದ್ರಧನುಷ್ 5.0 ಲಸಿಕಾಕರಣವನ್ನು ಹಮ್ಮಿಕೊಳ್ಳಲಾಗಿದೆ. ಸಮುದಾಯದಿಂದ ರೋಗವನ್ನು ತಡೆಯಲು ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ಬಿಟ್ಟುಹೋದ ಮತ್ತು ಹೊರಗುಳಿದ 5 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣೀಯರಿಗೆ ಲಸಿಕಾಕರಣ ಕೊಡಿಸಬೇಕು ಎಂದು ಡಾ.ಗೋಪಿನಾಥ್ ಹೇಳಿದರು.
ಈಗಾಗಲೇ ಸರ್ವೇ ನಡೆಸಿರುವುದನ್ನು ಹೊರತುಪಡಿಸಿ ಲಸಿಕೆ ಬಿಟ್ಟು ಹೋಗಿದ್ದಲ್ಲಿ ಲಸಿಕೆ ಪಡೆಯಬಹುದಾಗಿದೆ ಎಂದು ಹೇಳಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ.ಕಳ್ಳಿಚಂಡ ಕಾರ್ಯಪ್ಪ ಮಾತನಾಡಿ, ಇಂದ್ರಧನುಷ್ ಅತೀ ಮುಖ್ಯವಾದ ಲಸಿಕಾ ಕಾರ್ಯಕ್ರಮವಾಗಿದೆ. 5 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರು ಇಂದ್ರಧನುಷ್ ಲಸಿಕೆ ಪಡೆಯಬೇಕು ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಂಜುಂಡಯ್ಯ ಮಾತನಾಡಿ, ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕೆಂಬ ಉದ್ದೇಶದಿಂದ ಇಂದ್ರಧನುಷ್ ಲಸಿಕಾಕರಣ ಹಮ್ಮಿಕೊಳ್ಳಲಾಗಿದೆ. ಲಸಿಕಾಕರಣ ಕಾರ್ಯಕ್ರಮ ಯಶಸ್ಸಿಗೆ ಕೈಜೋಡಿಸುವಂತೆ ಕೋರಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬಂತೆ ಮಕ್ಕಳ ಬೆಳವಣಿಗೆಗೆ ಚುಚ್ಚುಮದ್ದು ಅತ್ಯವಶ್ಯಕ ಎಂದರು.
ಮಕ್ಕಳ ಆರೋಗ್ಯ ಕಾಪಾಡುವುದು ಅತೀ ಮುಖ್ಯವಾಗಿದೆ. ಪೊಲಿಯೋ, ಧನುರ್‍ವಾಯು, ದಡಾರ, ರುಬೆಲ್ಲಾ ಹೀಗೆ ಹಲವು ರೋಗವನ್ನು ತಡೆಯಲು ಚುಚ್ಚುಮದ್ದು ಅವಶ್ಯಕ. ಮಕ್ಕಳ ಬೆಳೆವಣಿಗೆಗೆ ಲಸಿಕಾಕರಣ ಅತೀ ಮುಖ್ಯ ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ಇರುವ ತಾಯಿ ಕಾರ್ಡ್ ಪ್ರತೀಯೊಬ್ಬರು ಓದಬೇಕು. ಚುಚ್ಚುಮದ್ದು ನೀಡಿದ ನಂತರ ನಿಗಾವಹಿಸಬೇಕು. ಕಾಲ ಕಾಲಕ್ಕೆ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ದಿನಚರಿಯಲ್ಲಿ ಬರೆದಿಟ್ಟುಕೊಳ್ಳಬೇಕು ಎಂದು ಡಾ.ಪುರುಷೋತ್ತಮ ವಿವರಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾದ ಡಾ.ರೂಪೇಶ್ ಗೋಪಾಲ್, ಸ್ಥಾನಿಕ ವೈದ್ಯಾಧಿಕಾರಿ ಡಾ.ಸತೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಡಾ.ಎನ್.ಆನಂದ್, ಡಾ.ಸೋಮಶೇಖರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಂ.ಯು.ಚೇತನ್, ಮಕ್ಕಳ ವಿಭಾಗದ ತಜ್ಞ ವೈದ್ಯರಾದ ಡಾ.ಕುಶ್ವಂತ್ ಕೋಳಿಬೈಲು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರಾದ ಸೌಮ್ಯ ಪೊನ್ನಪ್ಪ, ಇತರರು ಇದ್ದರು. 5 ವರ್ಷದೊಳಗಿನ ಮಕ್ಕಳಿಗೆ ಇದೇ ಸಂದರ್ಭದಲ್ಲಿ ಇಂದ್ರಧನುಷ್ 5.0 ಲಸಿಕೆ ನೀಡಲಾಯಿತು.