ಕೂಡಿಗೆ/ಕುಶಾಲನಗರ ಆ. 27 : ಕುಶಾಲನಗರ ತಾಲ್ಲೂಕಿನ ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ
ಕೂಡಿಗೆ ಕ್ಲಸ್ಟರ್ ಸಂಪನ್ಮೂಲ ಕೇಂದ್ರದ ವತಿಯಿಂದ ಶನಿವಾರ ( ಆ.26 ರಂದು ) ಏರ್ಪಡಿಸಿದ್ದ ಶಿಕ್ಷಕರ ಸಮ್ಮಿಲನ ಕಾರ್ಯಕ್ರಮದಲ್ಲಿ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಲ್ಲಿ ನಿವೃತ್ತಗೊಂಡ ಶಿಕ್ಷಕರನ್ನು
ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು.
ಇದೇ ವೇಳೆ ವರ್ಗಾವಣೆಯಿಂದ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಂದ ಬೇರೆ ಶಾಲೆಗಳಿಗೆ ತೆರಳಿದ ಶಿಕ್ಷಕರಿಗೆ ಬೀಳ್ಕೊಟ್ಟು, ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಗೆ ಆಗಮಿಸಿದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಇಂತಹ ಕಾರ್ಯಕ್ರಮವು
ಶಿಕ್ಷಕರಲ್ಲಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದರೊಂದಿಗೆ ಶೈಕ್ಷಣಿಕ ಚಿಂತನೆಗೆ ಕ್ರಿಯಾಶೀಲ ಮತ್ತು ಪ್ರೇರೇಪಣೆ ನೀಡುತ್ತದೆ.
ಮುಂದಿನ ದಿನಗಳಲ್ಲಿ ಕೂಡ ಇನ್ನಷ್ಟು ಶೈಕ್ಷಣಿಕ ಚಟುವಟಿಕೆಗಳನ್ನು ಸಂಘಟಿಸುವ ಮೂಲಕ ಮಕ್ಕಳ ಕಲಿಕೆಗೆ ಪ್ರೇರೇಪಣೆ ನೀಡಲು ಶ್ರಮಿಸೋಣ ಎಂದರು. ಶಿಕ್ಷಕರಾದ ನಾವು ಮಕ್ಕಳಲ್ಲಿ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಅವರಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಪ್ರಶ್ನಿಸುವ ಮನೋಭಾವ ಬೆಳೆಸಬೇಕು ಎಂದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್.ಪಲ್ಲೇದ್ ಮಾತನಾಡಿ, ಇಂತಹ ಶೈಕ್ಷಣಿಕ ಕಾರ್ಯಕ್ರಮಗಳು ಶಿಕ್ಷಕರ ವೃತ್ತಿಪರತೆಯನ್ನು ವೃದ್ಧಿಸಲು ಸಹಕಾರಿಯಾಗಿವೆ ಎಂದರು.
ಶಿಕ್ಷಣ ಇಲಾಖೆಯ ವತಿಯಿಂದ ಕೂಡಿಗೆಯಲ್ಲಿ ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಮಕ್ಕಳ ರಾಷ್ಟ್ರೀಯ ಹಾಕಿ ಟೂರ್ನಿಗೆ ಎಲ್ಲಾ ಶಿಕ್ಷಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಆಶಯ ನುಡಿಗಳನ್ನಾಡಿದ ಚಿತ್ರಕಲಾ ಸಂಪನ್ಮೂಲ ಶಿಕ್ಷಕ ಉ.ರಾ.ನಾಗೇಶ್, ಸಮಾಜದಲ್ಲಿ ಶ್ರೇಷ್ಠ ಹುದ್ದೆ ಎನಿಸಿರುವ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಾವುಗಳು ವೃತ್ತಿಪರತೆ ಮೆರೆಯುವ ಮೂಲಕ ಮಕ್ಕಳಲ್ಲಿ ಹೊಸ ಹೊಸ ಸಂಗತಿಗಳನ್ನು ಕಲಿಸುವ ಮೂಲಕ ಅವರನ್ನು ಭವಿಷ್ಯದ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಎ.ಯೋಗೇಶ್ ಮಾತನಾಡಿ, ಕ್ಲಸ್ಟರ್ ಕೇಂದ್ರದ ಮೂಲಕ ಇಂತಹ ಕಾರ್ಯಕ್ರಮದಿಂದ
ಶಿಕ್ಷಕರ ಸೇವಾ ಕಾರ್ಯವನ್ನು ಗೌರವಿಸುವ ಮೂಲಕ ಹೊಸತನದೊಂದಿಗೆ ಶೈಕ್ಷಣಿಕ ಚಿಂತನೆಗಳ ಕುರಿತು ಮೆಲುಕು ಹಾಕಿ ಮುಂದಿನ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಸಂಘಟಕರೂ ಆದ ಕೂಡಿಗೆ ಸಿ ಆರ್ ಪಿ ಕೆ.ಶಾಂತಕುಮಾರ್, ಇಂತಹ ಶೈಕ್ಷಣಿಕ ಕಾರ್ಯಕ್ರಮಗಳು ಶಿಕ್ಷಕರ ಪುನಶ್ಚೇತನಕ್ಕೆ ಕಾರಣವಾಗಿವೆ ಎಂದರು. ಕುಶಾಲನಗರ ಸಿ ಆರ್ ಪಿ ಎಸ್.ವಿ. ಸಂತೋಷ್ ಕುಮಾರ್ , ಶೈಕ್ಷಣಿಕ ಸವಾಲುಗಳು ಹಾಗೂ ಶಿಕ್ಷಣದ ಮಾಹಿತಿ ಹಕ್ಕು ಕುರಿತು ಮಾಹಿತಿ ನೀಡಿದರು.
::: ನಿವೃತ್ತ ಶಿಕ್ಷಕರಿಗೆ ಸನ್ಮಾನ :::
ನಿವೃತ್ತಗೊಂಡ ಕೂಡಿಗೆ ಸದ್ಗುರು ಅಪ್ಪಯ್ಯಸ್ವಾಮಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಸಿ.ಎಂ.ಸುಲೋಚನ, ಚಿಕ್ಕತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಚ್.ಬಿ.ಗೌರಮ್ಮ ಹಾಗೂ ವರ್ಗಾವಣೆಗೊಂಡ ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯ
ದೈಹಿಕ ಶಿಕ್ಷಣ ಶಿಕ್ಷಕ ನೀಲಪ್ಪ ಮಡಿವಾಳ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್, ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳಾದ ಟಿ.ವಿ.ಶೈಲಾ, ಎಚ್.ಆರ್.ರತ್ನಮ್ಮ,
ಸಿ ಆರ್ ಪಿ ಪ್ರೇಮ, ವಿವಿಧ ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.
ಶಿಕ್ಷಕಿ ಕೆ.ಗಾಯತ್ರಿ ನಿರ್ವಹಿಸಿದರು. ಇದೇ ವೇಳೆ ಶಿಕ್ಷಕಿ ಎಸ್.ಎಸ್.ಉಮಾದೇವಿ ಕ್ಲಸ್ಟರ್ ಕೇಂದ್ರಕ್ಕೆ ಗೋಡೆ ಗಡಿಯಾರವನ್ನು ಕೊಡುಗೆಯಾಗಿ ನೀಡಿದರು.