ಸೋಮವಾರಪೇಟೆ ಸೆ.5 : ಬುದ್ಧ, ಬಸವ, ಅಂಬೇಡ್ಕರ್ ಕನಸಿನ ಸಮಾಜ ನಿರ್ಮಾಣವಾಗಬೇಕು ಎಂದು ಚಿತ್ರದುರ್ಗ ಬೃಹನ್ಮಠದ ಉಸ್ತುವಾರಿ ಪೀಠಾಧ್ಯಕ್ಷರಾದ ಶ್ರೀ ಬಸವಪ್ರಭು ಸ್ವಮೀಜಿ ಆಶಯ ವ್ಯಕ್ತಪಡಿಸಿದರು.
ಶ್ರಿ ಜಗದ್ಗುರು ಮುರುಘ ರಾಜೇಂದ್ರ ಎಸ್ಟೇಟ್ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಬೇಳೂರು ಬಸವನ ಹಳ್ಳಿ ಮತ್ತು ಕುಸುಬೂರು ಗ್ರಾಮದ ವತಿಯಿಂದ ಬೇಳೂರು ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಲಿಂಗೈಕ್ಯ ಶ್ರೀ ಜಯಾನಂದ ಸ್ವಾಮೀಜಿ ಸಂಸ್ಮರಣೋತ್ಸವ ಹಾಗೂ ಗದ್ದುಗೆ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಶಾಂತಿ, ನೆಮ್ಮದಿಯ ಬದುಕಿನ ಜಾತ್ಯಾತೀತ ಸಮಾಜ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವಂಥ ಸಮಾಜದ ಕಲ್ಪನೆ, ಕನಸು ಕಂಡಿದ್ದರು ಅವರ ಕನಸು ಸಾಕಾರ ಗೊಳ್ಳಬೇಕು ಎಂದರು.
ಜಯಾನಂದ ಸ್ವಾಮೀಜಿ ಸರಳ ವ್ಯಕ್ತಿತ್ವದಿಂದ ಜನಮಾನಸದಲ್ಲಿ ಉಳಿಯುವಂತಾಗಿದೆ, ಅವರ ಸ್ಮರಣೆ ಅಗತ್ಯವೆಂದರು.
ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಈ ಸಮಾಜಕ್ಕೆ ಮಠಮಾನ್ಯಗಳ ಕೊಡುಗೆ ಅಪಾರವಾದದ್ದು, ಶಿಕ್ಷಣ, ದಾಸೋಹಗಳ ಮೂಲಕ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಶೀಮಂತ ಗೊಳಿಸಿದ್ದಾರೆ ಎಂದು ಬಣ್ಣಿಸಿದರು.
ಕೊಡಗಿನ ಮಠಗಳ ಅಭಿವೃದ್ಧಿಗೆ ಸರಕಾರ ಹಾಗೂ ವಯುಕ್ತಿಕವಾಗಿಯೂ ಸಹಕರಿಸುವುದಾಗಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾವಂದೂರು ಮಠದ ಶ್ರೀ ಮೊಕ್ಷಪತಿ ಸ್ವಾಮೀಜಿ ಮಾತನಾಡಿ, ಬೇಳೂರು ಮಠದ ಅಂದಿನ ಸ್ವಾಮೀಜಿ ಗಳಾಗಿದ್ದ ಜಯಾನಂದ ಸ್ವಾಮೀಜಿ ಶ್ರಮಜೀವಿಗಳು ಕಷ್ಟಪಟ್ಟು ಮಠದ ಆಸ್ತಿಯನ್ನು ಉಳಿಸಿ ಬೆಳೆಸಲು ಸಾಕಷ್ಟು ಕಷ್ಟಪಟ್ಟಿದ್ದಾರೆ ಎಂದರು. ಸರಳ ವ್ಯಕ್ತಿತ್ವದವರು ತಾವೇ ಸ್ವತಃ ಅಡುಗೆ ಮಾಡಿ ಬಂದ ಭಕ್ತರಿಗೆ ಉಣಬಡಿಸಿ ತೃಪ್ತಿ ಪಡುತಿದ್ದರು.
ಕಾರ್ಯಕ್ರಮದಲ್ಲಿ ಸೋಮವಾರಪೇಟೆ ವಿರಕ್ತ ಮಠದ ಪ್ರಭುಲಿಂಗ ಸ್ವಾಮೀಜಿ, ಚಿತ್ರದುರ್ಗ ಬೃಹನ್ಮಠದ ಕಿರಿಯ ಶ್ರೀಗಳಾದ ಬಸವಾದಿತ್ಯ ದೇವರು, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಪ್ಪ, ಗ್ರಾಮದ ವೀರಶೈವ ಲಿಂಗಾಯತ ಸಂಘಟನೆಯ ಅಧ್ಯಕ್ಷ ಬಿ.ಎನ್.ಬಸವರಾಜು ಉಪಸ್ಥಿತರಿದ್ದರು.
ಈ ಸಂದರ್ಭ ಮಠದ ಹಿರಿಯ ಭಕ್ತರಾದ ಜಿ.ಎಸ್.ಪ್ರಭುದೇವ,ಶ್ರೀಕಂಠ, ಭೀಮಯ್ನೋರು ಹಾಗೂ ಕೆ.ಜಿ.ಸುರೇಶ್ ಅವರನ್ನು ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಕ ಜೆ.ಸಿ.ಶೇಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಚಂದ್ರಕಲಾ ಹಾಗು ಕೋಮಲ ಪ್ರಾರ್ಥಿಸಿದರು. ಮಠದ ವ್ಯವಸ್ಥಾಪಕ ಶಶಿಧರ್ ವಂದಿಸಿದರು.