ಮಹದೇಶ್ವರ ಬೆಟ್ಟ ಕರ್ನಾಟಕದ ದಕ್ಷಿಣ ತುದಿಯ ಗಡಿಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಮುಖ್ಯ ಶ್ರದ್ಧಾಭಕ್ತಿ ಕೇಂದ್ರ. ದೇವಸ್ಥಾನವು ಬೆಟ್ಟಗಳಿಂದ ಸುತ್ತುವರಿದಿರುವ ಕಾರಣ ಮಹದೇಶ್ವರ ಬೆಟ್ಟವೆಂದು ಕರೆಯಲಾಗುತ್ತದೆ. ಪಶ್ಚಿಮಘಟ್ಟಗಳ ಭಾಗದಿಂದ ಆರಂಭವಾಗಿ ಪೂರ್ವಘಟ್ಟಗಳ ಕಡೆಗೆ ಹರಡಿಕೊಂಡಿರುವ ಬೆಟ್ಟ ಸಾಲುಗಳಲ್ಲಿ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಹಬ್ಬಿರುವ ಮಹದೇಶ್ವರ ಬೆಟ್ಟ ದಖನ್ ಪ್ರಸ್ಥಭೂಮಿಯ ಬಹುಮುಖ್ಯ ಭಾಗವೂ ಕೂಡ.
ಮೈಸೂರಿನಿಂದ 150 ಕಿ ಮೀ ಹಾಗೂ ರಾಜಧಾನಿ ಬೆಂಗಳೂರಿನಿಂದ 210 ಕಿ ಮೀ ದೂರವಿದೆ ಈ ಮಹದೇಶ್ವರ ಬೆಟ್ಟ. ಹಾಲುಮತ ಸಮುದಾಯಕ್ಕೆ ಮಹದೇಶ್ವರ ದೇವಸ್ಥಾನ ಮುಖ್ಯವಾದ ಭಕ್ತಿಕೇಂದ್ರವಾಗಿದೆ ಹಾಗೂ ಶಿವನ ಆರಾಧಾನಾ ಕೇಂದ್ರವೂ ಕೂಡ ಆಗಿದೆ. ಪ್ರತೀ ವರ್ಷ ಕರ್ನಾಟಕ ಹಾಗೂ ತಮಿಳುನಾಡಿನ ಲಕ್ಷಾಂತರ ಭಕ್ತರನ್ನು ಮಹದೇಶ್ವರ ಬೆಟ್ಟ ಸೆಳೆಯುತ್ತದೆ. ದೇವಸ್ಥಾನ ಪ್ರಾಂಗಣ ಹಾಗೂ ಸಮುಚ್ಚಯಗಳು ಸೇರಿ ಸುಮಾರು 150 ಎಕರೆಗಳಷ್ಟು ಪ್ರದೇಶ ವ್ಯಾಪಿಸಿಕೊಂಡಿದೆ. ಅದರ ಜೊತೆಗೆ ತಾಳು ಬೆಟ್ಟ, ಹಳೆಯೂರು, ಇಂಡಿಗನಾಥ ಗ್ರಾಮಗಳಲ್ಲಿ ದೇವಸ್ಥಾನಕ್ಕೆ ಸೇರಿದ ಜಾಗಗಳಿವೆ. ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತರದಲ್ಲಿರುವ ಮಹದೇಶ್ವರ ಬೆಟ್ಟ ದಟ್ಟವಾದ ಕಾಡುಗಳಿಂದ ಸುತ್ತುವರಿದಿದೆ, ಹಾಗಿದ್ದಾಗ್ಯೂ ಪ್ರತೀ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಸೆಳೆಯುತ್ತಿರುವುದು ವಿಶೇಷವಾಗಿದೆ.
ಶ್ರೀ ಮಲೈ ಮಹದೇಶ್ವರಸ್ವಾಮಿ ಬೆಟ್ಟದಲ್ಲಿ ತಮ್ಮಡಿಗಳು ಇಲ್ಲಿನ ಪೂಜಾರಿಗಳಾಗಿರುವರು ಹಾಗೂ ಇಲ್ಲಿನ ಎಣ್ಣೆಮಜ್ಜನ ಸೇವೆ ತುಂಬಾ ಪ್ರಮುಖವಾದದ್ದು. ಈ ಎಣ್ಣೆಮಜ್ಜನ ಸೇವೆಯನ್ನು ಹಿಂದೆ ಉಪ್ಪಾರ ಶೆಟ್ಟರಾದ ಶ್ರೀ ಸರಗೂರು ಮೂಗಪ್ಪನವರು ಮಾಡುತ್ತಿದ್ದರು. ಮಹದೇಶ್ವರ ಬೆಟ್ಟದ ಈಗಿನ ದೇವಸ್ಥಾನವನ್ನು ಹಾಲುಮತಸ್ಥ ಕುರುಬಗೌಡರಾದ ಆಲಾಂಬಾಡಿ ಪಾಳೇಗಾರರಾದಜುಂಜೇ ಗೌಡ ಶ್ರೀಮಂತ ಕುರುಬ ಗೌಡರು ಕಟ್ಟಿಸಿದ್ದಾರೆ, ಮಹದೇಶ್ವರರು ಸುಮಾರು ಹದಿನೈದನೇ ಶತಮಾನದಲ್ಲಿ ಬಾಳಿದ್ದ ಸಂತ ಶರಣರಾಗಿದ್ದು ಅವರನ್ನು ಶಿವ ಸ್ವರೂಪಿ ಹಾಗೂ ಶಿವನ ಅವತಾರವೆಂದೇ ನಂಬಲಾಗಿದೆ.
ಸುಮಾರು ಆರುನೂರು ವರ್ಷಗಳ ಹಿಂದೆ ಮಹದೇಶ್ವರರು ಈ ಸ್ಥಳಕ್ಕೆ ತಪಸ್ಸು ಮಾಡಲು ಬಂದರು ಹಾಗೂ ಈಗಲೂ ದೇವಸ್ಥಾನದ ಗರ್ಭಗುಡಿಯಲ್ಲಿ ಲಿಂಗರೂಪಿಯಾಗಿದ್ದುಕೊಂಡೇ ತಮ್ಮ ತಪಸ್ಸನ್ನು ಮುಂದುವರೆಸಿದ್ದಾರೆ ಎನ್ನುವುದು ಭಕ್ತರ ನಂಬಿಕೆ. ದೇವಸ್ಥಾನದ ಗರ್ಭಗುಡಿಯೊಳಗಿನ ಲಿಂಗ ಯಾರಿಂದಲೂ ರಚನೆಯಾಗಿದ್ದಲ್ಲ, ಬದಲಾಗಿ ಸ್ವಯಂಭು ಅಥವಾ ತಾನಾಗೇ ಉಧ್ಭವವಾಗಿರುವಂತಹುದು.
ಮಲೆ ಮಹದೇಶ್ವರರು ಹುಲಿಯನ್ನೇ ತಮ್ಮ ವಾಹನವನ್ನಾಗಿ ಮಾಡಿಕೊಂಡು ಅದರ ಮೇಲೆ ಕುಳಿತು ಬೆಟ್ಟಗಳನ್ನು ಸುತ್ತುತ್ತ ಆರ್ತ ಭಕ್ತರಿಗೆ ದಾರಿಯಾಗಿ ಸಂತರು ಶರಣರುಗಳನ್ನು ರಕ್ಷಿಸುತ್ತಿದ್ದ ವಿಚಾರಗಳು ಇತಿಹಾಸ ಹಾಗೂ ಜಾನಪದ ಗಾಯನಗಳಿಂದ ತಿಳಿದುಬರುತ್ತದೆ. ಆದರಿಂದ ಮಹದೇಶ್ವರರನ್ನು ಹುಲಿವಾಹನ ಮಹದೇಶ್ವರ ಎಂದೂ ಭಕ್ತವರ್ಗ ಸಂಭೋದಿಸುವುದುಂಟು. ಮಹದೇಶ್ವರ ಬೆಟ್ಟದಲ್ಲಿ ಈಗಲೂ ಹುಲಿವಾಹನ ಮಹದೇಶ್ವರ ಮೆರವಣಿಗೆ ಮೂರ್ತಿಯಿದೆ.
ವಿಶೇಷ ಸಂದರ್ಭ ಗಳಲ್ಲಿ ಹುಲಿವಾಹನ ಅಲಂಕಾರವಿರುತ್ತದೆ. ಕನ್ನಡದ ಜಾನಪದ ಲೋಕದಲ್ಲಿ ಮಹದೇಶ್ವರ ಭಕ್ತಿಗೀತೆಗಳಿಗೆ ವಿಶಿಷ್ಟ ಸ್ಥಾನವಿದೆ, ಜಾನಪದ ಕಲಾವಿದರು ಅವುಗಳನ್ನು ಮಹದೇಶ್ವರ ಗೀತೆಗಳೆಂತಲೇ ಕರೆಯುತ್ತಾರೆ. ಹಾಗಾಗಿ ಮಹದೇಶ್ವರ ಭಕ್ತರಿಂದ ಕನ್ನಡ ಜಾನಪದ ಲೋಕಕ್ಕೆ ವಿಶಿಷ್ಟ ಕೊಡುಗೆಯೊಂದು ದೊರಕಿದಂತಾಗಿದೆ. ಎಲ್ಲ ಜಾನಪದ ಗೀತೆಯ ಪೈಕಿ “ಚೆಲ್ಲಿದರು ಮಲ್ಲಿಗೆಯಾ…” ಬಹಳ ಪ್ರಸಿದ್ಧಿ ಪಡೆದುಕೊಂಡಿದೆ.


















