ಮಡಿಕೇರಿ ಫೆ.21 NEWS DESK : ಕೊಡಗಿನ ಕೊಡವ ಸಿನಿಮಾ ರಂಗಕ್ಕೆ 52 ವರ್ಷ ತುಂಬಿದೆ. ಪ್ರಕೃತಿಯ ಸೊಬಗಿಗೆ ಮನಸೋತು ಎಷ್ಟೋ ಸಿನಿಮಾಗಳು ಕೊಡಗಿನಲ್ಲಿ ಚಿತ್ರೀಕರಣಗೊಂಡಿವೆ, ಇನ್ನೂ ಚಿತ್ರೀಕರಣಗೊಳ್ಳುತ್ತಲೇ ಇವೆ. ಕೊಡಗಿನಲ್ಲೂ ಸಿನಿ ಪ್ರಿಯರು, ಉತ್ತಮ ಕಲಾವಿದರುಗಳು ಇದ್ದಾರೆ, ಕನ್ನಡ, ಹಿಂದಿ ತಮಿಳು, ತೆಲುಗು, ಮಲಯಾಳಂ ಹೀಗೆ ಹಲವು ಭಾಷೆಗಳ ಸಿನಿಮಾಗಳನ್ನು ಟೆಂಟ್ ಪರದೆಯ ಮೇಲೆ ನೋಡುತ್ತಿದ್ದ ಕಾಲಘಟ್ಟದಲ್ಲಿ 1972 ರಲ್ಲಿ ಕೊಡಗಿನಲ್ಲೂ ಮೊಟ್ಟಮೊದಲ ಬಾರಿಗೆ ಚಿತ್ರೀಕರಣಗೊಂಡು ಬೆಳಕಿಗೆ ಬಂದ ಕೊಡವ ಸಿನಿಮಾ “ನಾಡ ಮಣ್ಣ್ ನಾಡ ಕೂಳ್”.
ಕೊಡಗಿನ ಜನರು ಕೂಡ ಸಿನಿಮಾ ನಿರ್ಮಿಸಬಹುದು ಎಂದು ತೋರಿಸಿಕೊಟ್ಟ ಸುಸಂದರ್ಭ ಅದು. ಕೊಡವ ಭಾಷಾ ಚಿತ್ರವೊಂದಕ್ಕೆ ಅಭೂತಪೂರ್ವ ಪ್ರೋತ್ಸಾಹ ನೀಡಿದ ಕಾಲವೂ ಅದಾಗಿತ್ತು. ನಂತರದ ದಿನಗಳಲ್ಲಿ ಮತ್ತಷ್ಟು ಕೊಡವ ಸಿನಿಮಾಗಳು ಬರಲಾರಂಭಿಸಿದವು. ಅಧಿಕೃವಾಗಿ ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಪಡೆದ ಸಿನಿಮಾಗಳಾದ ಮಹಾವೀರ ಅಚ್ಚುನಾಯಕ, ಮಂದಾರಪೂ, ಪೊಣ್ಣ್ರ ಮನಸ್ಸ್, ನಾಬಯಂದಪೂ, ನಾ ಪುಟ್ಟ್ನ ಮಣ್ಣ್, ಜಡಿಮಳೆ, ಬಾಳ್ಪೊಲಂದತ್, ಪೊನ್ನಮ್ಮ, ತಳಂಗ್ನೀರ್, ಬಾಕೆಮನೆ, ಕ್ಟ್ಟ್ತ ಪ್ರೀತಿ, ನಿರೀಕ್ಷೆ, ಪೆರ್ಚೋಳಿಯ, ಕಣತರೆಕಾಂಬುಲೆ, ಮೂಗ, ಮಕ್ಕಡ ಮನಸ್ಸ್, ಕೊಡಗ್ರ ಸಿಪಾಯಿ, ಬೆಂದುಕ, ನಾಡ ಪೆದ ಆಶಾ, ನೆಲ್ಚಿಬೊಳಿ, ತೇಂಬಾಡ್, ದೇವಡಕಾಡ್, ಪೊಮ್ಮಾಲೆ ಕೊಡಗ್, ಕೌಡಿಕಳಿ, ಬೇರ್, 2023 ಡಿಸೆಂಬರ್ ಹೀಗೆ ಸಿನಿಮಾಗಳು ಒಂದೊಂದಾಗಿ ಬರಲು ಪ್ರಾರಂಭಿಸಿದವು.
ಆದರೆ ಕಳೆದ 52 ವರ್ಷಗಳಲ್ಲಿ ಕನಿಷ್ಠ 50 ಕೊಡವ ಸಿನಿಮಾಗಳು ಬೆಳ್ಳಿ ತೆರೆಗೆ ಬಾರದೆ ಇರುವುದು ಕೊಡಗಿನಲ್ಲಿರುವ ಸಿನಿ ಪ್ರಿಯರ ಕೊರತೆಯೋ..? ಅಥವಾ ಸಿನಿಮಾ ಮಾಡುವವರ ಕೊರತೆಯೋ..? ಎಂಬ ಪ್ರಶ್ನೆ ಸಿನಿ ಮಂದಿಯನ್ನು ಕಾಡಿದೆ.
ಪ್ರತಿಯೊಂದು ಸಿನಿಮಾದಲ್ಲೂ ಕೊಡಗಿನ ಭಾಷೆ, ಸಂಸ್ಕೃತಿ, ಪದ್ಧತಿ, ಪರಂಪರೆಗಳನ್ನು ಸಿನಿಮಾದ ಮೂಲಕ ಈಗಿನ ಪೀಳಿಗೆಗೆ ತೋರಿಸಿ ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಸಿನಿಮಾಗಳನ್ನು ತಯಾರಿ ಮಾಡಿ ಪ್ರದರ್ಶನ ಮಾಡುತ್ತಿದ್ದಾರೆ. ಕೊಡವ ಸಿನಿಮಾ ತಯಾರಕರಿಗೆ ಕೊಡಗಿನಲ್ಲಿ ಪ್ರೋತ್ಸಾಹ ತುಂಬಾ ಕಡಿಮೆ, ಅದರ ಜೊತೆಗೆ ಆದಾಯವು ಇರುವುದಿಲ್ಲ. ಕೊಡಗಿನಲ್ಲಿ ಸಿನಿಮಾ ಪ್ರದರ್ಶನ ಮಾಡಲು ಸೂಕ್ತ ಥಿಯೇಟರ್ ಗಳು ಇಲ್ಲ. ಮಡಿಕೇರಿ, ವಿರಾಜಪೇಟೆ, ಗೋಣಿಕೊಪ್ಪ ಮುಂತಾದ ಕಡೆಗಳಲ್ಲಿ ಇದ್ದ ಚಿತ್ರಮಂದಿರಗಳು ಸಿನಿಮಾ ನೋಡುಗರ ಕೊರತೆಯಿಂದ ಇನ್ನಿಲ್ಲದಂತಾಗಿದೆ.
ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ಪ್ರಚಾರ ಹೊಂದಿರುವ ಕೊಡಗಿನ ಜಿಲ್ಲಾ ಕೇಂದ್ರ ಬಿಂದು ಮಡಿಕೇರಿ ನಗರದಲ್ಲಿ ಚಿತ್ರ ಮಂದಿರ ಇಲ್ಲದಿರುವುದು ವಿಪರ್ಯಾಸವೇ ಸರಿ. ಹಾಗಾಗಿ ಕೊಡವ ಸಿನಿಮಾಗಳನ್ನು ಜಿಲ್ಲೆಯ ವಿವಿಧ ಕೊಡವ ಸಮಾಜಗಳಲ್ಲಿ ಅಂದರೆ ಮದುವೆ ಮಂಟಪಗಳಲ್ಲಿ ಪ್ರದರ್ಶನ ಮಾಡುವ ಅನಿವಾರ್ಯತೆ ಎದುರಾಗಿದೆ.
ಸಿನಿಮಾ ಮಾಡುವುದು ಎಂದರೆ ಖರ್ಚು ವೆಚ್ಚ ಜಾಸ್ತಿಯೇ ಆಗುತ್ತದೆ. ಅದರಲ್ಲೂ ಸೆನ್ಸಾರ್ ಮಾಡಿಸುವುದು ಬಹಳ ವೆಚ್ಚದ ಕೆಲಸ. ಅದಕ್ಕೆ ತಕ್ಕಂತೆ ಕೊಡವ ಸಿನಿಮಾ ತಯಾರಿಕೆಯಲ್ಲಿ ಪ್ರತಿಫಲ ಸಿಗುವುದೇ ಕಷ್ಟ. ಇಂತಹ ಪರಿಸ್ಥಿತಿಯಲ್ಲೂ ಕೊಡಗ್ರ ಸಿಪಾಯಿ, ನಾಡಪೆದ ಆಶಾ, ತಳಂಗ್ ನೀರ್, ಮೂಗ, ಬೇರ್, ಪೊಮ್ಮಲೆ ಕೊಡಗ್, ಬಾಕೆಮನೆ ಯಂತಹ ಹಲವು ಚಿತ್ರಗಳು ಕೊಡಗು ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದುಕೊಂಡು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಬೆಂಗಳೂರಿನಲ್ಲಿ ನೆಲೆಸಿದ್ದರೂ ಕೊಡಗಿನ ಪ್ರಕೃತಿ ಸೌಂದರ್ಯ, ಕೊಡವ ಜನಾಂಗದ ಆಚಾರ, ವಿಚಾರದ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿದ್ದ ಚಿತ್ರ ನಿರ್ದೇಶಕ ಗೋಪಿ ಪೀಣ್ಯ ಅವರು “ತಳಂಗ್ ನೀರ್” ಸಿನಿಮಾವನ್ನು ಪ್ರೊಜೆಕ್ಟರ್ ಮೂಲಕ ಕಲಾಕ್ಷೇತ್ರ, ಶಾಲೆಗಳು ಮತ್ತು ಕೊಡವ ಸಮಾಜಗಳಲ್ಲಿ ಪ್ರದರ್ಶನವನ್ನು ನೀಡಿ ಜನರಿಗೆ ಕೊಡವ ಸಿನಿಮಾಗಳನ್ನು ಹೀಗೂ ತಲುಪಿಸಬಹುದೆಂದು ಜಾಗೃತಿ ಮೂಡಿಸಿದರು.
ಕೊಡಗಿನ ಸಂಸ್ಕೃತಿ ಅಂತರರಾಷ್ಟ್ರೀಯ ಮಟ್ಟಿಕ್ಕೆ ಕೊಡವ ಸಿನಿಮಾಗಳ ಮೂಲಕ ತಲುಪಿದೆ. ವರ್ಷಕ್ಕೆ ಒಂದರಂತೆ ಕೊಡವ ಸಿನಿಮಾ ಮಾಡಿ ಕೊಡಗು ಮಾತ್ರವಲ್ಲದೆ ಕರ್ನಾಟಕದಲ್ಲಿಯೂ ಪ್ರದರ್ಶನ ಮಾಡಲು ಪ್ರಾರಂಭಿಸಿದ್ದಾರೆ. ಕೆಲವು ಕೊಡಗಿನವರಲ್ಲದ ಸಿನಿಮಾ ನಿರ್ಮಾಪಕರು ಕೊಡಗಿನಲ್ಲಿ ಪ್ರದರ್ಶನ ನಡೆಸದೇ ಕೊಡಗಿನ ಆಚಾರ, ವಿಚಾರಗಳ ಬಗ್ಗೆ ಮಾಹಿತಿ ಇಲ್ಲದೆ ಕೊಡವ ಭಾಷೆಯನ್ನು ಮಾತ್ರ ಬಳಕೆ ಮಾಡುವ ಮೂಲಕ ಕೊಡಗಿನ ಜನತೆಗೆ ನೋವುಂಟು ಮಾಡಿದ್ದಾರೆ. ಇದು ಬೇಸರದ ಬೆಳವಣಿಗೆಯಾಗಿದೆ, ಕೊಡಗು ಜಿಲ್ಲೆಯ ಸ್ಥಳೀಯರಿಗೆ ಮೊದಲ ಅವಕಾಶ ಕಲ್ಪಿಸಬೇಕೆಂದು ನಾವು ಭಾವಿಸುತ್ತೇವೆ.
ಯಾವುದೇ ದೇಶ, ರಾಜ್ಯ, ಜಿಲ್ಲೆಯಾಗಲಿ, ಅಲ್ಲಿನ ಸಂಸ್ಕೃತಿ, ಪದ್ಧತಿ, ಭಾಷೆ, ಪರಂಪರೆ ಬೆಳೆಯಬೇಕು ಎಂದರೆ ಅದು ಬೆಳ್ಳಿ ಪರದೆ ಮತ್ತು ಸಾಹಿತ್ಯದ ಮೂಲಕ ಮಾತ್ರ ಸಾಧ್ಯ. ಏಕೆಂದರೆ ಕೊಡಗಿನ ಸಂಸ್ಕೃತಿ ವಿಶ್ವದಲ್ಲೇ ವಿಶಿಷ್ಟವಾದ ಸಂಸ್ಕೃತಿಯ ಭಂಡಾರವಾಗಿದ್ದು, ಇದು ಪ್ರತಿಬಿಂಬಿಸಲ್ಪಡುತ್ತಿದೆ.
ಸಿನಿಮಾ ಮಾಡುವವರಿಗೆ ಪ್ರೋತ್ಸಾಹ ಮುಖ್ಯ, ಇದರಿಂದ ಹೊಸ ಕಲಾವಿದರು ಹುಟ್ಟಿಕೊಳ್ಳುತ್ತಾರೆ ಹಾಗೂ ವಿಭಿನ್ನ ಕಥೆಗಳು ಪರದೆಯ ಮೂಲಕ ಹೊರ ಬರುತ್ತವೆ. ಇದರ ಜೊತೆಗೆ ಕೊಡಗಿನ ಕಷ್ಟ-ನಷ್ಟಗಳ ಅರಿವು ಮೂಡುತ್ತದೆ.
ನ ನಿರ್ದೇಶಕರಾದ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಹಾಗೂ ಯಶೋಧ ಪ್ರಕಾಶ್ ದಂಪತಿ ಇದುವರೆಗೆ ಐದು ಕೊಡವ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇದು ಇವರ ಹೆಗ್ಗಳಿಕೆಯಾಗಿದೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಮುಂದೆ ಬಂದು ಹೆಚ್ಚಿನ ಕೊಡವ ಸಿನಿಮಾಗಳನ್ನು ನಿರ್ಮಿಸುವಂತಾಗಲಿ ಎಂದು ಶುಭ ಹಾರೈಸುತ್ತೇನೆ.
(ಲೇಖನ : ಬೊಳ್ಳಜಿರ ಬಿ. ಅಯ್ಯಪ್ಪ 9880778047)










