ಕುಶಾಲನಗರ ಜೂ.12 NEWS DESK : ಕುಶಾಲನಗರ ಹಾಗೂ ಹಾರಂಗಿ ರಸ್ತೆಯಲ್ಲಿ ವಾಹನಗಳ ವೇಗ ನಿಯಂತ್ರಣಕ್ಕಾಗಿ ಹಂಪ್ ಅಳವಡಿಸುವಂತೆ ಆಗ್ರಹಿಸಿ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕುಶಾಲನಗರ ತಾಲ್ಲೂಕು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು ಕುಶಾಲನಗರ ಹಾರಂಗಿ ರಸ್ತೆಯಲ್ಲಿ ವಿಪರೀತವಾಗಿ ಅಪಘಾತಗಳು ಸಂಭವಿಸುತ್ತಿವೆ. ಮೂಕಾಂಬಿಕ ಕಾಲೇಜು, ಸುಂದರನಗರ ಪ್ರಥಮ ದರ್ಜೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ರಸ್ತೆಯಲ್ಲಿ ನಡೆದಾಡುತ್ತಾರೆ. ವಾಹನಗಳ ಅತಿವೇಗದಿಂದ ಸಾರ್ವಜನಿಕರು ರಸ್ತೆಯಲ್ಲಿ ಭಯದಿಂದ ಸಂಚರಿಸುವಂತಾಗಿದೆ.
ಕುಶಾಲನಗರ ಹಾರಂಗಿ ರಸ್ತೆಯು ಹೊಸದಾಗಿ ಡಾಂಬರೀಕರಣ ಹಾಗೂ ರಸ್ತೆ ಅಗಲೀಕರಣವಾಗಿರುವುದರಿಂದ ವಾಹನಗಳು ಅತಿವೇಗವಾಗಿ ಸಂಚರಿಸುತ್ತಿರುತ್ತವೆ. ಹದಿನೈದು ದಿನಗಳ ಹಿಂದೆ 22 ವರ್ಷದ ಯುವಕ ಅಪಘಾತದಿಂದ ಸಾವನ್ನಪ್ಪಿದ್ದಾನೆ. ರಸ್ತೆಹುಬ್ಬು ಇಲ್ಲದ ಕಾರಣ ವಾಹನಗಳ ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ಪಂಚಾಯಿತಿಯಿಂದ ಪತ್ರ ವ್ಯವಹಾರ ನಡೆಸಲಾಗಿದ್ದು, ಯಾವುದೇ ಕ್ರಮಕೈಗೊಂಡಿರುವುದಿಲ್ಲ ಎಂದು ಆರೋಪಿಸಿದರು.
ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿ, ಕುಶಾಲನಗರ ಹಾರಂಗಿ ರಸ್ತೆಯಲ್ಲಿ ರಸ್ತೆ ಹುಬ್ಬು ಅಳವಡಿಸಿ ಅಪಘಾತಗಳಿಗೆ ಕಡಿವಾಣ ಹಾಕುವಂತೆ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಆಗ್ರಹಿಸಿದ್ದಾರೆ.