ಮಡಿಕೇರಿ ಜು.11 NEWS DESK : ರಾಜ್ಯದಲ್ಲಿ ಡೆಂಗ್ಯು ಜ್ವರ ವ್ಯಾಪಿಸುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ವರ್ಷಾರಂಭದಿಂದ ಇಲ್ಲಿಯವರೆಗೆ ಒಟ್ಟು 126 ಪ್ರಕರಣಗಳು ದಾಖಲಾಗಿದೆ.
ಒಟ್ಟು 13 ಮಂದಿ ಡೆಂಗ್ಯು ಜ್ವರಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಒಟ್ಟು 14 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದರೆ, ವಿರಾಜಪೇಟೆ ತಾಲ್ಲೂಕಿನಲ್ಲಿ 19, ಸೋಮವಾರಪೇಟೆ 1, ಕುಶಾಲನಗರದಲ್ಲಿ 32 ಮತ್ತು ಜಿಲ್ಲೆಯಲ್ಲಿಯೇ ಅತೀ ಹೆಚ್ಚು 42 ಪ್ರಕರಣಗಳು ಪೊನ್ನಂಪೇಟೆ ತಾಲ್ಲೂಕಿನಲ್ಲಿ ದಾಖಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಕಂಡು ಬಂದ ಬಹುತೇಕ ‘ಡೆಂಗ್ಯು’ ಪ್ರಕರಣಗಳು ಟ್ರಾವೆಲ್ ಹಿಸ್ಟರಿ ಹೊಂದಿರುವಂತದ್ದು. ಹೊರ ಜಿಲ್ಲೆಗಳ ವ್ಯಕ್ತಿಗಳಿಂದ ಡೆಂಗ್ಯು ಪತ್ತೆಯಾಗಿದೆಯಷ್ಟೆ. ಸ್ಥಳೀಯವಾಗಿ ಡೆಂಗ್ಯು ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ, ಇದಕ್ಕೆ ಜಾಗೃತಿ ಕಾರ್ಯಕ್ರಮಗಳು ಕೂಡ ಕಾರಣ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ತಿಳಿಸಿದ್ದಾರೆ.
ಅಂಕಿ ಅಂಶಗಳಂತೆ ಕಳೆದ ಮೇ ತಿಂಗಳಿನಲ್ಲಿ ಜಿಲ್ಲೆಯಲ್ಲಿ 25 ಡೆಂಗ್ಯು ಪ್ರಕರಣ ದಾಖಲಾಗಿದ್ದರೆ, ಜೂನ್‍ನಲ್ಲಿ 40 ಮತ್ತು ಜುಲೈನಲ್ಲಿ 13 ಪ್ರಕರಣ ಪತ್ತೆಯಾಗಿದೆ. ಡೆಂಗ್ಯುವಿನಿಂದ ಜೀವಹಾನಿಯ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.
::: ಎಲಿಜಾ ಟೆಸ್ಟ್ :::
ಜ್ವರ ಪೀಡಿತ ವ್ಯಕ್ತಿಗೆ ಮೊದಲಾಗಿ ಡೆಂಗ್ಯೂ ಎನ್‍ಎಸ್-1 ಪರೀಕ್ಷೆ ನಡೆಸಿ, ರಕ್ತದಲ್ಲಿನ ಪ್ಲೇಟ್ ಲೆಟ್‍ಗಳ ಪ್ರಮಾಣದ ಪರೀಕ್ಷೆ ನಡೆಸಲಾಗುತ್ತದೆ. ಅಂತಿಮವಾಗಿ ಎಲಿಜಾ ಟೆಸ್ಟ್ ಮೂಲಕ ಡೆಂಗ್ಯು ಇರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
::: ‘ಪ್ಲೇಟ್ ಲೆಟ್’ ಲಭ್ಯ :::
ಡೆಂಗ್ಯು ಜ್ವರದಲ್ಲಿ ರಕ್ತದಲ್ಲಿನ ಪ್ಲೇಟ್‍ಲೆಟ್‍ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿಯುತ್ತದೆ. ರೋಗಿಗೆ ಪ್ಲೇಟ್ ಲೆಟ್‍ಗಳನ್ನು ಒದಗಿಸುವುದು ಅತ್ಯವಶ್ಯ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮೇ15 ರ ಬಳಿಕ ವಿವಿಧ ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತ ಸಂಗ್ರಹದೊಂದಿಗೆ, ಜಿಲ್ಲಾ ಆಸ್ಪತ್ರೆಯಲ್ಲಿರುವ ವ್ಯವಸ್ಥೆಯ ಮೂಲಕ ಪ್ಲೇಟ್ ಲೆಟ್‍ಗಳನ್ನು ಸಂಗ್ರಹಿಸಿಡಲಾಗಿದೆ. ಚಿಕಿತ್ಸೆಗೆ ಅಗತ್ಯವಾದ ಪ್ಲೇಟ್ ಲೆಟ್‍ಗಳು ಲಭ್ಯವಿದೆ. ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
::: ನಿಯಂತ್ರಣ ಕ್ರಮ :::
ಡೆಂಗ್ಯು ನಿಯಂತ್ರಣಕ್ಕಾಗಿ ಜಿಲ್ಲಾ ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಡೆಂಗ್ಯು ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಸೇರಿದಂತೆ, ಡೆಂಗ್ಯು ಜ್ವರಕ್ಕೆ ಕಾರಣವಾಗುವ ‘ಲಾರ್ವ’ ಸರ್ವೆ ಕಾರ್ಯವನ್ನು ನಡೆಸಲಾಗುತ್ತಿದೆ. ದಾಖಲಾಗಿರುವ ಯಾವುದೇ ಪ್ರಕರಣಗಳು ಗಂಭೀರವಾಗಿಲ್ಲ ಎಂದು ಡಾ.ಕೆ.ಎಂ.ಸತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.










