ಸೋಮವಾರಪೇಟೆ ಜು.19 NEWS DESK : ಸೋಮವಾರಪೇಟೆ ತಾಲ್ಲೂಕಿನಾದ್ಯಂತ ಶುಕ್ರವಾರ ವರುಣನ ಅರ್ಭಟ ಮುಂದುವರಿದಿದ್ದು, ಹಾನಿಯ ಪ್ರಮಾಣ ಹೆಚ್ಚಾಗುತ್ತಿದೆ. ಶಿಥಿಲಗೊಂಡಿರುವ ಬಡವರ ಮನೆಗಳ ಗೋಡೆಗಳು ಕುಸಿಯಲು ಪ್ರಾರಂಭಿಸಿವೆ. ಶಾಂತಳ್ಳಿ ಹೋಬಳಿಯಲ್ಲಿ ಬಿರುಗಾಳಿ ಸಹಿತ ಮಳೆ ಧಾರಕಾರವಾಗಿ ಸುರಿಯುತ್ತಿವೆ. ಮಲ್ಲಳ್ಳಿ ಜಲಪಾತಕ್ಕೆ ತೆರಳುವ ರಸ್ತೆಯ ಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು, ಪ್ರವಾಸಿಗರು ತೆರಳದಂತಾಗಿದೆ. ಸೋಮವಾರಪೇಟೆ, ಕುಂದಳ್ಳಿ ಮಾರ್ಗವಾಗಿ ಸಕಲೇಶಪುರ ಮಾರ್ಗದ ರಸ್ತೆಯಲ್ಲಿರುವ ಕೊಡಗಿನ ಗಡಿ ಮಾಗೇರಿ-ಬಾಣಗೇರಿ ಸೇತುವೆಯ ನೀರಿನಿಂದ ಅವೃತ್ತವಾಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಬಿಳಕಿಕೊಪ್ಪ ಗ್ರಾಮದ ನಿವಾಸಿ ಸರಸ್ವತಿ ಎಂಬುವರ ಮನೆ ಮೇಲೆ ಮರಬಿದ್ದು ಹಾನಿಯಾಗಿದೆ. ಮೂವತ್ತೊಕ್ಲು ಗ್ರಾಮದ ಜಾನುಬೇಡು ಎಂಬವರ ಮನೆ, ದೊಡ್ಡಬ್ಬೂರು ಗ್ರಾಮದ ಗೌರಿರಾಜು ಮನೆ, ಕುಂಬೂರು ಗ್ರಾಮದ ಶಿವಪ್ಪ ಅವರ ಮನೆ, ಬಜೆಗುಂಡಿಯ ನಾಗು, ಚೌಡ್ಲು ಗ್ರಾಮದ ಪಾರ್ವತಿ ಎಂಬುವರುಗಳ ಮನೆಯ ಗೋಡೆ ಕುಸಿದು ಹಾನಿಯಾಗಿದೆ. ಕೂತಿ ಗ್ರಾಮದ ಸಮೀಪದ ಯಡದಂಟೆ ಗ್ರಾಮಕ್ಕೆ ತೆರಳುವ ರಸ್ತೆಯ ಪಕ್ಕದಲ್ಲೇ 10 ಅಡಿ ಅಳಕ್ಕೆ ಗುಂಡಿ ನಿರ್ಮಾಣವಾಗಿದ್ದು, ರಸ್ತೆ ಕುಸಿಯುವು ಭೀತಿ ಎದುರಾಗಿದೆ. ಕಳೆದ 24 ಗಂಟೆಗಳಲ್ಲಿ ಶಾಂತಳ್ಳಿ ಹೋಬಳಿಗೆ 183.0ಮಿಲಿ ಮೀಟರ್, ಸೋಮವಾರಪೇಟೆ 112.2, ಶನಿವಾರಸಂತೆ 90, ಕೊಡ್ಲಿಪೇಟೆ 75.ಮಿ.ಮೀ ಮಳೆಯಾಗಿದೆ.