ನಾಪೋಕ್ಲು ಆ.19 NEWS DESK : ಭಾರತೀಯ ಅರಣ್ಯ ಸೇವೆ (ಐ.ಎಫ್.ಎಸ್) ಅಧಿಕಾರಿ ಮಡಿಕೇರಿ ತಾಲೂಕು ನಾಪೋಕ್ಲುವಿನ ಪಿ.ಎ.ಸೀಮಾ ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದ ನಿರ್ದೇಶಕಿಯಾಗಿ ನೇಮಕಗೊಂಡಿದ್ದಾರೆ. ಸೀಮಾ ಅವರು ಈ ಹಿಂದೆ ಹುಣಸೂರು ವಿಭಾಗದ ಡಿ.ಸಿ.ಎಫ್ ಆಗಿ ಸೇವೆ ಸಲಿಸಿದ್ದರು. 2017ರ ಗುಂಪಿನ ಇವರು ಮೈಸೂರು, ಮಂಡ್ಯ ಹುಣಸೂರು, ಮಡಿಕೇರಿಯಲ್ಲಿ ಡಿ.ಸಿ.ಎಫ್ ಆಗಿ ಸೇವೆ ಸಲ್ಲಿಸಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಆನೆಗಳ ಕಾರ್ಯಪಡೆಯ ಹೆಚ್ಚುವರಿ ಡಿ.ಸಿ.ಎಫ್ ಆಗಿ ಕಾರ್ಯನಿರ್ವಹಿಸಿ ಹುಣಸೂರು ಹಾಗೂ ಕೆ.ಆರ್ ನಗರದ ವಿಭಾಗದಲ್ಲಿ ಮಾನವ ಹಾಗೂ ಆನೆಗಳ ನಡುವೆ ಸಂಘರ್ಷವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿ ಪ್ರಶಂಸೆಗೆ ಒಳಗಾಗಿದ್ದರು. ಇವರು ಮೂಲತ: ನಾಪೋಕ್ಲು ಗ್ರಾಮದ ನಿವಾಸಿ ಪಾಡ್ಯಮಂಡ ಆನಂದ (ಸಾಬು) ಕಮಲ ದಂಪತಿಗಳ ಪುತ್ರಿ. ನಾಪೋಕ್ಲು ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು, ಪೊನ್ನಂಪೇಟೆ ಅರಣ್ಯ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣವನ್ನು ಪೂರೈಸಿದ್ದು, ಮತ್ತೂರು ಗ್ರಾಮದ ಪುತ್ತಾಮನೆ ಡಾಕ್ಟರ್ ಅಶೋಕ್, ಶಾಂತಿ ಅವರ ಸೊಸೆ, ಪುತ್ತಾಮನೆ ರಂಜನ್ ಪತ್ನಿ. ಪಿ.ಎ.ಸೀಮಾ ಕರ್ನಾಟಕ ಸರ್ಕಾರದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಿದ ಮಹಿಳೆ ಎಂದೆನಿಸಿಕೊಂಡಿದ್ದಾರೆ.
ವರದಿ : ದುಗ್ಗಳ ಸದಾನಂದ.