ಸುಂಟಿಕೊಪ್ಪ NEWS DESK ಆ.23 : ಆದಾಯ ಕುಸಿತವಾಗಿರುವ ಹಿನ್ನೆಲೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ನೀರಿನ ದರ ಮತ್ತು ಕರ ವಸೂಲಾತಿ ಅಭಿಯಾನವನ್ನು ಆರಂಭಿಸಿದೆ. ಹಣದ ಕೊರತೆಯಿಂದ ಸಿಬ್ಬಂದಿಗಳಿಗೆ ವೇತನ ನೀಡಲು ಸಾಧ್ಯವಾಗುತ್ತಿರಲಿಲ್ಲ ಮತ್ತು ಅಭಿವೃದ್ಧಿ ಕಾರ್ಯಗಳಿಗೂ ಹಿನ್ನಡೆಯಾಗಿತ್ತು. ದರ, ಕರ ವಸೂಲಾತಿ ಅಭಿಯಾನಕ್ಕೆ ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಹಾಗೂ ಪಿಡಿಓ ವಿ.ಜಿ.ಲೋಕೇಶ್ ಚಾಲನೆ ನೀಡಿದರು. ಬಹಳ ಹಿಂದಿನಿಂದಲೂ ಅನೇಕರು ನೀರಿನ ತೆರಿಗೆ ಮತ್ತು ಮನೆಯ ಕಂದಾಯ ಪಾವತಿಸದೆ ಸಾವಿರಾರು ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ. ಪಂಚಾಯಿತಿ ಸಿಬ್ಬಂದಿಗಳಿಗೆ ವೇತನ ನೀಡಲು ಮತ್ತು ವಿವಿಧ ವಾರ್ಡ್ ಗಳ ಅಭಿವೃದ್ಧಿ ಕಾರ್ಯಕ್ಕೆ ಹಣದ ಕೊರತೆ ಎದುರಾಗಿದೆ. ಚೆಸ್ಕಾಂ ಇಲಾಖೆಗೆ ಬೀದಿ ದೀಪ, ನೀರು ಸರಬರಾಜು ವಿದ್ಯುತ್ ಬಿಲ್ ವಾರ್ಷಿಕವಾಗಿ ಲಕ್ಷಾಂತರ ರೂ. ಪಾವತಿಸಬೇಕಿದೆ. ಆದಾಯ ಕುಸಿತ ಒಂದೆಡೆಯಾದರೆ ಮೂಲಭೂತ ಸೌಲಭ್ಯಗಳಿಗೆ ಬೇಕಾಗಿರುವ ಸಂಪನ್ಮೂಲದ ಕೊರತೆಯು ಬಹಳವಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಂಪನ್ಮೂಲವನ್ನು ಕ್ರೋಢೀಕರಿಸಲು ಅಭಿಯಾನ ಆರಂಭಗೊಂಡಿದೆ. ಮನೆ ಹಾಗೂ ನೀರಿನ ತೆರಿಗೆಯನ್ನು ಪಾತಿಸುವಂತೆ ಮನವಿ ಮಾಡಲು ಪಂಚಾಯಿತಿ ಸಿಬ್ಬಂದಿಗಳಾದ ಶ್ರೀನಿವಾಸ್ ಹಾಗೂ ಡಿ.ಎಂ.ಮಂಜುನಾಥ್ ಅವರುಗಳು ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಗ್ರಾಮಸ್ಥರು ತೆರಿಗೆ ಪಾವತಿಸುವ ಮೂಲಕ ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುವಂತೆ ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಮನವಿ ಮಾಡಿದ್ದಾರೆ. ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯ ಶಬ್ಬೀರ್ ಮತ್ತಿತರರು ಇದ್ದರು.











