ಸೋಮವಾರಪೇಟೆ ಸೆ.16 NEWS DESK : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ 1.19 ಕೋಟಿ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷೆ ರೂಪಾ ಸತೀಶ್ ಹೇಳಿದರು. ಸ್ಥಳೀಯ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಕಾರ ಸಂಘದಲ್ಲಿ 5209 ಮಂದಿ ಸದಸ್ಯರಿದ್ದು, ಪ್ರಸಕ್ತ ಅವಧಿಯಲ್ಲಿ 300 ಮಂದಿ ನೂತನವಾಗಿ ಸದಸ್ಯರಾಗಿದ್ದಾರೆ. 380 ಕೋಟಿ ರೂ., ವ್ಯವಹಾರ ಮಾಡಲಾಗಿದೆ. ಸದಸ್ಯರಿಗೆ ಶೆ.22 ಲಾಭಾಂಶ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಸಂಘದ ಒಟ್ಟು ದುಡಿಯುವ ಬಂಡವಾಳ 77.26 ಕೋಟಿ ರೂ., ಆಗಿದ್ದು, ಸಂಘದಲ್ಲಿ ಜಾಮೀನು ಸಾಲದ ವಿಮಾ ಯೋಜನೆ, ಪಿಗ್ಮಿ ಓವರ್‍ಡ್ರಾಫ್ಟ್ ಸಾಲದ ವಿಮಾ ಯೋಜನೆ, ಸ್ವಸಹಾಯ ಮತ್ತು ಜಂಟಿ ಭಾದ್ಯತಾ ಗುಂಪುಗಳ ಯೋಜನೆಯನ್ನು ರೂಪಿಸಲಾಗಿದೆ. ಹಿಂದಿನಿಂದ ಇಲ್ಲಿಯವರೆಗೂ ಸಂಘವು ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ ಎ. ತರಗತಿಯನ್ನು ಪಡೆದುಕೊಂಡಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು. ಸಂಘದಲ್ಲಿ ಯಶಸ್ವಿನಿ ರೈತರ ವಿಮಾ ಯೋಜನೆ ಜಾರಿಯಲ್ಲಿದ್ದು, 2023-24ನೇ ಸಾಲಿನಲ್ಲಿ ಒಟ್ಟು 1093 ಜನ ಸದಸ್ಯರು ಯೋಜನೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. 1,57,575 ರೂ. ಗಳನ್ನು ವಿಮಾ ಯೋಜನೆಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದರು. ಸಂಘದಲ್ಲಿ ಜಾಮೀನು ಸಾಲ, ಕೆಸಿಸಿ ಫಸಲು ಸಾಲ, ಕೃಷಿಯೇತರ ಆಸ್ತಿ ಆಧಾರಿತ ಸಾಲ, ಮಧ್ಯಮಾವಧಿ ಸಾಲ, ಪಶು ಸಂಗೋಪನೆ, ಜಂಟಿ ಭಾದ್ಯತೆ ಸಾಲ, ಸೋಲಾರ್ ಸಿಸ್ಟಂ, ಪಿಗ್ಮಿ ಓವರ್ ಡ್ರಾಫ್ಟ್, ಸ್ವಸಹಾಯ ಗುಂಪು ಸಾಲ, ಆಭರಣ ಈಡಿನ ಸಾಲ, ಗೃಹ ನಿರ್ಮಾಣ, ಪಿಗ್ಮಿ ಠೇವಣಿ, ವಾಹನ ಖರೀದಿ, ಸ್ವರ್ಣ ನಾಣ್ಯ ಯೋಜನೆ ಸೇರಿದಂತೆ ಇನ್ನಿತರ ಸಾಲಗಳನ್ನು ನೀಡಲಾಗುತ್ತಿದ್ದು, ಸದಸ್ಯರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ವಾರ್ಷಿಕ ಮಹಾಸಭೆಯಲ್ಲಿ 2023-24ನೇ ಸಾಲಿನ 7ನೇ ತರಗತಿ, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸದಸ್ಯರ ಮತ್ತು ಸಂಘದ ವ್ಯಾಪ್ತಿಗೆ ಬರುವ ಸರ್ಕಾರಿ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ಸದಸ್ಯೇತರ ಮಕ್ಕಳಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು. ಸಂಘದ ಶತಮಾನೋತ್ಸವ ವಿದ್ಯಾನಿಧಿಯಿಂದ ಸೋಮವಾರಪೇಟೆ ತಾಲ್ಲೂಕಿನ ವಸತಿ ರಹಿತ ಸರ್ಕಾರಿ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಪಿ. ದಿವಾನ್, ನಿರ್ದೆಶಕರುಗಳಾದ ಜಿ.ಬಿ. ಸೋಮಯ್ಯ, ಬಿ.ಎಂ.ಸುರೇಶ್, ಎಚ್.ಕೆ. ಮಾದಪ್ಪ, ಬಿ.ಎಂ. ಈಶ್ವರ್, ಕೆ.ಕೆ. ಚಂದ್ರಿಕಾ, ಪಿ.ಡಿ. ಮೋಹನ್‍ದಾಸ್, ಎಚ್.ಕೆ. ಚಂದ್ರಶೇಖರ್, ಪಿ.ಎ. ಅನಿತ, ಬಿ.ಶಿವಪ್ಪ, ಎಂ.ವಿ. ದೇವರಾಜ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಅವರುಗಳು ಇದ್ದರು.