ಮಡಿಕೇರಿ ಸೆ.20 NEWS DESK : ಭಾಗಮಂಡಲ ಸರ್ಕಾರಿ ಆಸ್ಪತ್ರೆಗೆ ವೈದ್ಯರನ್ನು ನಿಯೋಜಿಸಬೇಕೆಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಯ್ಯಂಗೇರಿ ಘಟಕ ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಸಲ್ಲಿಸಿದೆ. ಕಳೆದ ಎರಡು ವರ್ಷಗಳಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದ್ದು, ರೋಗಿಗಳು ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ನುರಿತ ವೈದ್ಯರನ್ನು ನೇಮಕ ಮಾಡಬೇಕು ಎಂದು ಪಕ್ಷದ ಪ್ರಮುಖರು ಮನವಿ ಮಾಡಿದರು. ಭಾಗಮಂಡಲ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆ ಇದೇ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅವಲಂಭಿಸಿದ್ದು, ವೈದ್ಯರಿಲ್ಲದೆ ರೋಗಿಗಳು ಕಷ್ಟ ಅನುಭವಿಸುತ್ತಿದ್ದಾರೆ. ಭಾಗಮಂಡಲ ಮತ್ತು ತಲಕಾವೇರಿ ಪುಣ್ಯ ಕ್ಷೇತ್ರಕ್ಕೆ ದೇಶದ ವಿವಿಧ ಭಾಗಗಳಿಂದ ಭಕ್ತರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಮಡಿಕೇರಿ ಆಸ್ಪತ್ರೆಯನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ವೈದ್ಯರ ಕೊರತೆ ಕುರಿತು ಈಗಾಗಲೇ ವಿರಾಜಪೇಟೆ ಕ್ಷೇತ್ರದ ಶಾಸಕರಿಗೂ ಮನವಿ ಸಲ್ಲಿಸಲಾಗಿದೆ. ತಕ್ಷಣ ವೈದ್ಯರನ್ನು ನೇಮಕ ಮಾಡುವ ಮೂಲಕ ಆರೋಗ್ಯಾಧಿಕಾರಿಗಳು ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಬೇಕೆಂದು ಎಸ್‍ಡಿಪಿಐನ ಅಯ್ಯಂಗೇರಿ ಘಟಕದ ಅಧ್ಯಕ್ಷ ಮುನೀರ್ ಎಂ.ಎ ಮನವಿ ಮಾಡಿದರು. ಮನವಿ ಪತ್ರ ಸಲ್ಲಿಸುವ ಸಂದರ್ಭ ಎಸ್‍ಡಿಪಿಐ ಜಿಲ್ಲಾ ಕೋಶಾಧಿಕಾರಿ ಎಂ.ಕೆ.ಮನ್ಸೂರ್ ಆಲಿ, ಅಯ್ಯಂಗೇರಿ ಘಟಕದ ಉಪಾಧ್ಯಕ್ಷ ಉಸ್ಮಾನ್ ಬಿ.ಎ, ಕಾರ್ಯದರ್ಶಿ ಸಮ್ಮಾಸ್ ಕೆ.ಎಚ್, ಜಂಟಿ ಕಾರ್ಯದರ್ಶಿ ಲತೀಫ್ ಪಿ.ಎ ಹಾಗೂ ಕೋಶಾಧಿಕಾರಿ ಸಲಾಂ ಕೆ.ಕೆ ಹಾಜರಿದ್ದರು.