ಕುಶಾಲನಗರ, ನ.1 NEWS DESK : ಸ್ವಚ್ಛ ದೀಪಾವಳಿ, ಸ್ವಸ್ಥ ದೀಪಾವಳಿ’: ನಮ್ಮ ನಡೆ ಹಸಿರೆಡೆಗೆ ಗೋ ಗ್ರೀನ್ ಅಭಿಯಾನ : 2024 ದಡಿ ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಮಾಲಿನ್ಯಕಾರಿ ಪಟಾಕಿ ಸಿಡಿತದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಂಬಂಧ ಕುಶಾಲನಗರ ತಾಲ್ಲೂಕಿನ ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಶಾಲೆಯ ಇಕೋ ಕ್ಲಬ್ ವತಿಯಿಂದ ಶಾಲೆಯಲ್ಲಿ *”ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸಲಾಯಿತು. ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಹಸಿರು ದೀಪಾವಳಿ ಆಚರಣೆಯ ಮಹತ್ವ ಕುರಿತು ಮಾಹಿತಿ ನೀಡಿದ ಸಮಾಜ ವಿಜ್ಞಾನ ಶಿಕ್ಷಕ ಹೆಚ್.ಆರ್.ಶೇಖರ್ ಮಾತನಾಡಿ, ದೀಪಾವಳಿ ಹಬ್ಬದಲ್ಲಿ ನಾವು ಸ್ವಚ್ಛ ಮತ್ತು ಸ್ವಸ್ಥ ಪರಿಸರಕ್ಕಾಗಿ ಹಾಗೂ ಮಾಲಿನ್ಯಕಾರಿ ಪಟಾಕಿಗಳನ್ನು ತ್ಯಜಿಸಿ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸುವ ಮೂಲಕ ಹಸಿರು ದೀಪಾವಳಿ ಆಚರಿಸಬೇಕು ಎಂದು ಮನವಿ ಮಾಡಿದರು. ಸ್ವಚ್ಛ ಹಾಗೂ ಸ್ವಸ್ಥ ದೀಪಾವಳಿ ಆಚರಣೆ ಕುರಿತ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಶಾಲೆಯ ಹಿರಿಯ ಶಿಕ್ಷಕಿ ಎಸ್.ಕೆ.ಶೈಲಾ, ವಿದ್ಯಾರ್ಥಿಗಳು ಪಟಾಕಿ ತ್ಯಜಿಸಿ ಹಣತೆ ಬೆಳಗಿಸಿ ಹಸಿರು ದೀಪಾವಳಿ ಆಚರಿಸಬೇಕು ಎಂದರು. ಶಾಲೆಯಲ್ಲಿ ವಿದ್ಯಾರ್ಥಿಗಳು ಚೆಂಡು ಹೂವಿನಿಂದ ಪುಷ್ಪ ರಂಗವಲ್ಲಿ ಬಿಡಿಸಿ ಹಣತೆ ಬೆಳಗಿಸುವ ಮೂಲಕ ಹಸಿರು ದೀಪಾವಳಿ ಆಚರಿಸಿದರು. ಶಾಲಾ ಶಿಕ್ಷಕಿಯರಾದ ಎಲ್.ಆರ್.ಕವಿತ, ಎನ್.ವಿ.ಸುಜಾತ, ಜಿ.ಎನ್.ಸೌಮ್ಯ, ರಾಧಾಮಣಿ, ಎಂ.ಎಸ್. ಅರ್ಪಿತ ಮತ್ತು ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳು ಮಾಲಿನ್ಯಕಾರಿ ಪಟಾಕಿ ಸಿಡಿಸುವುದರಿಂದ ಉಂಟಾಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸಿದರು. ವಿದ್ಯಾರ್ಥಿಗಳು ಹಣತೆ ಬೆಳಗಿಸಿ ದೀಪಾವಳಿ ಆಚರಿಸಿ, ಪಟಾಕಿ ತ್ಯಜಿಸಿ ಮಾಲಿನ್ಯ ತಡೆಯಿರಿ, ನಮ್ಮ ನಡೆ ಹಸಿರೆಡೆಗೆ ಎಂಬಿತ್ಯಾದಿ ಘೋಷಣೆಗಳ ಬಗ್ಗೆ ಜಾಗೃತಿ ಮೂಡಿಸಿದರು.