ಮಡಿಕೇರಿ ನ.9 NEWS DESK : 25ನೇ ಕೊಡವ ಕೌಟುಂಬಿಕ ಹಾಕಿ ಉತ್ಸವದ ಉಸ್ತುವಾರಿ ವಹಿಸಿಕೊಂಡಿರುವ ಮುದ್ದಂಡ ಕಪ್ ಹಾಕಿ ಉತ್ಸವದ ವೆಬ್‍ಸೈಟ್ ಬಿಡುಗಡೆಗೊಳಿಸಲಾಯಿತು. ತಾಳತ್ತಮನೆಯ ಆಕ್ಸಿರಿಚ್ ಹೊಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ವೆಬ್‍ಸೈಟ್‍ಗೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಕೊಡಗು ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂ ಬೋಪಣ್ಣ, ಕಳೆದ ಬಾರಿ ಹಾಕಿ ಉತ್ಸವ ಆಯೋಜನೆ ಮಾಡಿ ಕುಂಡ್ಯೋಳಂಡ ತಂಡ 360 ತಂಡಗಳನ್ನು ಆಡಿಸುವ ಮೂಲಕ ಗಿನ್ನಿಸ್ ದಾಖಲೆ ಮಾಡಿದೆ. ಮುದ್ದಂಡ ದೊಡ್ಡ ಕುಟುಂಬವಾಗಿದೆ. ಇನ್ನೂ ಚೆನ್ನಾಗಿ ಆಯೋಜನೆ ಮಾಡಲಿದ್ದಾರೆ. ಹೆಚ್ಚಿನ ತಂಡಗಳನ್ನು ಸೇರಿಸಲಿದ್ದಾರೆ. ಮುಂದಕ್ಕೆ ಹಾಕಿ ಉತ್ಸವದ ಉಸ್ತುವಾರಿ ವಹಿಸಿಕೊಳ್ಳಲು 8 ಕುಟುಂಬಗಳು ಮುಂದೆ ಬಂದಿದೆ ಎಂದರು. ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಮಾತನಾಡಿ, 25ನೇ ವರ್ಷದ ಉತ್ಸವ ಯಶಸ್ವಿಯಾಗುವ ಭರವಸೆ ಇದೆ. ವಿಶ್ವವ್ಯಾಪಿ ಪ್ರಸಿದ್ಧಿ ಪಡೆದಿರುವ ಗಿನ್ನಿಸ್ ದಾಖಲೆ ನಿರ್ಮಿಸಿದ್ದರೂ ಅಂತರಾಷ್ಟ್ರೀಯ ಹಾಕಿ ತಂಡದಲ್ಲಿ ಕೊಡಗಿನ ಆಟಗಾರರಿಗೆ ಅವಕಾಶ ಸಿಗದೇ ಇರುವುದು ಬೇಸರ ತರಿಸಿದೆ ಎಂದು ಹೇಳಿದರು. ಈ ಸಂದರ್ಭ ಬ್ರಹ್ಮಗಿರಿ ಪತ್ರಿಕೆ ಸಂಪಾದಕ ಉಳ್ಳಿಯಡ ಪೂವಯ್ಯ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ, ಮುದ್ದಂಡ ಸ್ಪೋಟ್ರ್ಸ್ ಎಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುದ್ದಂಡ ರಶಿತ್ ಸುಬ್ಬಯ್ಯ, ಕುಟುಂಬದ ಪಟ್ಟೆದಾರ ಡಾಲಿ ತಿಮ್ಮಯ್ಯ, ಡೀನ್ ಬೋಪಣ್ಣ, ಉಪಾಧ್ಯಕ್ಷ ಅಶೋಕ್, ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಇದ್ದರು. ಮಿನ್ನಂಡ ಚಿಣ್ಣಪ್ಪ, ಚೋಂದಮ್ಮ ಪ್ರಾರ್ಥಿಸಿದರು. ಚೋಕೀರ ಅನಿತಾ ದೇವಯ್ಯ, ಚೆಯ್ಯಂಡ ಭಜನ್ ನಿರೂಪಿಸಿದರು. ಆದ್ಯ ತಿಮ್ಮಯ್ಯ ಸ್ವಾಗತಿಸಿದರು. ರಾಯ್ ತಮ್ಮಯ್ಯ ಉತ್ಸವ ಸಮಿತಿಯ ಪದಾಧಿಕಾರಿಗಳ ಪರಿಚಯ ಮಾಡಿದರು.