ನಾಪೋಕ್ಲು ನ.9 NEWS DESK : ಹೊದ್ದೂರು ಗ್ರಾಮದ ಪೆಗ್ಗೋಳಿ ಎಂಬಲ್ಲಿ ಸರ್ಕಾರಿ ಜಾಗದಲ್ಲಿನ ಅಕ್ರಮ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ನಿವೇಶನ ಕೊಡಿಸುವಂತೆ ಭೂಮಿ ಮತ್ತ ವಸತಿ ಹಕ್ಕು ವಂಚಿತರ ಕುಟುಂಬ ಹಾಗೂ ಹೋರಾಟ ಸಮಿತಿಯ ಪದಾಧಿಕಾರಿಗಳು ನಡೆಸುತ್ತಿರುವ ಹೋರಾಟ ಏಳನೇ ದಿನಕ್ಕೆ ಕಾಲಿಟ್ಟಿದೆ. ಹೊದ್ದೂರು ಗ್ರಾಮದಲ್ಲಿ 800ಕ್ಕೂ ಅಧಿಕ ನಿರಾಶ್ರಿತ ಬಡ ಕುಟುಂಬಗಳಿಗೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಇನ್ನಿತರ ಹಿಂದುಳಿದ ವರ್ಗಗಳಿಗೆ ಸಿಗಬೇಕಾದ ಸರ್ಕಾರಿ ಕಂದಾಯ ಭೂಮಿಯನ್ನು ಭೂ ಮಾಲೀಕರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು ಇದುವರೆಗೂ ಬಡವರಿಗೆ ನಿವೇಶನ ಸರ್ಕಾರ ನೀಡಲು ಮುಂದಾಗಿರುವುದಿಲ್ಲ. ನಿವೇಶನ ಕಲ್ಪಿಸಿ ಕೊಡುವಂತೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾ ಕಾರ್ಯದರ್ಶಿ, ಹೊದ್ದೂರು ಪಂಚಾಯಿತಿ ಸದಸ್ಯ ಕೆ.ಮೊಣ್ಣಪ್ಪ ಹೋರಾಟದ ಮುಂದಾಳತ್ವ ವಹಿಸಿ ಒತ್ತಾಯಿಸಿದರು. ಈ ಸಂದರ್ಭ ಹೊದ್ದುರು ಗ್ರಾ.ಪಂ ಮಾಜಿ ಅಧ್ಯಕ್ಷರಾದ ಕುಸುಮವತಿ, ಹೆಚ್.ಎಸ್.ಭೋಜ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿಯ ಕಿರಣ್, ಜಗದೀಶ್, ಮಹಮ್ಮದ್, ಮಾದೇಶ, ನೀವೆಸನ ಸಮಿತಿ ಪದಾಧಿಕಾರಿ ಸತೀಶ, ಲೋಕೇಶ, ಮೋಹನ್, ಸುಜಾತಾ, ಆನಂದ, ಮಂಜುಳಾ, ಜೀವನ್, ಸೌಮ್ಯ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.