ಮಡಿಕೇರಿ ಡಿ.14 NEWS DESK : ವಿಶಿಷ್ಟ ಸಂಸ್ಕೃತಿಯ ಕೊಡವ ಜನಾಂಗದ ಪ್ರಧಾನ ಹಬ್ಬಗಳಲ್ಲಿ ಒಂದಾದ ಪುತ್ತರಿಯನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದಕ್ಷಿಣ ಕೊಡಗಿನ ಪತ್ ಕಟ್ ನಾಡ್ ನ ಬಾಳೆಲೆ ಬಳಿಯ ಬಿಳೂರು ಗ್ರಾಮದಲ್ಲಿ ಸಂಭ್ರಮದಿಂದ ಆಚರಿಸಿತು. ಹುಣ್ಣಿಮೆಯ ದಿನವಾದ ಇಂದು ಬೆಳಗ್ಗೆ ಬಿಳೂರು ಗ್ರಾಮದ ಕಾಂಡೇರ ಸುರೇಶ್ ಅವರ ಭತ್ತದ ಗದ್ದೆಯಲ್ಲಿ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಸಾಂಪ್ರದಾಯಿಕವಾಗಿ ನವ ಧಾನ್ಯ ಭತ್ತದ ಕದಿರು ಕೊಯ್ಯುವ ಮೂಲಕ 31ನೇ ವರ್ಷದ ಹಬ್ಬವನ್ನು ಅರ್ಥಪೂರ್ಣಗೊಳಿಸಿದರು.ದುಡಿಕೊಟ್ಟ್-ಪಾಟ್ ಮೂಲಕ ಗದ್ದೆಗೆ ಮೆರವಣಿಗೆಯಲ್ಲಿ ತೆರಳಿ ತೆನೆ ತುಂಬಿದ ಕದಿರುಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಅವರು ಪ್ರಕೃತಿ ದೇವಿಗೆ ನಮಿಸಿದರು. ಗಾಳಿಯಲ್ಲಿ ಗುಂಡು ಹಾರಿಸಿ ಪುತ್ತರಿಯ ಆಚಾರ, ವಿಚಾರಗಳನ್ನು ಆರಂಭಿಸಿದರು. ಕೊಯ್ದ ಕದಿರನ್ನು “ಪೊಲಿಯೇ ಬಾ, ಪೊಲಿ ಪೊಲಿಯೇ ಬಾ” ಎಂದು ಧಾನ್ಯಲಕ್ಷ್ಮಿಯನ್ನು ಘೋಷವಾಕ್ಯದ ಮೂಲಕ ಆಹ್ವಾನಿಸುತ್ತಾ ಮನೆ ತುಂಬಿಕೊಂಡರು. ನಂತರ ನವ ಧಾನ್ಯವನ್ನು ಪೂಜ್ಯಸ್ಥಾನದಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಿ ಕೊಡವ ಜನಾಂಗ ಹಾಗೂ ನಾಡಿನ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಕಾಂಡೇರ ರಮ್ಮಿ ಉತ್ತಪ್ಪ, ಕಾಂಡೇರ ಜೀನ ಉತ್ತಪ್ಪ, ಕಲಿಯಂಡ ಪ್ರಕಾಶ್, ಕಾಂಡೇರ ಸುರೇಶ್, ಬೇಪಡಿಯಂಡ ದಿನು, ಅರೆಯಡ ಗಿರೀಶ್, ಚಂಬಂಡ ಜನತ್, ಕಿರಿಯಮಾಡ ಶೆರಿನ್, ಅರೆಯಡ ಸಾವನ್, ಕಾಂಡೇರ ಜಿಮ್ಮಿ ಉತ್ತಪ್ಪ, ಕಿರಿಯಮಾಡ ಶಾನ್, ಕಾಂಡೇರ ಸಾಂಚನ್, ನಂದೇಟಿರ ರವಿ ಸುಬ್ಬಯ್ಯ, ಸಾದೇರ ರಮೇಶ್, ಅವರೆಮಾಡಂಡ ರಮೇಶ್, ಪಾರ್ವಂಗಡ ನವೀನ್, ಜಮ್ಮಡ ಮೋಹನ್, ಮದ್ರೀರ ಕರುಂಬಯ್ಯ, ಮಂಡೆಪಂಡ ರಾಜೇಶ್, ಚಾರಿಮಂಡ ಶಿವು, ಶೇಖರ್ ಪಾಲ್ಗೊಂಡು ಕೊಡಗಿನ ಸಮೃದ್ಧಿ ಮತ್ತು ಸಾಮರಸ್ಯಕ್ಕಾಗಿ ಪ್ರಾರ್ಥಿಸಿದರು. ನೆರೆದಿದ್ದವರು ಪುತ್ತರಿ ಹಬ್ಬದ ಕೊಡವ ಸಾಂಪ್ರದಾಯಿಕ ಖಾದ್ಯಗಳನ್ನು ಸವಿದು ಸಂಭ್ರಮಸಿದರು.