ಮಡಿಕೇರಿ ಡಿ.19 NEWS DESK : ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಹೋಬಳಿಯ ಈರಳೆವಳಮುಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಅಕ್ರಮ ಸಕ್ರಮದಡಿ ಮಂಜೂರಾಗಿದ್ದ ಊರ್ ಮಂದ್ ನ 98 ಸೆಂಟ್ಸ್ ಜಾಗದ ಮಂಜೂರಾತಿಯನ್ನು ವಜಾಗೊಳಿಸಲಾಗಿದೆ. ನಿಯಮ ಬಾಹಿರ ಎನ್ನುವ ಕಾರಣಕ್ಕಾಗಿ ವಜಾಗೊಳಿಸಿ ಆದೇಶಿಸುವ ಮೂಲಕ, ಊರ್ ಮಂದ್ ನ್ನು ಸಾರ್ವಜನಿಕರ ಉಪಯೋಗಕ್ಕೆ ಸಿಗುವಂತೆ ಮಾಡಿದ ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ಕ್ರಮ ಸ್ವಾಗತಾರ್ಹ ಮತ್ತು ತಮ್ಮ 27 ವರ್ಷಗಳ ಸತತ ಹೋರಾಟಕ್ಕೆ ಸಿಕ್ಕ ಜಯ ಎಂದು ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಹಾಗೂ ಜಿ.ಪಂ ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳೆಗಾರರೊಬ್ಬರು ತಮಗೆ ಬೇಕಾದಷ್ಟು ಜಮೀನು ಇದ್ದರೂ ಊರ್ ಮಂದ್ ನ್ನು ಒತ್ತುವರಿ ಮಾಡಿಕೊಂಡು ಮಾಜಿ ಅರಣ್ಯ ಸಚಿವರೊಬ್ಬರ ಪ್ರಭಾವ ಬಳಸಿ ಅಕ್ರಮ ಸಕ್ರಮದಡಿ ಮಂಜೂರಾತಿ ಮಾಡಿಕೊಂಡಿದ್ದರು ಎಂದು ಆರೋಪಿಸಿದರು. 27 ವರ್ಷಗಳ ಹಿಂದೆ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಒತ್ತುವರಿ ಕುರಿತು ದೂರಿಕೊಂಡು ಊರ್ ಮಂದ್ ನ ಜಾಗವನ್ನು ಸಾರ್ವಜನಿಕರಿಗಾಗಿ ಉಳಿಸಿಕೊಡುವಂತೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿ ನಾನು ಸುದೀರ್ಘ ಕಾನೂನು ಹೋರಾಟ ನಡೆಸಿದ್ದೇನೆ. ಸಂಬಂಧಪಟ್ಟ ಹೋರಾಟಗಾರರ ಗಮನ ಸೆಳೆದು ಊರ್ ಮಂದ್ ನ ಒತ್ತುವರಿ ತೆರವಿಗಾಗಿ ಪ್ರಯತ್ನಸುವಂತೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆಯದ ಕಾರಣ ಏಕಾಂಗಿಯಾಗಿ ಹೋರಾಟ ನಡೆಸಿ ಇಂದು ಜಯ ಸಾಧಿಸಿದ್ದೇನೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಕೆಲವು ವರ್ಷಗಳ ಹಿಂದೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಊರ್ ಮಂದ್ ಅಕ್ರಮ ಸಕ್ರಮದಡಿ ಮಂಜೂರಾಗಿರುವುದನ್ನು ವಜಾಗೊಳಿಸಿ ನಮ್ಮ ಪರವಾಗಿ ತೀರ್ಪು ನೀಡಿತು. ಇದನ್ನು ಪ್ರಶ್ನಿಸಿ ಒತ್ತುವರಿದಾರರು ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೆಟ್ಟಿಲು ಹತ್ತಿದರು. ಜಿಲ್ಲಾಧಿಕಾರಿಗಳ ನ್ಯಾಯಾಲಯ ಪ್ರಕರಣವನ್ನು ಮತ್ತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಹಸ್ತಾಂತರಿಸಿತು. ಇದೀಗ ಮತ್ತೊಮ್ಮೆ ತೀರ್ಪು ನಮ್ಮ ಪರವಾಗಿದ್ದು, ಊರ್ ಮಂದ್ ಸಾರ್ವಜನಿಕರ ಉಪಯೋಗಕ್ಕೆ ಶೀಘ್ರ ಲಭಿಸಲಿದೆ ಎಂದು ಮಣಿಉತ್ತಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಒತ್ತುವರಿದಾರರ ತೆರವಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಕೊಡಗಿನ ಸಾಂಪ್ರದಾಯಿಕ ಪುತ್ತರಿ ಆಚರಣೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಿಗೆ ಊರ್ ಮಂದ್ ನ್ನು ಬಿಟ್ಟುಕೊಡಬೇಕೆಂದು ಒತ್ತಾಯಿಸಿದರು. ಇದೇ ರೀತಿ ಜಿಲ್ಲೆಯ ವಿವಿಧೆಡೆ ಊರ್ ಮಂದ್ ಗಳು ಒತ್ತುವರಿಯಾಗಿದ್ದು, ಇವುಗಳ ಮಾಹಿತಿ ಪಡೆದು ತೆರವಿಗಾಗಿ ಹೋರಾಟ ನಡೆಸುವುದಾಗಿ ಮಣಿ ಉತ್ತಪ್ಪ ತಿಳಿಸಿದರು.