ಮಡಿಕೇರಿ ಡಿ.21 NEWS DESK : ತುಳು ಭಾಷಿಕ ಆದಿ ದ್ರಾವಿಡ ಪರಿಶಿಷ್ಟ ಜಾತಿ ಬಾಂಧವರ ಬೇಡಿಕೆಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ತುಳು ಭಾಷಿಕ ಆದಿ ದ್ರಾವಿಡ ಸಮುದಾಯದವರಿಗೆ 8 ವಿವಿಧ ರೀತಿಯ `ಪರಿಶಿಷ್ಟ ಜಾತಿ’ ಪ್ರಮಾಣ ಪತ್ರವನ್ನು ನೀಡಲಾಗುತ್ತಿದ್ದು, ಇದರಿಂದ ತೊಂದರೆ ಎದುರಾಗಿದೆ ಎಂದು ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಹೆಚ್.ಎಂ.ಸೋಮಪ್ಪ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗು ಜಿಲ್ಲೆಯಲ್ಲಿ ಸುಮಾರು 30 ಸಾವಿರ ಮಂದಿ ತುಳು ಭಾಷಿಕ ಆದಿ ದ್ರಾವಿಡ ಪರಿಶಿಷ್ಟ ಜಾತಿ ಜನರಿದ್ದಾರೆ. “ಆದಿ ದ್ರಾವಿಡ” ಪರಿಶಿಷ್ಟ ಜಾತಿ ಎಂದು ಜಾತಿ ಪ್ರಮಾಣಪತ್ರ ನೀಡಲು ಸರಕಾರದ ಕ್ರಮ ಕೈಗೊಳ್ಳಬೇಕೆಂದು ಕಳೆದ ಅನೇಕ ವರ್ಷಗಳಿಂದ ಸಂಘಟನೆ ಮೂಲಕ ಒತ್ತಾಯಿಸುತ್ತಾ ಬರಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸರಕಾರ ನಿರ್ದೇಶನ ನೀಡಿದೆ. ಜಿಲ್ಲಾಡಳಿತ ತಾಲ್ಲೂಕು ಕಚೇರಿಗಳಿಗೆ ಆದೇಶ ಮಾಡಿ “ಆದಿ ದ್ರಾವಿಡ” ಎಂದು ಜಾತಿ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದೆ. ಆದರೆ ಕೊಡಗು ಜಿಲ್ಲೆಯಲ್ಲಿರುವ ತುಳು ಭಾಷಿಕ ಆದಿ ದ್ರಾವಿಡ ಜನಾಂಗ ಬಾಂಧವರಿಗೆ ಇಲ್ಲಿಯವರೆಗೆ “ಆದಿ ದ್ರಾವಿಡ” ಪರಿಶಿಷ್ಟ ಜಾತಿ ಎಂದು ಜಾತಿ ಪ್ರಮಾಣಪತ್ರ ದೊರೆತ್ತಿಲ್ಲ ಎಂದು ಆರೋಪಿಸಿದರು. ಕೊಡಗು ಸೇರಿದಂತೆ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಕುಂದಾಪುರ ಸೇರಿದಂತೆ ಇತರ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 12 ಲಕ್ಷ ಆದಿದ್ರಾವಿಡ ಸಮುದಾಯದ ಜನ ಇದ್ದು, `ಆದಿ ದ್ರಾವಿಡ’ ಸಮೂಹ ಜಾತಿ ಪ್ರಮಾಣ ಪತ್ರದ ವಿಚಾರದಲ್ಲಿ ಗೊಂದಲಕ್ಕೆ ಸಿಲುಕಿದೆ. ಏಕರೂಪದ `ಆದಿ ದ್ರಾವಿಡ’ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡುವ ಮೂಲಕ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ 8 ವಿವಿಧ ರೀತಿಯ `ಪರಿಶಿಷ್ಟ ಜಾತಿ’ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ. ತಪ್ಪಾಗಿ ಜಾತಿ ನಮೂದು ಮಾಡುತ್ತಿರುವುದರಿಂದ ಆದಿದ್ರಾವಿಡ ಜನಾಂಗದ ಮಕ್ಕಳಿಗೆ ಶಾಲೆಗಳಲ್ಲಿ ಸರಕಾರದ ಸೌಲಭ್ಯಗಳು ದೊರೆಯುತ್ತಿಲ್ಲ. ವಿವಾಹ ಸಂಬಂಧಗಳಿಗೆ ತುಂಬಾ ತೊಂದರೆಯಾಗುತ್ತಿದೆ ಮತ್ತು ಆದಿದ್ರಾವಿಡ ಸಮುದಾಯ ಸೌಲಭ್ಯದಿಂದ ವಂಚಿತವಾಗುತ್ತಿದೆ. ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆದಿ ದ್ರಾವಿಡ ಸಮೂಹಕ್ಕೆ ಸಮರ್ಪಕವಾಗಿ `ಆದಿ ದ್ರಾವಿಡ’ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಿಂದ ಕೆಲಸ ಅರಸಿಕೊಂಡು ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಿಗೆ ಬಂದು ನೆಲೆಸಿರುವ ಆದಿ ದ್ರಾವಿಡ ಸಮುದಾಯಕ್ಕೆ ತಪ್ಪಾಗಿ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ. ಸರಕಾರ ಹಾಗೂ ಜನಪ್ರತಿನಿಧಿಗಳು ನೀಡುತ್ತಿರುವ ಭರವಸೆಗಳು ಯಾವುದೂ ಈಡೇರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕೇವಲ ಚುನಾವಣೆ ಸಂದರ್ಭ ಮತಗಳಿಕೆಗಾಗಿ ಮಾತ್ರ ಆದಿ ದ್ರಾವಿಡ ಜನಾಂಗವನ್ನು ಬಳಸಿಕೊಳ್ಳಲಾಗುತ್ತಿದೆ. ಆದಿದ್ರಾವಿಡ ಸಮುದಾಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದಾಗ ಮಧ್ಯ ಪ್ರವೇಶಿಸಿದ ಹಿರಿಯ ಅಧಿಕಾರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ ಮತದಾನ ಮಾಡುವಂತೆ ಮನವೊಲಿಸಿದ್ದರು. ಅಧಿಕಾರಿಗಳ ಭರವಸೆಗೆ ಗೌರವ ನೀಡಿ ನಾವು ಮತದಾನದಲ್ಲಿ ಪಾಲ್ಗೊಂಡಿದ್ದೆವು. ಆದರೆ ಲೋಕಸಭಾ ಚುನಾವಣೆ ಕಳೆದ ಹಲವು ತಿಂಗಳುಗಳೇ ಕಳೆದರೂ ಇಲ್ಲಿಯವರೆಗೆ ನಮ್ಮ ಬೇಡಿಕೆಗೆ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಆದ್ದರಿಂದ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದೇವೆ ಎಂದು ಹೆಚ್.ಎಂ.ಸೋಮಪ್ಪ ತಿಳಿಸಿದರು.
::: ನಿವೇಶನ ನೀಡಿ ::: ಕೊಡಗು ಜಿಲ್ಲೆಯಲ್ಲಿರುವ ಆದಿದ್ರಾವಿಡ ಸಮುದಾಯದ ಮಂದಿ ಇಂದಿಗೂ ಲೈನ್ ಮನೆಗಳಲ್ಲಿ ಸಂಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಸರಕಾರ ತಕ್ಷಣ ಸ್ವಂತ ಸೂರು ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
::: ಖಂಡನೆ ::: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ ನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಅಗೌರವದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ ಅವರು, ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು. ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಂಘದ ರಾಜ್ಯ ಕಾರ್ಯಾಧ್ಯಕ್ಷ ರಾಮ್‍ಕುಮಾರ್ ಪಿ. ಮಾತನಾಡಿ ಪರಿಶಿಷ್ಟ ಜಾತಿವಾರು ಪಟ್ಟಿಗಳ ಉಪ ಜಾತಿ ಆದಿ ದ್ರಾವಿಡ (ತುಳು ಭಾಷಿಕ)ರಿಗೆ ಮೀಸಲಾತಿ ವರ್ಗೀಕರಣ ಅನುಪಾತದಡಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಹಂಚಿಕೆ ಮಾಡಬೇಕು. ನಿಷೇಧಿತ, ನಿಂದನಾತ್ಮಕ, ಬೈಗುಳ ಪದ “ಮನ್ಸ” ಜಾತಿಯನ್ನು ಜಾತಿವಾರು ಪಟ್ಟಿಯಲ್ಲಿ ಸೇರ್ಪಡೆ ಗೊಳಿಸಬಾರದು ಎಂದು ಒತ್ತಾಯಿಸಿದರು. ಆದಿದ್ರಾವಿಡ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿರುವ ಮೂಡಬಿದ್ರೆಯ ಆದಿದ್ರಾವಿಡ ಸಮಾಜದ ಬೆರಳೆಣಿಕೆಯಷ್ಟು ಮಂದಿ ಆದಿದ್ರಾವಿಡರನ್ನು “ಮನ್ಸ” ಜಾತಿಯ ಪಟ್ಟಿಗೆ ಸೇರಿಸಲು ಹುನ್ನಾರ ನಡೆಸುತ್ತಿದ್ದಾರೆ. ಇದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ, ಸರಕಾರ ಈ ವಿಚಾರದಲ್ಲಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯಬಾರದು ಮತ್ತು ಆದಿದ್ರಾವಿಡರನ್ನು “ಮನ್ಸ” ಜಾತಿ ಪಟ್ಟಿಗೆ ಸೇರ್ಪಡೆಗೊಳಿಸಬಾರದು ಎಂದರು.
ರಾಜ್ಯದ ಎಲ್ಲಾ ಜಿಲ್ಲೆಗಳ ಆದಿದ್ರಾವಿಡರು “ಮನ್ಸ” ಜಾತಿ ಪಟ್ಟಿಗೆ ಸೇರ್ಪಡೆಗೊಳ್ಳುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಕೆಲವೇ ಕೆಲವು ಮಂದಿ ಮಾತ್ರ ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಆದಿದ್ರಾವಿಡ ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪರಿಶಿಷ್ಟರಿಗೆ ಮೀಸಲಿರುವ ಮೀಸಲಾತಿಯಲ್ಲಿ ಕೇವಲ ಶೇ.1 ರಷ್ಟು ಮಾತ್ರ ಆದಿದ್ರಾವಿಡ ಸಮುದಾಯದ ಪಾಲಾಗುತ್ತಿದೆ. ಇಷ್ಟು ಸಣ್ಣ ಪ್ರಮಾಣದ ಮೀಸಲಾತಿಯಿಂದ ನಮ್ಮ ಸಮುದಾಯದ ಅಭ್ಯುದಯ ಸಾಧ್ಯವೇ ಎಂದು ಪ್ರಶ್ನಿಸಿದ ರಾಮ್‍ಕುಮಾರ್, ಮೀಸಲಾತಿಯ ಪ್ರಮಾಣವನ್ನು ಶೇ.50ರಿಂದ ಶೇ.69ಕ್ಕೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಗೌರವಾಧ್ಯಕ್ಷ ಬಿ.ಶಂಕರ್, ಜಿಲ್ಲಾ ಉಪಾಧ್ಯಕ್ಷ ಪಿ.ಎಲ್.ಸುರೇಶ್, ವಿರಾಜಪೇಟೆ ತಾಲ್ಲೂಕು ಕಾರ್ಯದರ್ಶಿ ಎ.ಲಲಿತ, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಪಿ.ಟಿ.ರವಿ ಪಾಪು ಹಾಗೂ ಪ್ರಮುಖರಾದ ಜಯೇಂದ್ರ ಕೋಟ್ಯಾನ್ ಉಪಸ್ಥಿತರಿದ್ದರು.
Breaking News
- *ಜ.26 ರಂದು ಕೂಡಿಗೆಯಲ್ಲಿ ಮಾನವ ಸರಪಳಿ ಹಾಗೂ ಸೌಹಾರ್ದ ಸಮ್ಮೇಳನ*
- *ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಮೂರ್ನಾಡು ಭಾರತೀಯ ನೃತ್ಯಕಲಾ ಶಾಲೆಯ ವಿದ್ಯಾರ್ಥಿಗಳ ಸಾಧನೆ*
- *ಕಟ್ಟೆಮಾಡು ಪ್ರಕರಣ : ಉಸ್ತುವಾರಿ ಸಚಿವರು, ಶಾಸಕರುಗಳು ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಲಿ*
- *ವಸತಿ ಸಚಿವರನ್ನು ಭೇಟಿ ಮಾಡಿದ ಅಲ್ಪಸಂಖ್ಯಾತ ಮುಖಂಡರು : ಮೂಲ ಸೌಕರ್ಯಗಳ ಕುರಿತು ಚರ್ಚೆ*
- *ಎಂ.ಎಂ.ಸುಪ್ರಿತಾಗೆ ಚಿನ್ನದ ಪದಕ*
- *ಜ.25 ರಂದು ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ*
- *ಸುಂಟಿಕೊಪ್ಪ : ಸಾರ್ವಜನಿಕರು ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಿ : ಎ.ಲೋಕೇಶ್ ಕುಮಾರ್*
- *ಮಡಿಕೇರಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ ಆಚರಣೆ*
- *ಮಡಿಕೇರಿಯಲ್ಲಿ ಪರಾಕ್ರಮ್ ದಿವಸ್ ಆಚರಣೆ : ಪರೀಕ್ಷಾ ಪೇ ಚರ್ಚಾ 9ನೇ ಆವೃತ್ತಿ*
- *ಕಳೆದು ಹೋಗಿದೆ*